• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸತನದ ಹುಡುಕಾಟ ಇಂದಿನ ಅಗತ್ಯತೆ: ಡಾ.ಮೋಹನ್ ಆಳ್ವ ಸಂದರ್ಶನ

By ಗೌರಿ ಎಸ್.ಜೋಶಿ,ಪತ್ರಿಕೋದ್ಯಮ ವಿಭಾಗ, ಆಳ್ವ
|

ಕನ್ನಡ ಭಾಷೆ ಬೆಳೆಸುವ, ಕಟ್ಟುವ ಕಾರ್ಯಗಳನ್ನು ಕೇವಲ ಸರ್ಕಾರ, ಅಕಾಡೆಮಿಗಳೇ ಏಕೆ ಮಾಡಬೇಕು? ಈ ಕೈಂಕರ್ಯ ಒಬ್ಬ ಶ್ರೀಸಾಮಾನ್ಯನಿಂದ ಏಕೆ ಆಗಬಾರದು?' ಎಂಬ ಆಶಯದೊಂದಿಗೆ ಆರಂಭವಾದ ಕನ್ನಡದ ಹಬ್ಬ'ಆಳ್ವಾಸ್ ನುಡಿಸಿರಿ'. ಈ ಕನ್ನಡ ಉತ್ಸವದ ರೂವಾರಿ 'ಸಂಸ್ಕೃತಿಯ ಹರಿಕಾರ' ಎಂದೇ ಖ್ಯಾತರಾದ ಡಾ.ಎಂ. ಮೋಹನ್ ಆಳ್ವರು.'ಕರ್ನಾಟಕ: ಹೊಸತನದ ಹುಡುಕಾಟ' ಎಂಬ ಮುಖ್ಯ ಪರಿಕಲ್ಪನೆ ಅಡಿಯಲ್ಲಿ ಈ ಸಲದ ನುಡಿಸಿರಿ ಆಯೋಜಿಸಿದ್ದಾರೆ. ಹೊಸತನ ಎಂದರೇನು, ಹೊಸತನದಡಿಯಲ್ಲಿ ನುಡಿಸಿರಿಯ ಆಯಾಮಗಳೇನು ಎಂಬುದರ ಕುರಿತು ಅವರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದು ಹೀಗೆ.....

1. 'ಆಳ್ವಾಸ್ ನುಡಿಸಿರಿ'ಯಲ್ಲಿ ಮೊದಲಿನಿಂದಲೂ 'ಕನ್ನಡದ ಮನಸ್ಸು' ಎಂಬ ಪರಿಕಲ್ಪನೆ ಇತ್ತು. ಈ ಬಾರಿ 'ಕರ್ನಾಟಕ: ಹೊಸತನದ ಹುಡುಕಾಟ' ಎಂದು ಬದಲಾಯಿಸಿದ್ದೀರಿ. ಈ ಬದಲಾವಣೆ ಹಿನ್ನೆಲೆಯೇನು?

ನಮ್ಮ ಬದುಕು, ಸಂಸ್ಕೃತಿ ನಿಂತ ನೀರಾಗಬಾರದು. ನಾವು ಎಂದಿಗೂ ಹೊಸತನದ ಹುಡುಕಾಟದಲ್ಲಿರಬೇಕು. ಇಲ್ಲದಿದ್ದರೆ ನಾವು ಸವಕಲು ನಾಣ್ಯಗಳಾಗುತ್ತೇವೆ. ಹೊಸತನದೊಟ್ಟಿಗೆ ಹೋದಾಗ ಮಾತ್ರ ನಾವು ಚಲಾವಣೆಯಲ್ಲಿರುವ ನಾಣ್ಯಗಳಾಗುತ್ತೇವೆ. ಹೊಸತನದ ಹುಡುಕಾಟ ಇಂದಿನ ಅಗತ್ಯತೆ. ಕಾಲಕ್ಕೆ ಸರಿಯಾಗಿ ನಾವು ಸ್ಪಂದಿಸಬೇಕು ಹಾಗೂ ಅತ್ಯಂತ ಅವಶ್ಯಕವೂ ಹೌದು. ಈ ದೃಷ್ಟಿಯಲ್ಲಿ ನಾವು ನುಡಿಸಿರಿಯ ಕೇಂದ್ರ ವಿಷಯವನ್ನು `ಕರ್ನಾಟಕ: ಹೊಸತನದ ಹುಡುಕಾಟ' ಎಂದು ಬದಲಾಯಿಸಿದ್ದೇವೆ.

2. ಕನ್ನಡ ಎಂದರೆ ಅದು ಕೇವಲ ಸಾಹಿತ್ಯಕ್ಕೆ, ಸಾಹಿತಿಗಳಿಗೆ ಮಾತ್ರ ಸೀಮಿತವಲ್ಲ. ಒಟ್ಟಾರೆಯಾಗಿ ಕನ್ನಡ ಭಾಷೆ, ಕಲೆ, ಜಾನಪದಕ್ಕೆ ಸಂಬಂಧಿಸಿದ್ದು ಎಂಬುದು ನಿಮ್ಮ ಅಭಿಪ್ರಾಯ. ಇದರ ಬಗ್ಗೆ....

ಭಾಷೆ, ಸಾಹಿತ್ಯ, ಸಂಸ್ಕೃತಿಗಳು ಬಹು ಮುಖ್ಯವಾದವು. ಒಂದು ಭಾಷೆ ಬರೀ ಸಾಹಿತ್ಯ ಅಥವಾ ಸಂಸ್ಕೃತಿಯೊಂದಿಗೆ ಮಾತ್ರ ಬೆಸೆದುಕೊಳ್ಳಬಾರದು. ಅದು ಯಾವಾಗಲೂ ಜನಾನುರಾಗಿಯಾಗಿರಬೇಕು. ಸಾಮಾನ್ಯವಾಗಿ ಸಾಹಿತ್ಯ ಸಾಹಿತಿಗಳ ಕೈಯಲ್ಲಿ, ಸಂಸ್ಕೃತಿ ಕಲಾವಿದರ ಕೈಯಲ್ಲಿರುತ್ತದೆ. ಆದರೆ ಇದು ಒಳ್ಳೆಯದಲ್ಲ. ಭಾಷೆ ಯಾವಾಗಲೂ ಸಾಹಿತ್ಯ, ಸಂಸ್ಕೃತಿಯನ್ನು ಒಟ್ಟುಗೂಡಿಸಿಕೊಂಡು ಶ್ರೀಸಾಮಾನ್ಯನನ್ನು ತಲುಪಬೇಕು. ಹಾಗೆ ಅದು ಆಡುಭಾಷೆಯಾಗಿ ಬೆಳೆಯಬೇಕು. ಈ ದೃಷ್ಟಿಯಲ್ಲಿ ನಾವು ನುಡಿಸಿರಿಯಲ್ಲಿ ಶ್ರೀಸಾಮಾನ್ಯನನ್ನು ತಲುಪುವ ಉದ್ದೇಶದಿಂದ ವಿಭಿನ್ನವಾಗಿ ಕಾರ್ಯಕ್ರಮ ಆಯೋಜಿಸಿಕೊಂಡು ಹೋಗಿದ್ದೇವೆ. ಎಲ್ಲಾ ವರ್ಗದವರನ್ನು ಒಟ್ಟುಗೂಡಿಸಿಕೊಂಡು ಕಾರ್ಯಕ್ರಮ ನಡೆಸುತ್ತಿದ್ದೇವೆ. ನಮ್ಮ ನುಡಿಸಿರಿ, ವಿರಾಸತ್ ಹೀಗೆಯೇ ನಡೆಯಬೇಕೆಂದು ನಮ್ಮ ಆಸೆ.[ಕನ್ನಡ ನಾಡು-ನುಡಿ-ಸಂಸ್ಕೃತಿಯ ಮೇರು ಹಬ್ಬ ಆಳ್ವಾಸ್ ನುಡಿಸಿರಿ]

3. ನುಡಿಸಿರಿಯ ಭಾಗವಾಗಿ ತುಳುಸಿರಿ, ಕೊಂಕಣಿಸಿರಿ, ಬ್ಯಾರಿಸಿರಿಯನ್ನೂ ಕೂಡ ಆಯೋಜಿಸಿದ್ದೀರಿ. ಇದರಿಂದ ಒಟ್ಟಂದದಲ್ಲಿ ಒಂದು ಸಂಸ್ಕೃತಿ ಹೇಗೆ ಬೆಳೆಯಬಹುದೆಂದು ನಿಮಗನ್ನಿಸುತ್ತದೆ?

ನಮ್ಮ ದೇಶದಲ್ಲಿ 3000ಕ್ಕೂ ಮಿಕ್ಕಿದ ಭಾಷೆಗಳಿವೆ, ಅದರಲ್ಲಿ 14 ಭಾಷೆಗಳನ್ನು ಪ್ರಮುಖವೆಂದು ಪರಿಗಣಿಸಲಾಗಿದೆ. ಈ ಎಲ್ಲ ಭಾಷೆ-ಸಂಸ್ಕೃತಿಗಳು ಉಳಿಯಬೇಕು, ಬೆಳೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಕರಾವಳಿಯಿಂದ ಒಂದು ಅಳಿಲು ಸೇವೆ ಸಲ್ಲಬೇಕೆಂಬುದು ನಮ್ಮ ಆಶಯ. ಎಲ್ಲಾ ಭಾಷೆಗಳನ್ನು ಮುಖ್ಯವಾಗಿಟ್ಟುಕೊಂಡು ಉತ್ಸವ ಮಾಡದೇ ಹೋದರೂ ಕೊನೆ ಪಕ್ಷ ನಮ್ಮ ಭಾಷೆಗಳನ್ನು ಪ್ರಮುಖವೆಂದು ಪರಿಗಣಿಸಿ ಸೇವೆ ನೀಡಬಹುದು. ಇದೇ ಕಾರಣಕ್ಕೆ ನಾವು ತುಳು, ಬ್ಯಾರಿ, ಕೊಂಕಣಿ, ಕೊಡವ ಭಾಷೆಗಳನ್ನು ಪ್ರಮುಖವಾಗಿರಿಸಿಕೊಂಡು ನುಡಿಸಿರಿಯ ಒಂದು ಭಾಗವಾಗಿ ಕಾರ್ಯಕ್ರಮ ನಡೆಸುತ್ತಿದ್ದೇವೆ. ನಮ್ಮ ಕಾರ್ಯಕ್ರಮದ ಮುಖ್ಯ ಉದ್ದೇಶವೇ ಜನ ನಮ್ಮ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಬೇಕು. ಆ ಮೂಲಕ ಸ್ವಾಭಿಮಾನ ಅವರಲ್ಲಿ ಹುಟ್ಟಬೇಕು ಎಂಬುದಾಗಿದೆ.

4. ನುಡಿಸಿರಿಯಲ್ಲಿ ಜನರನ್ನು ಹೆಚ್ಚು ಆಕರ್ಷಿಸಿದ್ದು, ಇಲ್ಲಿರುವ ವೇದಿಕೆಗಳು. ಪ್ರತಿಸಲವೂ ವಿಭಿನ್ನ ರೀತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೇದಿಕೆಗಳು ನಿರ್ಮಾಣವಾಗುತ್ತವೆ. ಇದರ ಬಗ್ಗೆ ಏನು ಹೇಳುತ್ತೀರಿ?

ನಮ್ಮ ಕನ್ನಡ ಭಾಷೆ ಅನಘ್ರ್ಯ ರತ್ನವಿದ್ದಂತೆ. ನುಡಿಸಿರಿಯ ವೇದಿಕೆ, ಚಪ್ಪರ, ಅದಕ್ಕಾಗಿ ನಿರ್ಮಾಣಗೊಂಡ ದಾರಿಗಳು, ನೂರು ಎಕರೆ ಆವರಣ ಹಾಗೂ ಇಲ್ಲಿ ಪ್ರದರ್ಶನಗೊಳ್ಳುವ ಕಾರ್ಯಕ್ರಮಗಳು ಪ್ರತಿಯೊಂದೂ ಮುಖ್ಯ. ಸುಮಾರು 40-50 ಸಾವಿರ ಜನರೆದುರಿಗೆ ಇವೆಲ್ಲವೂ ತೆರೆದುಕೊಳ್ಳುವಾಗ ಅಲ್ಲಿ ವೈಭವೀಕರಣ ಅಗತ್ಯವೂ ಹೌದು. ಈ ವಿಧದಲ್ಲಿ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ರೀತಿಯಲ್ಲಿ ಕನ್ನಡ ಭಾಷೆಯನ್ನು ಪ್ರಸ್ತುತ ಪಡಿಸಲು ಯತ್ನಿಸುತ್ತೇವೆ.

ಇಲ್ಲಿ ನಾವು ಕೇಂದ್ರೀಕರಿಸುವುದು ಚಿಕ್ಕ ಮಕ್ಕಳು ಹಾಗೂ ಯುವಜನತೆಯನ್ನು. ಚಿಕ್ಕ ಮಕ್ಕಳಲ್ಲಿ ಇನ್ನೂ ಭಾಷೆ-ಸಂಸ್ಕೃತಿಯ ಗಂಭೀರತೆಯ ಅರಿವಿರುವುದಿಲ್ಲ. ಅವರಿಗೆ ಇಷ್ಟವಾಗುವ ಕಾರ್ಯಕ್ರಮಗಳನ್ನಿಟ್ಟು ಅವರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ.[ಮೂಡಬಿದಿರೆ ಕಲಾತ್ಮಕತೆ ಮೆಚ್ಚಿದ ಮನಮೋಹನ್ ಸಿಂಗ್ ಪುತ್ರಿ]

ಇನ್ನು 16 ದಾಟಿದ ಯುವವರ್ಗ ಫ್ಯಾಶನ್ ಕೇಂದ್ರಿತವಾದುದು. ಅವರು ಈ ಫ್ಯಾಶನ್ ಗಾಗಿಯೇ ಕಾರ್ಯಕ್ರಮಕ್ಕೆ ಬರುತ್ತಾರೆ. ಹಾಗೆ ಬಂದವರು ಕನ್ನಡ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುತ್ತಾರೆ. ಹೀಗೆ ಆಬಾಲವೃದ್ಧರಾದಿಯಾಗಿ ನಾನಾ ರೀತಿಯ ಕಲಾವಿದರು, ಕಲಾಸಕ್ತರು, ಸೌಂದರ್ಯಪ್ರಜ್ಞೆ ಇರುವವರನ್ನು ಒಟ್ಟುಗೂಡಿಸಿ ಕಾರ್ಯಕ್ರಮ ಮಾಡುವಾಗ ಎಲ್ಲರನ್ನೂ ತಲುಪಬೇಕಾದುದು ಅತೀ ಅವಶ್ಯ. ಹೀಗಾಗಿ ನಮ್ಮ ಕಾರ್ಯಕ್ರಮಗಳಲ್ಲಿ ವೇದಿಕೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತೇವೆ.

5. ಡಾ.ಆಳ್ವರೇ, ಈ ಸಲದ ನುಡಿಸಿರಿಗೆ ಯಾವ ಬಗೆಯ ಹೊಸ ಸ್ಪರ್ಶ ನೀಡುತ್ತಿದ್ದೀರಿ?

ನುಡಿಸಿರಿಗೆ 12 ವರ್ಷದಿಂದ ಹಾಗೂ ವಿರಾಸತ್ ನೋಡಲು 22 ವರ್ಷದಿಂದ ದೇಶ-ವಿದೇಶದಿಂದ ಜನರು ಆಗಮಿಸುತ್ತಾರೆ. ಹೀಗಿದ್ದಾಗ ಅವರ ನೀರಿಕ್ಷೆಗಳಿಗೆ ತಕ್ಕಂತೆ ನಾವು ಕೆಲಸ ಮಾಡಬೇಕಾಗುತ್ತದೆ. ಈ ಸಲ ನುಡಿಸಿರಿ ನಾಲ್ಕು ದಿನಗಳ ಕಾಲ ನಡೆಯಲಿದೆ. ಸುಮಾರು 30 ಸಾವಿರ ಜನ ಕುಳಿತುಕೊಳ್ಳಬಹುದಾದ ದೊಡ್ಡ ಬಯಲು ರಂಗಮಂದಿರ ನಿರ್ಮಾಣವಾಗಿದೆ. 26ರಂದು ಸಂಜೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ 500 ಜನ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ವಿದ್ಯಾಗಿರಿಯ ಆವರಣದಲ್ಲಿರುವ ಐದು ವೇದಿಕೆಗಳಲ್ಲಿ ಏಕಕಾಲದಲ್ಲಿ ಸಂಜೆ 5 ರಿಂದ 11 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಇದರೊಡನೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಿಚಾರ ಗೋಷ್ಠಿಗಳು ಬೆಳಗ್ಗೆ ನಡೆಯಲಿವೆ. ವಿದ್ಯಾರ್ಥಿಸಿರಿ' 26ರಂದು ಬೆಳಗ್ಗೆಯಿಂದ ಆರಂಭವಾಗಲಿದೆ. ನಮ್ಮ ಮುಖ್ಯ ಪರಿಕಲ್ಪನೆಯಾದ 'ಕರ್ನಾಟಕ: ಹೊಸತನದ ಹುಡುಕಾಟ' ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ವಿಷಯಗಳಲ್ಲಿಯೂ ಹೊಸತನವಿರುವಂತೆ ನೋಡಿಕೊಳ್ಳಲಾಗಿದೆ.

6. ನಿಮ್ಮ ಸಂಸ್ಥೆಯಲ್ಲಿ ನಿರ್ಮಾಣ ಮಾಡಿದ ಮಾದರಿ ಕನ್ನಡ ಶಾಲೆ ನಿಮಗೆ ತೃಪ್ತಿ ನೀಡಿದೆಯೇ? ನಿಮ್ಮ ನಿರೀಕ್ಷೆಯ ಮಟ್ಟ ತಲುಪಿದೆಯೇ?

6 ವರ್ಷಗಳ ಹಿಂದೆ ನಮ್ಮ ಕನ್ನಡ ಶಾಲೆ ಆರಂಭವಾಯಿತು. ಈಗ 650 ಮಕ್ಕಳು ನಮ್ಮ ಶಾಲೆಯಲ್ಲಿ ಓದುತ್ತಿದ್ದಾರೆ. ಬೌದ್ಧಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಕ್ರೀಡೆಯಲ್ಲಿ ನಮ್ಮ ಮಕ್ಕಳೇ ಮುಂದಿದ್ದಾರೆ. ಇಲ್ಲಿನ ಶಿಕ್ಷಕರು ಜಡ್ಡು ಹಿಡಿದ ವಾತಾವರಣದಿಂದ ಹೊರಬಂದು ಉತ್ಸಾಹಿತರಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಶಾಲೆಗೆ 6 ಮತ್ತು 8ನೇ ತರಗತಿಗೆ ಸೇರಲು ಬಂದ ಅರ್ಜಿಗಳ ಸಂಖ್ಯೆ 6000. ಇಂಗ್ಲೀಷ್ ಮಾಧ್ಯಮ ಬಿಟ್ಟು ಕನ್ನಡ ಮಾಧ್ಯಮ ಸೇರಲು ಬಯಸುತ್ತಿದ್ದಾರೆ. ಇದು ನನಗೆ ಸಂತೋಷ, ತೃಪ್ತಿ ನೀಡಿದೆ. ನಮ್ಮ ಕನ್ನಡ ಮಾಧ್ಯಮ ಶಾಲೆ ರಾಜ್ಯದಲ್ಲಿಯೇ ನಂಬರ್ ವನ್ ಎನಿಸಿದೆ.

ಈ ಶಾಲೆಯು ಕನ್ನಡ ಶಾಲೆ ನಡೆಸುವ ಆಡಳಿತ ಮಂಡಳಿ, ಇತರೆ ಕನ್ನಡ ಶಾಲೆಗಳು, ಪಾಲಕರ ಕಣ್ಣನ್ನು ತೆರೆಸಬೇಕಿದೆ. ಇಂದಿನ ಕನ್ನಡ ಶಾಲೆಗಳ ಪರಿಸ್ಥಿತಿ ಗಮನಿಸಿದರೆ ಅವು ಇಂಗ್ಲೀಷ್ ಮಾಧ್ಯಮ, ಸಿಬಿಎಸ್ಸಿ, ಐಸಿಎಸ್ಸಿ ಹಾಗೂ ಎನ್ ಸಿಇಆರ್ ಟಿ ಪಠ್ಯಕ್ರಮದ ಹಾವಳಿಗೆ ಒಳಪಟ್ಟಿವೆ. ಎಲ್ಲಾ ಕನ್ನಡ ಶಾಲೆ ಶಿಕ್ಷಕರು ಇಂದು ಹೊಸತನದ ಹುಡುಕಾಟದಲ್ಲಿ ತೊಡಗಿಕೊಳ್ಳಬೇಕಿದೆ. ಒಂದು ಸಾಮಾನ್ಯ ಕನ್ನಡಶಾಲೆಯ ಗಟ್ಟಿಕರಣಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕಿದೆ.[ಕನ್ನಡದ 10 ಮೇರು ಸಾಧಕರಿಗೆ 'ಆಳ್ವಾಸ್ ನುಡಿಸಿರಿ ಪ್ರಶಸ್ತಿ]

7. ಘಟಕಗಳ ಯಶಸ್ಸಿನ ಬಗ್ಗೆ....

ಕರ್ನಾಟಕದ ವಿವಿಧ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶೀ ವೇದಿಕೆಗಳಲ್ಲಿ ೮೫ ಕ್ಕೂ ಹೆಚ್ಚು ಘಟಕಗಳನ್ನು ನಡೆಸಲಾಗಿದೆ. ಇಂದು ಜನ ನಮ್ಮ ಘಟಕಗಳ ಬಗ್ಗೆ ಆಸಕ್ತಿಯಿಂದ ಕೇಳುತ್ತಿದ್ದಾರೆ, ತಮ್ಮಲ್ಲಿಯೇ ಬಂದು ಕಾರ್ಯಕ್ರಮ ನಡೆಸಿಕೊಡಿ ಎಂದು ವಿನಂತಿಸಿಕೊಳ್ಳುತ್ತಿದ್ದಾರೆ. ಅಥಣಿಯಂತಹ ಊರಿನಲ್ಲಿ ನಮ್ಮ ಕಾರ್ಯಕ್ರಮಕ್ಕೆ 60-70 ಸಾವಿರ ಜನ ಸೇರಿದ್ದಾರೆ. ನಮ್ಮದು ಬೀದಿಗಿಳಿದು ಹೋರಾಟ ಮಾಡುವ ಸಂಘಟನೆ ಅಲ್ಲ, ಬದಲಾಗಿ ಕನ್ನಡ ಮನಸ್ಸುಗಳನ್ನು ಕಟ್ಟುವ ಸಂಘ. ಆಳ್ವಾಸ್ ನುಡಿಸಿರಿ ವಿರಾಸತ್ ಇಡೀ ರಾಜ್ಯದಲ್ಲಿ ಜನಾನುರಾಗಿಯಾಗಲು ಮುಖ್ಯ ಕಾರಣ ಈ ಘಟಕಗಳು.

8. 'ಜನ ಮರುಳೋ ಜಾತ್ರೆ ಮರುಳೋ' ಎಂಬ ಮಾತಿದೆ. ನಿಮ್ಮ ಪ್ರಕಾರ ಯಾರು ಮರುಳರು?

ಇಲ್ಲಿಯವರೆಗೂ ಒಂದು ಬದ್ಧತೆಯಿಂದ ಕಾರ್ಯಕ್ರಮವನ್ನು ಮಾಡುವವರನ್ನು ನೋಡಿದ್ದೇನೆ; ಒಂದು ಸಲ ಕಾರ್ಯಕ್ರಮ ಮಾಡಿ ಕೈಚೆಲ್ಲಿ ಕುಳಿತವರನ್ನೂ ನೋಡಿದ್ದೇನೆ. ಇದೆಲ್ಲವನ್ನೂ ನೋಡಿದಾಗ ಅನಿಸಿದ್ದು ನಾವು ಯಾಕೆ ಬದ್ಧತೆಯಿಂದ ಒಂದು ಕಾರ್ಯಕ್ರಮ ಮಾಡಬಾರದು ಎಂದು. ಯಾಕೆ ಸರ್ಕಾರವೇ ಕನ್ನಡ ಕಾರ್ಯಗಳನ್ನು ಮಾಡಬೇಕು? ಪರಿಷತ್ತು, ಅಕಾಡೆಮಿಗಳೇ ಯಾಕೆ ಸಂಸ್ಕೃತಿ ರಕ್ಷಣೆಯ ಕೆಲಸ ಮಾಡಬೇಕು? ನಮ್ಮಂತಹ ಶ್ರೀಸಾಮಾನ್ಯರೇಕೆ ಈ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಾರದು? ಆದ್ದರಿಂದ ಈ ನಿಟ್ಟಿನಲ್ಲಿ ಯೋಚಿಸಿ ನಮ್ಮ ಶಿಕ್ಷಣಸಂಸ್ಥೆಯಲ್ಲಿ 'ಆಳ್ವಾಸ್ ನುಡಿಸಿರಿ' ಹೆಸರಿನಲ್ಲಿ ಈ ಕನ್ನಡ ಕಟ್ಟುವ ಕಾರ್ಯ ಆರಂಭಿಸಿದೆವು.

ಆಳ್ವಾಸ್ ನಲ್ಲಿ ಕನ್ನಡ-ಸಂಸ್ಕೃತಿಪರ ಕಾರ್ಯಕ್ರಮಗಳು ವರ್ಷವಿಡೀ ದೇವಾಸ್ಥಾನದ ಪೂಜೆಯಂತೆ ನಡೆಯುತ್ತವೆ. ಆಳ್ವಾಸ್ ನುಡಿಸಿರಿ ಒಂದು ದೊಡ್ಡ ಉತ್ಸವದಂತೆ. ಇನ್ನು ಆಳ್ವಾಸ್ ವಿಶ್ವನುಡಿಸಿರಿ-ವಿರಾಸತ್ ಬ್ರಹ್ಮ ಕಲಶೋತ್ಸವದಂತೆ. ಈ ಕಾರ್ಯಕ್ರಮಗಳಿಗೆ ಜನರು ಖಂಡಿತ ಸೇರುತ್ತಾರೆ. ಇಲ್ಲಿ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುವುದಷ್ಟೇ ನನ್ನ ಕೆಲಸ.[ಚಿತ್ರಸುದ್ದಿ :ಪದ್ಮಭೂಷಣ ಕಲಾವಿದೆಗೆ ಅಳ್ವಾಸ್ ಪ್ರಶಸ್ತಿ]

9. ಆಳ್ವಾಸ್ ನುಡಿಸಿರಿಯ ಮುಖ್ಯ ಉದ್ದೇಶ ಕನ್ನಡ ಮನಸ್ಸುಗಳನ್ನು ಕಟ್ಟುವುದಾಗಿದೆ. ಈ ಕೈಂಕರ್ಯದಲ್ಲಿ ನಿಮ್ಮ ಉದ್ದೇಶ ಸಾಧನೆಯಾಗಿದೆಯೇ?

ನೂರಕ್ಕೆ ನೂರರಷ್ಟು ಈ ಕಾರ್ಯ ಯಶ ಕಂಡಿದೆ. ಪ್ರತಿಸಲವೂ ನುಡಿಸಿರಿ ನೋಡಿದ ಪ್ರೇಕ್ಷಕರು ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆಯೆಂದೇ ಹೇಳಿದ್ದಾರೆ. ಅವರು ಹಾಗೆ ಹೇಳುವಾಗ ನುಡಿಸಿರಿ ಇನ್ನೂ ನೂರು ವರ್ಷ ಮುಂದುವರಿದುಕೊಂಡು ಹೋಗಬಹುದು ಎಂಬ ಭರವಸೆ ಮೂಡುತ್ತದೆ. ಈ ನಿಟ್ಟಿನಲ್ಲಿ ಅತ್ಯಂತ ಜಾಗರೂಕರಾಗಿ ನಾವು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದ್ದೇವೆ. ಪ್ರತಿ ಸಲದ ಅಂಕಿ-ಅಂಶಗಳನ್ನು ಗಮನಿಸುವಾಗ ನುಡಿಸಿರಿ-ವಿರಾಸತ್ ಬಗ್ಗೆ ಸಮಾಧಾನ ಇದೆ. ಅದರ ಫಲಿತಾಂಶದ ಬಗ್ಗೆ ಸಂತೃಪ್ತಿಯಿದೆ. ಈ ಕಾರ್ಯಕ್ರಮಗಳನ್ನೇ ಮಾದರಿಯಾಗಿಟ್ಟುಕೊಂಡು ಬೇರೆ ಕಾರ್ಯಕ್ರಮಗಳಾಗುತ್ತಿವೆ ಅದು ನನಗೆ ಸಂತಸ ನೀಡಿದೆ.

10. ನುಡಿಸಿರಿ ಒಂದು ವಿದ್ವತ್ ಪ್ರಪಂಚವನ್ನು ದಾಟಿ ಒಬ್ಬ ಶ್ರೀಸಾಮಾನ್ಯನನ್ನು ತಲುಪಬೇಕೆಂಬುದು ನಿಮ್ಮ ಆಶಯ. ಅದು ಈಡೇರಿದೆಯೇ?

ಖಂಡಿತವಾಗಿಯೂ ಈಡೇರಿದೆ. ನಮ್ಮ ಕಾರ್ಯಕ್ರಮಕ್ಕೆ ವಿದ್ವಜ್ಜನರು, ಶ್ರೀಸಾಮಾನ್ಯರು ಎಲ್ಲರೂ ಬರುತ್ತಾರೆ. ಗಂಭೀರತೆಯಿರದ ಜನರೂ ಸಹ ಬಂದು ಪ್ರೀತಿ, ವಿಶ್ವಾಸದಿಂದ ಕಾರ್ಯಕ್ರಮ ನೋಡುತ್ತಾರೆ. ಇದಕ್ಕೆ ಮತ, ಜಾತಿ, ಭಾಷೆ ಯಾವುದರ ಹಂಗಿಲ್ಲ. ಎಷ್ಟೋ ಸಲ ಕನ್ನಡ ಭಾಷೆ ಬರದವರೂ ಸಹ ಬಂದು ನುಡಿಸಿರಿ ನೋಡಿದ್ದಾರೆ. ಕನ್ನಡ ಭಾಷೆ ನಮ್ಮ ಭಾಷೆ, ನಮ್ಮ ನಾಡಿನ ಭಾಷೆ. ಎಲ್ಲರೂ ಬಂದು ಭಾಗವಹಿಸಿದಾಗ ಮಾತ್ರ ಅದು ಒಂದು ಆಡುಭಾಷೆಯಾಗಲು ಸಾಧ್ಯ.

11. ಈ ಸಲದ ನುಡಿಸಿರಿಯ ಬಗ್ಗೆ ನಿಮ್ಮ ನಿರೀಕ್ಷೆಗಳೇನು?

ಆಬಾಲವೃದ್ಧರಾದಿಯಾಗಿ ಎಲ್ಲರೂ ಆಳ್ವಾಸ್ ನುಡಿಸಿರಿಗೆ ಬರಬೇಕು. 5000 ಜನ ಈಗಾಗಲೇ ನೋಂದಾವಣೆ ಮಾಡಿಕೊಂಡಾಗಿದೆ. ನಮಗೆ ನೂರು ರೂಪಾಯಿ ಮುಖ್ಯವಲ್ಲ. ಆದರೆ ಅದನ್ನು ಕಳಿಸುವ ಜನರ ಪ್ರೀತಿ ವಿಶ್ವಾಸ ಮುಖ್ಯವಾದುದು. ಕಾರ್ಯಕ್ರಮಕ್ಕೆ 4500 ವಿದ್ಯಾರ್ಥಿಗಳು ಬರುವ ನಿರೀಕ್ಷೆಯಿದೆ. ನಿತ್ಯವೂ ಇಪ್ಪತ್ತರಿಂದ ಮೂವತ್ತು ಸಾವಿರ ಜನ ಸೇರಲಿದ್ದಾರೆ. ಪೂರ್ವ ತಯಾರಿಗಳು ಈಗಾಗಲೇ ಮುಗಿದಿವೆ. ಕಾರ್ಯಕ್ರಮ ಚೆನ್ನಾಗಿ ಮೂಡಿಬರಲಿದೆ.

ಇದು 'ಮೂಡುಬಿದಿರೆಯ ಕನಸುಗಾರ' ಡಾ.ಎಂ.ಮೋಹನ್ ಆಳ್ವರ ಮನದಾಳದ ಮಾತುಗಳು. ಕನ್ನಡ ರಕ್ಷಣೆ ಒಬ್ಬ ಶ್ರೀಸಾಮಾನ್ಯನ ಹೊಣೆ ಎಂಬುದು ಅವರ ಖಚಿತ ನುಡಿ. ಒಳ್ಳೆಯ ಆಶಯಗಳನ್ನಿಟ್ಟುಕೊಂಡು ನಡೆಯುತ್ತಿರುವ 'ಆಳ್ವಾಸ್ ನುಡಿಸಿರಿ' ಯಶಸ್ಸು ಕಾಣಲೆಂಬುದು ನಮ್ಮ ಆಶಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Exclusive Interview: Mohan Alva, Director of Alvas Nudisiri, Moodabidri. Alva's Nudisiri programme starts on November 26 to 29 in Vidyagiri, Moodabidri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more