ಅಂತರರಾಜ್ಯ ಸಂಚಾರಕ್ಕೆ ದಕ್ಷಿಣ ಕನ್ನಡ-ಕೇರಳ ಗಡಿ ಓಪನ್
ಮಂಗಳೂರು, ಆಗಸ್ಟ್ 17 : ಅಂತರರಾಜ್ಯ ಸಂಚಾರಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕರ್ನಾಟಕ-ಕೇರಳ ನಡುವಿನ ಗಡಿಯನ್ನು ತೆರೆದಿದೆ. ಪ್ರತಿದಿನ ಸಂಚಾರ ನಡೆಸುವ ಜನರು ತಿಂಗಳ ಪಾಸ್ ಪಡೆಯಬೇಕು ಎಂದು ಜಿಲ್ಲಾಡಳಿತ ಹೇಳಿದೆ.
ದಕ್ಷಿಣ ಕನ್ನಡ ಮತ್ತು ಕಾಸರಗೋಡು ನಡುವೆ ಸಂಪರ್ಕ ಕಲ್ಪಿಸುವ ಎಲ್ಲಾ ಗಡಿಗಳನ್ನು ಜನರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಕೋವಿಡ್ 19 ಸೋಂಕಿನ ಭೀತಿ ಹಿನ್ನಲೆಯಲ್ಲಿ ಗಡಿಯನ್ನು ಮುಚ್ಚಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ. ವಿ. ರಾಜೇಂದ್ರ ಈ ಕುರಿತು ಮಾಹಿತಿ ನೀಡಿದ್ದಾರೆ. "ಎರಡೂ ರಾಜ್ಯಗಳ ನಡುವೆ ಪ್ರತಿದಿನ ಸಂಚಾರ ನಡೆಸುವ ಜನರು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ, ಪಟ್ಟಣ ಪಂಚಾಯಿತಿಯಿಂದ ತಿಂಗಳ ಪಾಸನ್ನು ಪಡೆಯಬೇಕು" ಎಂದು ಹೇಳಿದ್ದಾರೆ.

ಪ್ರತಿದಿನ ಸಂಚಾರ ನಡೆಸುವವರು ಗಡಿಯಲ್ಲಿನ ಚೆಕ್‌ಪೋಸ್ಟ್‌ನಲ್ಲಿ ವಿವರಗಳನ್ನು ದಾಖಲು ಮಾಡಬೇಕು. ಥರ್ಮಲ್ ಸ್ಕ್ರೀನಿಂಗ್‌ಗೆ ಒಳಗಾಗಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ಕೇರಳದಿಂದ ದಕ್ಷಿಣ ಕನ್ನಡಕ್ಕೆ ಆಗಮಿಸಿ ವಾಸ್ತವ್ಯ ಹೂಡಲು ಬಯಸುವವರು ಸೇವಾ ಸಿಂಧು ಮೂಲಕ ಪಾಸು ಪಡೆಯಬೇಕು. ತಪಪ್ಪಾಡಿ ಮತ್ತು ಜಲಸೂರು ಚೆಕ್ ಪೋಸ್ಟ್ ಮೂಲಕ ಆಗಮಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಕಾಸರಗೋಡು ಜಿಲ್ಲಾಡಳಿತ ಅಂತರರಾಜ್ಯಗಳ ನಡುವೆ ಸಂಚಾರ ನಡೆಸುವ ಜನರಿಗೆ 21 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿದೆ.












Click it and Unblock the Notifications