ಜಗದೀಶ್ ಕಾರಂತ್ ವಿರುದ್ಧ ದೂರು ನೀಡಿದ ದಕ್ಷಿಣ ಕನ್ನಡ ಡಿಸಿ!
ಮಂಗಳೂರು, ನವೆಂಬರ್ 24; "ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸದೇ ಇದ್ದರೆ ಜಿಲ್ಲಾಧಿಕಾರಿಯ ಕೊರಳ ಪಟ್ಟಿ ಹಿಡಿಯುತ್ತೇವೆ" ಎಂದು ಹೇಳಿದ್ದ ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ದೂರು ನೀಡಿದ್ದಾರೆ.
ಬಂಟ್ವಾಳದ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಗಳು ದೂರು ದಾಖಲಿಸಿದ್ದಾರೆ. ನವೆಂಬರ್ 21ರಂದು ಬಂಟ್ವಾಳದ ಕಾರಿಂಜ ಎಂಬಲ್ಲಿನ ಇತಿಹಾಸ ಪ್ರಸಿದ್ಧ ಕ್ಷೇತ್ರ ಕಾರಿಂಜೇಶ್ವರ ದೇವಸ್ಥಾನದ ಸುತ್ತಾ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಬೃಹತ್ ಜನಜಾಗೃತಿ ಜಾಥಾವನ್ನು ಹಮ್ಮಿಕೊಂಡಿತ್ತು.
ಈ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಹಿಂದೂ ಜಾಗರಣ ವೇದಿಕೆಯ ಕ್ಷೇತ್ರಿಯಾ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಭಾಗವಹಿಸಿದ್ದರು. ಭಾಷಣದ ವೇಳೆ ಕಾರಂತ್, "ಅಕ್ರಮ ಗಣಿಗಾರಿಕೆ ನಿಲ್ಲಿಸದಿದ್ದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ಲಗ್ಗೆಯಿಟ್ಟು, ಜಿಲ್ಲಾಧಿಕಾರಿಯ ಕೊರಳ ಪಟ್ಟಿ ಹಿಡಿಯುತ್ತೇವೆ" ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದರು.

"ಅಕ್ರಮ ಗಣಿಗಾರಿಕೆ ನಿಲ್ಲಿಸಲು ಜಿಲ್ಲಾಧಿಕಾರಿಗೆ 30 ದಿನಗಳ ಕಾಲಾವಕಾಶ ನೀಡುತ್ತಿದ್ದೇವೆ. ತಪ್ಪಿದ್ದಲ್ಲಿ ಡಿಸೆಂಬರ್ 21ರಂದು ಸಾವಿರಾರು ಜನರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಲಗ್ಗೆ ಹಾಕಿ ಜಿಲ್ಲಾಧಿಕಾರಿಯ ಕೊರಳು ಪಟ್ಟಿಯನ್ನು ಹಿಡಿಯುತ್ತೇವೆ. ತಾಕತ್ತಿದ್ದರೆ ಗಣಿಗಾರಿಕೆ ನಿಲ್ಲಿಸು. ಇಲ್ಲದಿದ್ದರೆ ವರ್ಗಾವಣೆ ತೆಗೆದು ಹೊರಗೆ ಹೋಗು ಎಂದು ಹೇಳುತ್ತೇವೆ" ಎಂದು ಜಗದೀಶ್ ಕಾರಂತ ಏಕವಚನದಲ್ಲೇ ಜಿಲ್ಲಾಧಿಕಾರಿಗೆ ಎಚ್ಚರಿಕೆ ನೀಡಿದ್ದರು.
"ಅಕ್ರಮ ಗಣಿಗಾರಿಕೆಯನ್ನು 24 ಗಂಟೆಯೊಳಗೆ ನಿಲ್ಲಿಸುವ ಅಧಿಕಾರ ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಜಿಲ್ಲಾಧಿಕಾರಿಗೆ ಇದೆ. ಗಣಿಗಾರಿಕೆ ನಿಲ್ಲಿಸಲು ಅಸಾಧ್ಯವಾದರೆ ರಾಜೀನಾಮೆ ನೀಡಿ ಮನೆಗೆ ಹೋಗು" ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಶಾಸಕರಿಗೆ ಜಗದೀಶ್ ಕಾರಂತ ತಾಕೀತು ಮಾಡಿದ್ದರು.
ಜಗದೀಶ್ ಕಾರಂತ್ ಭಾಷಣಕ್ಕೆ ತೀವ್ರ ಆಕ್ರೋಶ ಕೂಡಾ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಜಗದೀಶ್ ಕಾರಂತ್ ವಿರುದ್ಧ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಹೀಗಾಗಿ ಜಗದೀಶ್ ಕಾರಂತ್ ಮೇಲೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಕವಚನ ಹಾಗೂ ಅಸಭ್ಯ ಮಾತುಗಳಲ್ಲಿ ಜಿಲ್ಲಾಧಿಕಾರಿ ಹುದ್ದೆಗೆ ಅಗೌರವ ತಂದಿದ್ದಾರೆ. ಸರಕಾರಿ ಅಧಿಕಾರಿಗೆ ಬೆದರಿಯೊಡ್ಡುವ ರೀತಿಯ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನಲೆಯಲ್ಲಿ ಕಾರಂತ್ ವಿರುದ್ಧ ಐಪಿಸಿ ಸೆಕ್ಷನ್ 153, 117, 504, 506,189ರಡಿ ಪ್ರಕರಣ ದಾಖಲಾಗಿದೆ.
ದೂರಿನ ವಿವರ; ಜಗದೀಶ್ ಕಾರಂತ್ ಜಿಲ್ಲಾಧಿಕಾರಿ ವಿರುದ್ಧ ಬಂಟ್ವಾಳ ತಾಲೂಕಿನ ಕಾರೀಂಜೇಶ್ವರ ದೇವಸ್ಥಾನದ ಸುತ್ತಮುತ್ತ ನಡೆಯುವ ಗಣಿಗಾರಿಕೆಯನ್ನು ನಿಲ್ಲಿಸಲು ಡಿಸೆಂಬರ್ 21 ರವರೆಗೆ ಗಡುವು ಕೊಟ್ಟಿದ್ದೇವೆ, ಇಲ್ಲದಿದ್ದರೆ ಡಿಸೆಂಬರ್ 21 ಕ್ಕೆ ಎಲ್ಲರೂ ಸಿದ್ದರಾಗಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಜಿಲ್ಲಾಧಿಕಾರಿಗಳ ಕಛೇರಿಗೆ ಲಗ್ಗೆ ಹಾಕಿ, ಅವನ ಕೊರಳು ಪಟ್ಟಿಯನ್ನು ಹಿಡಿಯುತ್ತೀವಿ. ತಾಕತ್ತಿದ್ದರೆ ಕಲ್ಲುಗಣಿಗಾರಿಕೆಯನ್ನು ನಿಲ್ಲಿಸೋ, ಇಲ್ಲವಾದರೇ ಟ್ರಾನ್ಸ್ ಫರ್ ತೆಗೆದುಕೊಂಡು ಹೋಗೋ ಎಂಬಿತ್ಯಾದಿ ರೀತಿಯಲ್ಲಿ ಏಕವಚನ ಮತ್ತು ಅಸಭ್ಯವಾಗಿ ಮಾತುಗಳನ್ನಾಡುವ ಮೂಲಕ ಜಿಲ್ಲಾಧಿಕಾರಿ ಹುದ್ದೆಗೆ ಅಗೌರವ ತೋರಿಸಿರುವುದಲ್ಲದೇ, ಸರಕಾರಿ ಅಧಿಕಾರಿಗೆ ಬೆದರಿಕೆಯೊಡ್ಡುವ ರೀತಿಯಲ್ಲಿ ಪ್ರಚೋದನೆಯನ್ನು ನೀಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜಗದೀಶ್ ಕಾರಂತ್ ಅಪರಾಧಿಕ ಕೃತ್ಯವನ್ನು ಎಸಗುವ ಮನೋಧೋರಣೆ ಹೊಂದಿ ಪ್ರಚೋದಾನಾಧಿಕಾರಿಯಾಗಿ ಬೆದರಿಕೆಯೊಡ್ಡಿರುವುದರಿಂದ ಮತ್ತು ಸಾವಿರಾರು ಜನಕ್ಕೆ ಅಪರಾಧಿಕ ಕೃತ್ಯವೆಸಗಲು ಪ್ರೇರಣೆ ನೀಡಿ ಅಪರಾಧಿಕಾ ಭೀತಿಯನ್ನುಂಟು ಮಾಡಿರುತ್ತಾರೆ ಹಾಗೂ ಅಪರಾಧ ಕೃತ್ಯ ನಡೆಸಲು ಪ್ರೇರಣೆಯನ್ನು ಮತ್ತು ಬೆದರಿಕೆಯನ್ನೊಡ್ಡಿದ್ದು, ಡಿಸೆಂಬರ್ 21ಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಜಿಲ್ಲಾಧಿಕಾರಿ ಕಛೇರಿಗೆ ಲಗ್ಗೆ ಹಾಕಿ ಜಿಲ್ಲಾಧಿಕಾರಿಗಳ ಕೊರಳಪಟ್ಟಿ ಹಿಡಿಯಿರಿ ಎಂದು ಪ್ರಚೋದಿಸುವ ಮೂಲಕ ಸಾರ್ವಜನಿಕ ನೌಕರನಿಗೆ ಅಪರಾಧಿಕ ಭೀತಿಯನ್ನುಂಟು ಮಾಡಿರುವುದಲ್ಲದೇ, ಸರಕಾರಿ ಅಧಿಕಾರಿಗೆ ಹಾನಿ ಮತ್ತು ಹಲ್ಲೆ ಮಾಡಲು ಪ್ರಚೋದಿಸಿ ಬೆದರಿಕೆ ಹಾಕಿರುತ್ತಾರೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಜಗದೀಶ್ ಕಾರಂತ್ ವಿರುದ್ಧ ದೂರು ನೀಡಿದ ವಿಚಾರವಾಗಿ ಹಿಂದೂ ಜಾಗರಣ ವೇದಿಕೆ ಪ್ರತಿಕ್ರಿಯೆ ನೀಡಿದೆ. ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಬೇಕೆಂಬುದು ನಮ್ಮ ಏಕಮಾತ್ರ ಉದ್ದೇಶವಾಗಿದೆ. ಡಿಸೆಂಬರ್ 21ರಂದು ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಮಾಡಿಯೇ ಸಿದ್ಧ. ಸ್ವತಃ ಜಿಲ್ಲಾಧಿಕಾರಿಯೇ ಇವತ್ತು ದೂರು ಕೊಡುವ ಮೂಲಕ ನಮ್ಮ ಉತ್ಸಾಹವನ್ನು ಹೆಚ್ಚಿಸಿದ್ದಾರೆ. ಕಾರಂತ್ ವಿರುದ್ಧ ಯಾವುದೇ ಕೇಸ್ ಹಾಕಿದರೂ ಜಗ್ಗುವುದಿಲ್ಲ ಎಂದು ಹೇಳಿದೆ.












Click it and Unblock the Notifications