ಮಂಗಳೂರು: ಖಾಸಗಿ ಬಸ್‌ನಿಂದ ಆಯತಪ್ಪಿ ಕೆಳಗೆ ಬಿದ್ದು ವೃದ್ಧೆ ಸಾವು
ಮಂಗಳೂರು, ಫೆಬ್ರವರಿ 09: ಬಸ್‌ನ ಒಳಗಿದ್ದ ವೃದ್ಧೆಯೊಬ್ಬರು ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಮಾಣಿ ಎಂಬಲ್ಲಿ ನಡೆದಿದೆ. ಉಪ್ಪಿನಂಗಡಿ ನಿನ್ನಿಕಲ್ಲು ನಿವಾಸಿ ರಾಧಾ(66) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಮೃತ ರಾಧಾ ಜನವರಿ 31ರಂದು ಉಪ್ಪಿನಂಗಡಿಯಿಂದ ಖಾಸಗಿ ಬಸ್‌ನಲ್ಲಿ ತೆರಳುತ್ತಿದ್ದರು. ಸೀಟ್‌ನಲ್ಲಿ ಕುಳಿತಿದ್ದ ರಾಧ ಅವರು ಮಗು ಹಿಡಿದು ಸೀಟು ಪಕ್ಕವೇ ನಿಂತಿದ್ದ ಮತ್ತೋರ್ವ ಮಹಿಳೆಗೆ ಸೀಟು ಬಿಟ್ಟು ಕೊಟ್ಟು ಎದ್ದು ಬಂದಿದ್ದರು. ಈ ವೇಳೆ ಬಸ್ ವೇಗವಾಗಿ ಚಲಿಸುತ್ತಿದ್ದು, ಮಹಿಳೆ ಮೇಲಿನ ಕಂಬ ಹಿಡಿದುಕೊಳ್ಳುವಷ್ಟರಲ್ಲಿ ಆಯತಪ್ಪಿ ಬಸ್‌ನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದರು.

ಕೂಡಲೇ ಬಸ್ ನಿಲ್ಲಿಸಿ ಸ್ಥಳೀಯರ ಸಹಾಯದಿಂದ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ವೃದ್ಧೆಯನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ರಾಧಾ ಮೃತಪಟ್ಟಿದ್ದಾರೆ. ವೃದ್ಧೆ ಸಾವು ಹಿನ್ನೆಲೆಯಲ್ಲಿ ಖಾಸಗಿ ಬಸ್‌ನ ಬಸ್ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಜನವರಿ 31ರಂದು ಘಟನೆ ನಡೆದ ಸನ್ನಿವೇಶ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯ: ಬಸ್‌ನಿಂದ ಹೊರಬಿದ್ದು ನಿರ್ವಾಹಕ ಸಾವು
ಇನ್ನು ಮಂಗಳೂರಿನಲ್ಲಿ ಖಾಸಗಿ ಬಸ್ ಚಾಲಕನ ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆಯಿಂದ, ನಿರ್ವಾಹಕ ಬಸ್‌ನಿಂದ ಹೊರಬಿದ್ದು ಮೃತಪಟ್ಟ ಘಟನೆ ಈ ಹಿಂದೆ ನಡೆದಿತ್ತು. ಮಂಗಳೂರಿನ ನಂತೂರು ವೃತ್ತದ ಸಮೀಪ ಬಸ್‌ನಿಂದ ಹೊರ ಬಿದ್ದು, ಈರಯ್ಯ(23) ಎನ್ನುವ ನಿರ್ವಾಹಕ ಸಾವನ್ನಪ್ಪಿದ್ದರು.
ಮೂಲತಃ ಬಾಗಲಕೋಟೆ ಜಿಲ್ಲೆಯವರಾಗಿದ್ದ ಈರಯ್ಯ ಖಾಸಗಿ ಸಿಟಿ ಬಸ್ ನಿರ್ವಾಹಕರಾಗಿದ್ದರು. ಬಸ್ ಕೆಪಿಟಿಯಿಂದ ಆಗಮಿಸಿ ನಂತೂರು ವೃತ್ತದಲ್ಲಿ ವೇಗದಲ್ಲಿ ತಿರುವು ಪಡೆದಾಗ ಬಸ್ ಮುಂಭಾಗದ ಬಾಗಿಲಲ್ಲಿ ನಿಂತಿದ್ದ ಕಂಡಕ್ಟರ್ ಹೊರಗೆ ಬಿದ್ದಿದ್ದಾರೆ. ಬಿದ್ದಿರುವ ರಭಸಕ್ಕೆ ಯುವಕನ ತಲೆಗೆ ಗಂಭೀರ ಗಾಯವಾಗಿತ್ತು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಈರಯ್ಯ ಸಾವನ್ನಪ್ಪಿದ್ದರು.
ಘಟನೆಯ ದೃಶ್ಯ ಸಿಗ್ನಲ್‌ನಲ್ಲಿ ನಿಂತಿದ್ದ ಕಾರ್‌ನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಘಟನೆಗೆ ಬಸ್‌ನ ಅತಿಯಾದ ವೇಗವೇ ಕಾರಣ ಎಂದು ಪೊಲೀಸರು ಕದ್ರಿ ಸಂಚಾರಿ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.












Click it and Unblock the Notifications