Belthangady: ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್, ಕಾರಣ ಇಲ್ಲಿದೆ
ಮಂಗಳೂರು, ಮೇ 20: ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಬೆಂಬಲಿಗರ ಪರ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿ ಧಮ್ಕಿ ಹಾಕಿದ ಆರೋಪದ ಮೇಲೆ ಹಾಲಿ ಶಾಸಕರ ವಿರುದ್ಧವೇ ಎಫ್‌ಐಆರ್ ದಾಖಲಾಗಿದೆ.

ಅಕ್ರಮ ಕಲ್ಲು ಕೋರೆ ದಾಳಿ ನೆಪದಲ್ಲಿ ಬಿಜೆಪಿ ಯುವ ಮುಖಂಡನನ್ನು ಬಂಧಿಸಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯ ಮುಂದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಶಾಸಕರು, ಬೆಳ್ತಂಗಡಿ ಪಿಎಸ್‌ಐ ಮುರುಳಿಧರ್ ನಾಯ್ಕ್‌ಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಳ್ತಂಗಡಿಯ ಮೆಲಂತಬೆಟ್ಟುವಿನ ಕಲ್ಲಿನ ಕೋರೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದೆ ಎನ್ನುವ ಆರೋಪದ ಮೇಲೆ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸ್ ತಂಡ ದಾಳಿ ನಡೆಸಿದ್ದಾರೆ. ಈ ನೆಪದಲ್ಲಿ ಗುರುವಾಯನಕೆರೆಯ ಬಿಜೆಪಿ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಈ ಕ್ರಮ ವಿರೋಧಿಸಿ ಶಾಸಕ ಹರೀಶ್ ಪೂಂಜಾ ಹಾಗೂ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು.
ಮನೆಯಲ್ಲಿದ್ದವರನ್ನು ಯಾವುದೇ ದಾಖಲೆಗಳಿಲ್ಲದೇ, ಮನೆಯಲ್ಲಿ ಹೆಂಗಸರು, ಮಕ್ಕಳೆದುರು ಬಂಧನ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಅಮಾಯಕನ ಬಂಧನವಾಗಿದ್ದು ಕೂಡಲೇ ಆತನನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಪೊಲೀಸ್ ಠಾಣೆಯ ಮುಂದೆ ಶಾಸಕರು ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಶಾಸಕರ ನಡುವೆ ವಾಗ್ದಾಳಿ ನಡೆದಿದ್ದು, ಬೆಳ್ತಂಗಡಿ ಪಿಎಸ್‌ಐ ಮುರುಳಿಧರ್ ನಾಯ್ಕ್‌ಗೆ ಶಾಸಕರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications