ನಳಿನ್ ಬದಲಾವಣೆಗೆ ಆರ್ ಎಸ್ಎಸ್ ಮುಖಂಡ ಡಾ ಕಲ್ಲಡ್ಕ ಪ್ರಭಾಕರ ಭಟ್ ಪಟ್ಟು
ಮಂಗಳೂರು, ಮಾರ್ಚ್ 17:ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಘೋಷಣೆಗೆ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆ ಟಿಕೆಟ್ ಲಾಭಿ ತಾರಕಕ್ಕೇರಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಗೆ ಭಾರೀ ಜಟಾಪಟಿ ಆರಂಭವಾಗಿದೆ.
ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಬದಲಾವಣೆಗೆ ಬಿಜೆಪಿಯ ಒಂದು ಬಣ ಪಟ್ಟು ಹಿಡಿದಿದೆ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಮೇಲೆ ಆರ್ಎಸ್ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಒತ್ತಡ ಹೇರಿದ್ದಾರೆ ಎಂದು ಹೇಳಲಾಗಿದೆ.
ನಳಿನ್ ಬದಲಾವಣೆಗೆ ಆರ್ ಎಸ್ ಎಸ್ ಮುಖಂಡ ಡಾ ಕಲ್ಲಡ್ಕ ಪ್ರಭಾಕರ ಭಟ್ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದ್ದು, ಇಂದು ಮಧ್ಯಾಹ್ನ ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಅಭ್ಯರ್ಥಿ ಹೆಸರು ಅಂತಿಮವಾಗಲಿದೆ.

ದೆಹಲಿ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ಅಭ್ಯರ್ಥಿ ಹೆಸರು ಅಂತಿಮಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನಿನ್ನೆಯಿಂದ ಬೆಂಗಳೂರಿನ ಯಡಿಯೂರಪ್ಪ ನಿವಾಸದಲ್ಲಿ ಡಾ .ಕಲ್ಲಡ್ಕ ಪ್ರಭಾಕರ ಭಟ್ ಮೊಕ್ಕಾಂ ಹೂಡಿದ್ದಾರೆ ಎಂದು ಹೇಳಲಾಗಿದೆ.
ನಳಿನ್ ಪರ- ವಿರೋಧ ವಿಚಾರದಲ್ಲಿ ದಕ್ಷಿಣ ಕನ್ನಡ ಸಂಘ ಪರಿವಾರದಲ್ಲೇ ಎರಡು ಬಣಗಳ ಸೃಷ್ಟಿಯಾಗಿದೆ.ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನಳಿನ್ ಪರವಾಗಿದ್ದಾರೆ ಎಂದು ಹೇಳಲಾಗಿದೆ.ಉಡುಪಿ, ದಕ್ಷಿಣ ಕನ್ನಡದಲ್ಲಿ ಹಾಲಿ ಸಂಸದರನ್ನು ಬದಲಿಸಲು ಕಾರ್ಯಕರ್ತರು ಒತ್ತಡ ಹೇರಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುತೂಹಲ ಕೆರಳಿಸಿದೆ.

ನಳಿನ್ ಕುಮಾರ್ ಕಟೀಲ್ ಜೊತೆಗೆ ವೈದ್ಯರಾದ ಡಾ.ಸುಧೀರ್ ಹೆಗ್ಡೆ, ಬೃಜೇಶ್ ಚೌಟ , ಬಿಜೆಪಿ ಮುಖಂಡ ಸತ್ಯಜೀತ್ ಸುರತ್ಕಲ್ ಅವರ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications