ಮಂಗಳೂರಿನಲ್ಲಿ ಮಹಾ ವಂಚನೆ: ED ಹೆಸರಿನಲ್ಲಿ 30 ಲಕ್ಷ ರೂಪಾಯಿ ದೋಚಿದ ಖದೀಮರು
ಮಂಗಳೂರು, ಜನವರಿ 04: ಇತ್ತೀಚಿಗೆ ವಂಚಕರು ಯಾರಿಗೆ? ಯಾವ ರೀತಿ? ಹೇಗೆ? ವಂಚಿಸುತ್ತಾರೆ ಅಂತಾನೇ ಗೊತ್ತಾಗುವುದಿಲ್ಲ. ಒಂದೆಡೆ ಆನ್ ಲೈನ್‌ನಲ್ಲಿ ಸೈಬರ್ ವಂಚಕರ ಜಾಲ ಬಾಯ್ತೆರೆದು ಕುಳಿತುಕೊಂಡಿದ್ದರೆ. ಇನ್ನೊಂದೆಡೆ ಆಫ್ ಲೈನ್‌ನಲ್ಲೂ ವಂಚನೆ ಮಾಡುವವರ ಸಂಖ್ಯೆ ಕಮ್ಮಿ ಇಲ್ಲ. ಆಫ್ ಲೈನ್ ಅಂದರೆ ಮಾತಿನ ಮೂಲಕ ನೇರಾನೇರವಾಗಿ ವಂಚಿಸಿ ಹಣ ದೋಚುವವರ ಸಂಖ್ಯೆ ಕೂಡ ಹೆಚ್ಚಾಗಿದೆ.
ಮೊದಲೆಲ್ಲಾ ಬೇರೆ ಬೇರೆ ಸೋಗಿನಲ್ಲಿ ಬಂದು ಅಮಾಯಕರನ್ನು ವಂಚಿಸುತ್ತಿದ್ದ ವಂಚಕರು ಈಗ ಸರ್ಕಾರದ ಸಂಸ್ಥೆಗಳನ್ನೇ ತಮ್ಮ ಅಸ್ತ್ರ ಮಾಡಿಕೊಂಡಿದ್ದಾರೆ. ಹೌದು, ನಾವು ಲೋಕಾಯುಕ್ತರು, ನಾವು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂದು ಉದ್ಯಮಿಗಳ ಮನೆಗೆ ನುಗ್ಗಿ, ಖದೀಮರು ಲಕ್ಷ ಲಕ್ಷ ದೋಚುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಇಂತಹದ್ದೇ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದ್ದು, ಖದೀಮರ ತಂಡವೊಂದು ಒಂದಲ್ಲ..ಎರಡಲ್ಲ ಬರೋಬ್ಬರಿ ಮೂವತ್ತು ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿ ಮನೆ ಮೇಲೆ ದಾಳಿ ಮಾಡಿದ ಖದೀಮರು, 30 ಲಕ್ಷ ರೂಪಾಯಿ ದೋಚಿ ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಘಟನೆ ನಡೆದಿದೆ. ನಾರ್ಶ ಗ್ರಾಮದ ಸುಲೈಮಾನ್ ಹಾಜಿ ಅವರ ಮನೆಯಲ್ಲಿ ಈ ಘಟನೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸುಲೈಮಾನ್ ಹಾಜಿ ಎನ್ನುವವರು ಸಿಂಗಾರಿ ಬೀಡಿ ಎಂಬ ಹೆಸರಿನ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದರು. ಇವರ ಉದ್ಯಮದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದ ತಮಿಳುನಾಡು ಮೂಲದ ಖದೀಮರ ತಂಡ, ನಿನ್ನೆ ತಡರಾತ್ರಿ ಸುಲೈಮಾನ್ ಹಾಜಿ ಅವರ ಮನೆಗೆ ಬಂದಿದ್ದಾರೆ. ಸರ್ಕಾರಿ ಅಧಿಕಾರಿಗಳಂತೆ ಬಟ್ಟೆ ಧರಿಸಿ ಕಾರಿನಲ್ಲಿ ಬಂದ ವಂಚಕರು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂದು ಮನೆಯವರನ್ನು ನಂಬಿಸಿದ್ದಾರೆ. ಸುಮಾರು ಎರಡು ಗಂಟೆಗಳವರೆಗೆ ಮನೆ ಪರಿಶೀಲನೆ ನಡೆಸಿದ ಆರೋಪಿಗಳು ಮನೆಯಲ್ಲಿದ್ದ ಸುಮಾರು 30 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.
ಸುಲೈಮಾನ್ ಹಾಜಿ ಅವರಿಗೆ ತಾವು ಮೋಸ ಹೋಗಿರುವುದು ತಿಳಿದು ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ದರೋಡೆಯಾದ ಮನೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications