• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಕೋಡಾ ಮಾರಿ ಯಶಸ್ಸು ಸಾಧಿಸಿದ ದಕ್ಷಿಣ ಕನ್ನಡ ಸ್ವಾವಲಂಬಿ ಯುವತಿಯರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 23: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನವನ್ನು ಈ ಬಾರಿ ಕಾಂಗ್ರೆಸ್ ರಾಷ್ಟ್ರೀಯ ನಿರುದ್ಯೋಗ ದಿನಾಚರಣೆಯಾಗಿ ಆಚರಣೆ ಮಾಡಿದೆ. ರಸ್ತೆ ಬದಿಯಲ್ಲಿ ಪದವೀಧರರ ವೇಷ ತೊಟ್ಟ ಕಾಂಗ್ರೆಸ್ ಕಾರ್ಯಕರ್ತರು, ಪಕೋಡಾ ತಯಾರಿಸಿ ಮಾರಾಟ ಮಾಡಿ ರಾಷ್ಟ್ರೀಯ ನಿರುದ್ಯೋಗ ದಿನಾಚರಣೆ ಮಾಡಿದರು.

ಈ ಮೂಲಕ ಪ್ರಧಾನಿ ಮೋದಿ ಆಡಳಿತದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ. ಪಕೋಡಾ ಮಾರಿಯೂ ಸ್ವಉದ್ಯೋಗದಲ್ಲಿ ತೊಡಗಿಕೊಳ್ಳಬಹುದು ಎಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಮಾತಿಗೆ ವ್ಯಂಗ್ಯ ಪ್ರದರ್ಶನ ಮಾಡಿದ್ದರು.

ಆದರೆ ಪ್ರಧಾನಿಯ ಮಾತಿನಲ್ಲಿ ಸತ್ಯಾಂಶವಿದೆ ಎನ್ನುವುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಯುವಕ- ಯುವತಿಯರು ತೋರಿಸಿ ಕೊಟ್ಟಿದ್ದಾರೆ. ಕೊರೊನಾ ಕಾಲದಲ್ಲಿ ನಂಬಿದ ಕಂಪೆನಿಗಳು ಕೈ ಕೊಟ್ಟಾಗ, ಕೆಲಸವಿಲ್ಲದೇ ಅಲೆದಾಡಿದಾಗ ಪ್ರಧಾನಿ ಮೋದಿಯ ಮಾತನ್ನೇ ಪ್ರೇರಣೆಯಾಗಿಟ್ಟುಕೊಂಡು, ಸ್ವಉದ್ಯೋಗದಲ್ಲಿ ತೊಡಗಿಕೊಂಡು ಯುವಕರು ಸ್ವಾವಲಂಬಿಯಾಗಿ ಬದುಕು ಸಾಗಿಸುತ್ತಿದ್ದಾರೆ.
ಯುವಕರು ಏನಾದರೂ ಮಾಡಬೇಕೆಂಬ ಛಲಕ್ಕೆ ನೀರೆರದವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಉದ್ಯೋಗವನ್ನು ಕಳೆದುಕೊಂಡು ಬೀದಿಗೆ ಬಿದ್ದ ಕುಟುಂಬ ಹಾಗೂ ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಅಲೆಯುತ್ತಿರುವ ಯುವ ಜನತೆಗೆ ವಿದ್ಯಾವರ್ಧಕ ಸಂಘ ಸ್ವಾವಲಂಬಿಯಾಗಿ ಬದುಕುವ ದಾರಿ ತೋರಿಸಿದೆ.

 4536 ಯುವಕರಿಗೆ ವಿವಿಧ ಉದ್ಯೋಗ

4536 ಯುವಕರಿಗೆ ವಿವಿಧ ಉದ್ಯೋಗ

ವಿದ್ಯಾವರ್ಧಕ ಸಂಘ ಯುವ ಜನತೆಗಾಗಿ ವಿವಿಧ ಉದ್ಯೋಗಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಯುವ ಜನತೆಯನ್ನು ಸ್ವಉದ್ಯೋಗದಲ್ಲಿ ತೊಡಗಿಕೊಳ್ಳುವಂತೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ 7 ತಾಲೂಕುಗಳಲ್ಲಿ ಸುಮಾರು 20ಕ್ಕೂ ಮಿಕ್ಕಿದ ಸ್ಥಳಗಳಲ್ಲಿ 4536 ಯುವಕರಿಗೆ ವಿವಿಧ ಉದ್ಯೋಗಗಳಿಗೆ ಸಂಬಂಧಿಸಿದಂತೆ ತರಬೇತಿಯನ್ನು ನೀಡಿ ಬದುಕು ಸುಲಭವನ್ನಾಗಿಸಿದೆ.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ನೀಡಿದ ತರಬೇತಿಯಲ್ಲಿ ಆಹಾರೋದ್ಯಮ, ಜೇನು ಸಾಕಾಣಿಕೆ, ಎಂಬ್ರೋಯ್ಡರಿ, ಕಸಿ ಕಟ್ಟುವಿಕೆ ಸೇರಿದಂತೆ 27 ಉದ್ಯಮಗಳ ಕುರಿತು ಮಾಹಿತಿ ನೀಡಲಾಗಿತ್ತು. ಈ ಮಾಹಿತಿಯನ್ನು ಆಯಾ ಉದ್ಯಮದಲ್ಲಿ ತೊಡಗಿಕೊಂಡ ಪರಿಣಿತರಿಂದಲೇ ಕೊಡುವ ಮೂಲಕ ಸ್ವಉದ್ಯಮವನ್ನು ಯಾವ ರೀತಿಯಲ್ಲಿ ಆರಂಭಿಸಬಹುದು ಎನ್ನುವುದನ್ನು ಹೇಳಿಕೊಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮಹಿಳೆ, ಪುರುಷ, ಯುವಕ, ಯುವತಿ ಸೇರಿದಂತೆ ಎಲ್ಲಾ ವಯೋಮಾನದವರು ಈ ತರಬೇತಿಯ ಲಾಭವನ್ನು ಪಡೆಯುವ ಮೂಲಕ ಇದೀಗ ಸ್ವ ಉದ್ಯಮದಲ್ಲಿ ತೊಡಗಿಕೊಳ್ಳುವ ಮೂಲಕ ಜೀವನದಲ್ಲಿ ಆತ್ಮ ನಿರ್ಭರತೆಯನ್ನು ಪಡೆದುಕೊಂಡಿದ್ದಾರೆ.
 ಆಹಾರೋದ್ಯಮವನ್ನು ಪ್ರಾರಂಭಿಸಬೇಕು ಎನ್ನುವ ಇಚ್ಛೆ

ಆಹಾರೋದ್ಯಮವನ್ನು ಪ್ರಾರಂಭಿಸಬೇಕು ಎನ್ನುವ ಇಚ್ಛೆ

ಹೆಚ್ಚಿನ ಮಹಿಳೆಯರು ಆಹಾರೋದ್ಯಮದಲ್ಲಿ ತೊಡಗಿಕೊಂಡರೆ, ಪುರುಷರು ಜೇನು ಸಾಕಾಣಿಕೆ, ಕಸಿ ಕಟ್ಟುವಿಕೆ ಸೇರಿದಂತೆ ಇತರ ಉದ್ಯಮಗಳನ್ನು ಆಯ್ಕೆ ಮಾಡುವ ಮೂಲಕ ಸ್ವಾವಲಂಬಿ ಬದುಕನ್ನು ಆರಂಭಿಸಿದ್ದಾರೆ. ಸ್ವಾವಲಂಬಿ ಬದುಕು ನಡೆಸುತ್ತಿರುವ ಉಜಿರೆ ಧನ್ಯವತಿ ಮಾತನಾಡಿ, "ತರಬೇತಿಯಿಂದ ಉದ್ಯಮಕ್ಕೆ ಬೇಕಾದ ಎಲ್ಲಾ ವಿಷಯಗಳನ್ನೂ ತಿಳಿದುಕೊಳ್ಳುವಂತಾಗಿದೆ. ಆಹಾರೋದ್ಯಮವನ್ನು ಪ್ರಾರಂಭಿಸಬೇಕು ಎನ್ನುವ ಇಚ್ಛೆ ಹಿಂದಿನಿಂದಲೇ ಇದ್ದ ಕಾರಣ, ತರಬೇತಿಯಲ್ಲಿ ಆಹಾರೋದ್ಯಮದ ವಿಷಯವನ್ನೇ ಆಯ್ಕೆ ಮಾಡಿಕೊಂಡಿದ್ದೆ. ಕರಾವಳಿಯ ಸಾಂಪ್ರದಾಯಿಕ ತಿಂಡಿ ತಿನಿಸುಗಳಾದ ಇಡ್ಲಿ, ದೋಸೆ ಹೀಗೆ ವಿವಿಧ ತಿಂಡಿ ತಿನಿಸುಗಳಿಗೆ ಬೇಕಾದ ಅಕ್ಕಿ ಹುಡಿಯನ್ನು ತಯಾರಿಸಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದೇನೆ. ಇದೀಗ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು, ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿರುವುದನ್ನು ಕಂಡು ಖುಷಿ ವ್ಯಕ್ತಪಡಿಸಿದ್ದಾರೆ."

 ಬಾಳೆಹಣ್ಣಿನ ಚಿಪ್ಸ್ ತಯಾರಿಸುವುದನ್ನು ಕಲಿತಿದ್ದರು

ಬಾಳೆಹಣ್ಣಿನ ಚಿಪ್ಸ್ ತಯಾರಿಸುವುದನ್ನು ಕಲಿತಿದ್ದರು

ಧನ್ಯವತಿಯಂತೆ ಪುತ್ತೂರಿನ ಚೇತನಾ ಕೂಡಾ ಸಬಲೆಯಾಗಿದ್ದಾರೆ. ಚೇತನಾ ಇತ್ತೀಚಿನ ದಿನಗಳವರೆಗೂ ಬೇರೊಂದು ಸಂಸ್ಥೆಯಲ್ಲಿ ಉದ್ಯೋಗಿಯಾಗಿ ದುಡಿಯುತ್ತಿದ್ದವರು. ಉದ್ಯೋಗ ತರಬೇತಿ ಕಾರ್ಯಕ್ರಮಕ್ಕೆ ದುಡಿಯುವ ಸಂಸ್ಥೆಗೆ ಒಂದು ವಾರ ರಜಾ ಹಾಕಿ ಹೋಗಿದ್ದು, ತರಬೇತಿಯಲ್ಲಿ ಬಾಳೆಹಣ್ಣಿನ ಚಿಪ್ಸ್ ತಯಾರಿಸುವುದನ್ನು ಕಲಿತಿದ್ದರು. ಕೆಲ ದಿನಗಳ ಕಾಲ ಬೆಳಿಗ್ಗೆ ಉದ್ಯೋಗಕ್ಕೆ ಹೋಗಿ ರಾತ್ರಿ ಹೊತ್ತು ಮನೆಯಲ್ಲಿ ಚಿಪ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದ ಚೇತನಾ, ಇದೀಗ ಫುಲ್ ಟೈಂ ಚಿಪ್ಸ್ ತಯಾರಿಕೆಯಲ್ಲೇ ತೊಡಗಿಕೊಂಡಿದ್ದಾರೆ. "ಹಿಂದೆ ತಯಾರಿಸಿದ ಚಿಪ್ಸ್ ಅನ್ನು ಮಾರಾಟ ಮಾಡಲು ತನ್ನ ವಾಟ್ಸಪ್ ಸ್ಟೇಟಸ್ ಹಾಗೂ ಇತರ ಮೂಲಗಳ ಮೂಲಕ ಮಾರ್ಕೆಟಿಂಗ್ ಮಾಡಬೇಕಾಗಿತ್ತು. ಆದರೆ ಇದೀಗ ಪುತ್ತೂರಿನಲ್ಲಿ ಚಿಪ್ಸ್ ಕಾರ್ನರ್ ಒಂದನ್ನು ಪ್ರಾರಂಭಿಸಿದ್ದು, ಜನ ಅಂಗಡಿ ಬಾಗಿಲು ತೆಗೆಯುವ ಮೊದಲೇ ಚಿಪ್ಸ್‌ಗಾಗಿ ಕಾಯುತ್ತಾರೆ. ದಿನವೊಂದಕ್ಕೆ 20 ಕೆಜಿಗಿಂತಲೂ ಚಿಪ್ಸ್ ಮಾರಾಟವಾಗುತ್ತಿದ್ದು, ಇದರಿಂದಾಗಿ ಕುಟುಂಬದ ರಥ ಯಾವುದೇ ತೊಂದರೆಯಿಲ್ಲದೆ ಸಾಗುತ್ತಿದೆ," ಎನ್ನುವ ವಿಶ್ವಾಸದ ಮಾತನ್ನು ಚೇತನಾ ಹೇಳುತ್ತಾರೆ.

 ಯುವ ಪಡೆ ಇದೀಗ ಆತ್ಮನಿರ್ಭರತೆಯ ಕಡೆ

ಯುವ ಪಡೆ ಇದೀಗ ಆತ್ಮನಿರ್ಭರತೆಯ ಕಡೆ

ಸುಮಾರು 1500ಕ್ಕೂ ಮಿಕ್ಕಿದ ಯುವ ಪಡೆ ಇದೀಗ ಆತ್ಮನಿರ್ಭರತೆಯ ಕಡೆ ಸಾಗಿದ್ದು, ತರಬೇತಿ ಪಡೆದ ಉಳಿದವರೂ ಸದ್ಯದಲ್ಲೇ ಹೊಸ ಉದ್ಯಮ ಆರಂಭಿಸುವ ಹಂತದಲ್ಲಿದ್ದಾರೆ. ಸಾಧಿಸುವ ಛಲ ಇದ್ದರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಅನ್ನುವುದನ್ನು ಈ ಯುವ ಸಮುದಾಯ ಸಾಧಿಸಿ ತೋರಿಸಿದೆ. ಮೋದಿ ಪಕೋಡಾ ಮಾತಿನಲ್ಲೂ ಸತ್ಯ ಇದೆ ಅಂತಾ ನಿರೂಪಿಸಿರುವ ಜನರು, ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಹಣ ಸಂಪಾದನೆ ಮಾಡುತ್ತಿದ್ದಾರೆ. ಯಾವ ಕೆಲಸವೂ ಕೀಳಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.

English summary
Young men and women in Dakshina Kannada district are engaged in self-employment and Successed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X