ಕಾಂಗ್ರೆಸ್ ಗಾಂಜಾ ಹಣದಿಂದ ಬದುಕುತ್ತಿದೆ: ನಳಿನ್
ಮಂಗಳೂರು, ಅಕ್ಟೋಬರ್ 06: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನ ಪ್ರಮುಖ ಮುಖಂಡರು ಗಾಂಜಾ ಹಣದಿಂದ ಬದುಕುತ್ತಿದ್ದಾರೆ ಎಂದು ಸಂಸದ ನಳಿನ ಕುಮಾರ್ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, " ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಂಜಾ ದಂಧೆಗೆ ಕಾಂಗ್ರೆಸ್ ಮುಖಂಡರ ಅಭಯವಿದೆ ಎಂದು ಆರೋಪಿಸಿದರು. ಹಾಗೂ ಜಿಲ್ಲೆಯ ಹಳ್ಳಿ ಹಳ್ಳಿಯ ಗೂಡಂಗಡಿಗಳಲ್ಲಿ ಗಾಂಜಾ ದೊರೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಗೂಂಡಾಗಳನ್ನು ಬಳಸಿ ಹತ್ಯೆ ನಡೆಸುತ್ತಿದೆ. ಉಳ್ಳಾಲದ ಮುಖಚ್ಚೇರಿಯಲ್ಲಿ ಹತ್ಯೆಯಾದ ಜುಬೇರ್ ಬಿಜೆಪಿ ಕಾರ್ಯಕರ್ತನಾಗಿದ್ದು, ಜುಬೇರ್ ಕುಡುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ.
ಜುಬೇರ್ ಅವರನ್ನು ಕಾಂಗ್ರೆಸ್ ಕೃಪಾಪೋಷಿತ ಗಾಂಜಾ ದಂಧೆಕೋರರು ಹತ್ಯೆ ಮಾಡಿದ್ದು, ಪ್ರಕರಣವನ್ನು ಎನ್ಐಎಗೆ ವಹಿಸಬೇಕೆಂದು ಒತ್ತಾಯಿಸಿದರು.
ಗಾಂಜಾ ಹಾವಳಿ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಸ್ಕ್ವಾಡ್ ರಚಿಸುವಲ್ಲಿ ವಿಫಲವಾಗಿದ್ದರಿಂದ ಜಿಲ್ಲೆಯ ಗಲ್ಲಿ-ಗಲ್ಲಿಗಳಲ್ಲಿ ರೌಡಿ ಗ್ಯಾಂಗ್ ಗಳು ಬೆಳೆಯುತ್ತಿವೆ. ಕೇರಳದ ಕಮ್ಯುನಿಷ್ಟ ರಾಜಕಾರಣವನ್ನು ಕಾಂಗ್ರೆಸ್ ರಾಜ್ಯದಲ್ಲಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications