ಜನವರಿಯೊಳಗೆ ಗಂಜಿಮಠದ ಪ್ಲಾಸ್ಟಿಕ್ ಪಾರ್ಕ್ ಉದ್ಘಾಟನೆ: ಕೇಂದ್ರ ಸಚಿವ ಭಗವಂತ ಖೂಬಾ
ಮಂಗಳೂರು, ಆಗಸ್ಟ್ 25: ಮಂಗಳೂರು ನಗರ ಹೊರವಲಯದ ಗಂಜಿ ಮಠದಲ್ಲಿ ನಡೆಯುತ್ತಿರುವ ಪ್ಲಾಸ್ಟಿಕ್ ಪಾರ್ಕ್ ನ ಪ್ರಗತಿ ಪರಿಶೀಲನೆ ಸಭೆಯನ್ನು ಕೇಂದ್ರ ರಾಸಯಾನಿಕ ಮತ್ತು ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವರಾದ ಭಗವಂತ ಖೂಬಾ ಮಾಡಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಜೊತೆ ಭೇಟಿ ನೀಡಿದ ಖೂಬಾ, ಅಧಿಕಾರಿಗಳಿಂದ ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಪ್ಲಾಸ್ಟಿಕ್ ಪಾರ್ಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, 'ಈ ಪ್ಲಾಸ್ಟಿಕ್ ಪಾರ್ಕ್ ದ.ಕ ಜಿಲ್ಲೆಗೆ ಬರಲು ಅನಂತ್ ಕುಮಾರ್ ಕಾರಣ. ಬಳಿಕ ಈ ಪಾರ್ಕ್ ಕೈ ತಪ್ಪಿ ಹೋಗುವ ಸಂಧರ್ಭದಲ್ಲಿ ಭಗವಂತ್ ಖೂಬಾ ಕೈ ಹಿಡಿದರು.ಬಹಳ ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಅನುದಾನಗಳನ್ನು ಖೂಬಾ ನೀಡಿದ್ದಾರೆ. ಸದ್ಯ ಎರಡನೇ ಹಂತದ ಅನುದಾನ ಬಿಡುಗಡೆಯಾಗಿದೆ. ಈ ಕಾಮಗಾರಿ ಜನವರಿ ಒಳಗೆ ಉದ್ಘಾಟನೆಯಾಗಲಿದೆ. ಯುವಕರಿಗೆ ಈ ಪಾರ್ಕ್ ನಿಂದ ಉದ್ಯೋಗ ಸೃಷ್ಠಿಯಾಗಲಿದೆ' ಎಂದರು.
ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, 'ಪ್ಲಾಸ್ಟಿಕ್ ಪಾರ್ಕ್ ಕಟ್ಟಡ ಕಾಮಗಾರಿ ಪ್ರಗತಿಯ ಹಂತದಲ್ಲಿದೆ. 104 ಎಕರೆ ಪ್ರದೇಶದಲ್ಲಿ ಪ್ಲಾಸ್ಟಿಕ್ ಉತ್ಪಾದನೆಯ ಘಟಕಗಳು ನಿರ್ಮಾಣವಾಗಲಿದೆ. ಸಿಪೆಟ್ ಕಾಲೇಜು ಕೂಡಾ ಈ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಡಿಸೆಂಬರ್ ಒಳಗಡೆ ಈ ಪ್ರದೇಶ ದಲ್ಲಿ ರಸ್ತೆ, ಒಳಚರಂಡಿ, ವಿದ್ಯುತ್,ಕಾಲೇಜು ಬಿಲ್ಡಿಂಗ್ ನಿರ್ಮಾಣವಾಗಲಿದೆ. ಆದರೆ ಸಮಾಧಾನಕಾರವಾದ ಪ್ರಗತಿಯಾಗಿಲ್ಲ ಎಂದರು.
70% ಆದರೂ ಕಾಮಗಾರಿ ನಡೆಯಬೇಕಿತ್ತು.ಆದರೆ ಕೇವಲ 15% ಮಾತ್ರ ಕಾಮಗಾರಿ ನಡೆದಿದೆ. ಸಮಸ್ಯೆಗಳು ಏನೇ ಇದ್ದರೂ ಅಗತ್ಯ ಇಂಜಿನಿಯರ್ ಗಳನ್ನು ನಿಯೋಜನೆ ಮಾಡಿ,ಗುತ್ತಿಗೆದಾರರಲ್ಲಿರುವ ಮಾನವಶಕ್ತಿ ಯಂತ್ರದ ಬಗ್ಗೆ ನಿಮಗೆ ಅರಿವಿದ್ದರೆ ಮಾತ್ರ ಕಾಮಗಾರಿ ಪ್ರಗತಿಯಲ್ಲಿ ನಡೆಯಲಿದೆ. ಈ ಕಾಮಗಾರಿ ಯಲ್ಲಿ ಮಂದಗತಿಯ ಕೆಲಸ ನಡೆದಿದೆ. ಆದರೆ ಮುಂದಿನ ತಿಂಗಳುಗಳಲ್ಲಿ ಕೆಲಸ ತ್ವರಿತಗತಿಯಲ್ಲಿ ನಡೆಯಬೇಕು. ಬೆಂಗಳೂರು ನಲ್ಲಿ ಕೂತರೆ ಕಾಮಗಾರಿ ವೇಗ ನಡೆಯೋದಿಲ್ಲ ಎಂದು ಚೀಫ್ ಇಂಜಿನಿಯರ್ ವೀರಭಧ್ರಯ್ಯ ಅವರಿಗೆ ಸಚಿವ ಭಗವಂತ ಖೂಬಾ ಸೂಚನೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಜನವರಿ ಒಳಗೆ ಈ ಕಾಮಗಾರಿ ಉದ್ಘಾನೆಯಾಗಬೇಕು. ಎಪ್ರಿಲ್ ನಲ್ಲಿ ಚುನಾವಣೆ ಬರಲಿದೆ. ಜನವರಿ ಒಳಗೆ ಈ ಕಾಮಗಾರಿ ಉದ್ಘಾಟನೆಯಾಗಬೇಕು. ಪ್ರತಿ ತಿಂಗಳು ಈ ಯೋಜನೆಯ ಮಾಹಿತಿಯನ್ನು ನಾನು ಪಡೆಯುತ್ತೇನೆ. ಭೂಸ್ವಾದೀನಕ್ಕೆ ಆಗಿರುವ ತೊಡಕುಗಳನ್ನು ಶೀಘ್ರ ನಿವಾರಿಸಿಕೊಳ್ಳಬೇಕು ಎಂದು ಭಗವಂತ ಖೂಬಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೇಂದ್ರ ದಲ್ಲಿ ನಾನು ಮಂತ್ರಿಯಾಗಲು ಸಂಸದ ನಳಿನ್ ಕುಮಾರ್ ಕಟೀಲ್ ಕಾರಣ. ಹಾಗಾಗಿ ಅವರಿಗೆ ಮಂಗಳೂರಿಗೆ ಉಪಯುಕ್ತವಾದ ಯೋಜನೆಯನ್ನು ನೀಡಿದ್ದೇನೆ. ಈ ಯೋಜನೆ ಮಂಗಳೂರಿಗೆ ಬರಲು ಮುಖ್ಯ ಕಾರಣ ಸಂಸದ ನಳಿನ್ ಕುಮಾರ್ ಕಟೀಲ್ ಕಾರಣ ಮಂಗಳೂರಿನಲ್ಲಿ ಎಲ್ಲಾ ಯೋಜನೆಗಳು ಯಶಸ್ವಿಯಾಗುತ್ತದೆ. ಆತ್ಮ ನಿರ್ಭರ ಭಾರತದ ಮೂಲೋದ್ದೇಶ ದಿಂದ ಭಾರತದಲ್ಲೇ ವಸ್ತುಗಳು ಉತ್ಪಾದನೆಯಾಗಲಿದೆ ಎಂದು ಸಚಿವ ಭಗವಂತ ಖೂಬಾ ಹೇಳಿದ್ದಾರೆ.
ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕರಾದ ಡಾ. ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ. ಆನಂದ್, ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಿಸಿದವರು ಉಪಸ್ಥಿತರಿದ್ದರು.












Click it and Unblock the Notifications