ಕಡಬದಲ್ಲಿ ಪಾನಮತ್ತರಾದ ಸೈನಿಕರಿಂದ ಪೊಲೀಸರ ಮೇಲೆ ದಾಳಿ
ಮಂಗಳೂರು, ಅಕ್ಟೋಬರ್. 01: ಪಾನಮತ್ತ ಸೈನಿಕರಿಬ್ಬರು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ದಾಂಧಲೆ ನಡೆಸಿದ ಘಟನೆ ಕಳೆದ ರಾತ್ರಿ ಭಾನುವಾರ (ಸೆಪ್ಟೆಂಬರ್.31) ಪುತ್ತೂರು ತಾಲೂಕಿನ ಕಡಬ ಎಂಬಲ್ಲಿ ನಡೆದಿದೆ.
ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕಡಬ ಠಾಣಾ ಉಪ ನಿರೀಕ್ಷಕ ಪ್ರಕಾಶ್ ದೇವಾಡಿಗ, ಸಿಬ್ಬಂದಿಗಳಾದ ಪುಟ್ಟಸ್ವಾಮಿ, ಶಿವಪ್ರಸಾದ್, ಶ್ರೀಶೈಲ, ಗೃಹರಕ್ಷಕ ದಳದ ಸಿಬ್ಬಂದಿ ಯೊಗೀಶ್,ಸುಬ್ರಹ್ಮಣ್ಯ - ಧರ್ಮಸ್ಥಳ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಚಾಕೋಟೆಕೆರೆ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು.
ಈ ವೇಳೆ ಬೈಕ್ ನಲ್ಲಿ ಪಾನಮತ್ತರಾಗಿ ಬಂದ ಯುವಕರ ತಂಡವನ್ನು ಪೊಲೀಸರು ತಡೆದು ತಪಾಸಣೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಪಾನಮತ್ತರಾದ ಯುವಕರ ತಂಡ ಏಕಾಏಕಿ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸ್ ವಾಹನದ ಗಾಜನ್ನು ಪುಡಿಗೈದು ಹಾನಿಗೊಳಿಸಿದ್ದು, ಮದ್ಯಪಾನ ತಪಾಸಣೆಯ ಸಲಕರಣೆಯನ್ನು ಧ್ವಂಸಗೈದಿದ್ದಾರೆ.

ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಪುಟ್ಟಸ್ವಾಮಿಯವರ ಹಲ್ಲು ಹಾಗೂ ಶ್ರೀಶೈಲ ಅವರ ಹಣೆಗೆ ಏಟಾಗಿದ್ದು, ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ನಡೆಸಿದ ನೂಜಿಬಾಳ್ತಿಲ ನಿವಾಸಿಗಳಾದ ರತ್ನಾಕರ, ಹರೀಶ, ದಿನೇಶ, ಪ್ರಶಾಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೂಜಿಬಾಳ್ತಿಲ ನಿವಾಸಿಗಳಾದ ರತ್ನಾಕರ, ಹರೀಶ ಇಬ್ಬರು ಸೈನಿಕರಾಗಿದ್ದು, ರಜೆ ನಿಮಿತ್ತ ಮನೆಗೆ ಮರಳಿದ್ದರು. ನಿನ್ನೆ ಸಂಜೆ ಸ್ನೇಹಿತರಾದ ದಿನೇಶ್ ಹಾಗೂ ಪ್ರಶಾಂತ ಸೇರಿದಂತೆ ಮತ್ತಿತರ ರೊಂದಿಗೆ ಬಾರ್ ಗೆ ತೆರಳಿ ಮದ್ಯಪಾನ ಮಾಡಿದ್ದಾರೆ. ನಂತರ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿಕೊಂಡು ಬಂದ ಇವರನ್ನು ಪೊಲೀಸರು ತಡೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಕುಪಿತರಾದ ಸೈನಿಕರಾದ ರತ್ನಾಕರ ಹಾಗೂ ಹರೀಶ ಸೇರಿದಂತೆ ಮತ್ತಿತರರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.












Click it and Unblock the Notifications