Weather Update: ಮಳೆ..ಮಳೆ..ಮಳೆ: ಕರಾವಳಿಯಲ್ಲಿ ಇನ್ನೆರಡು ದಿನ ಭರ್ಜರಿ ಮಳೆ
ಮಂಗಳೂರು, ಮೇ 21: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಭರ್ಜರಿ ಭಾರೀ ಗಾಳಿ ಮಳೆ ಹಿನ್ನೆಲೆಯಲ್ಲಿ ಎರಡು ಜಿಲ್ಲೆಗಳಿಗೂ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಇಂದು( ಮೇ 21) ಹಾಗೂ ನಾಳೆ (ಮೇ.22) ರವರೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿಯುದ್ದಕ್ಕೂ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಲಾಗಿದೆ.

ಇನ್ನು ನಿನ್ನೆಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಇಂದು ಮುಂಜಾನೆಯಿಂದಲೇ ಹಲವು ಕಡೆಗಳಲ್ಲಿ ಮಳೆಯಾಗಿದೆ. ಹಾಗೂ ಮಂಗಳೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದೆ.
ಉಡುಪಿ: ಸುರಿಯುವ ಮಳೆಯಲ್ಲೇ ಕುಣಿದ ದೈವ ನರ್ತಕ
ಉಡುಪಿ: ಉಡುಪಿಯಲ್ಲಿ ರಾತ್ರಿಯ ಹೊತ್ತಿನಲ್ಲಿ ಮಳೆಯಾಗುತ್ತಿದೆ. ಸುರಿಯುವ ಮಳೆಯನ್ನು ಲೆಕ್ಕಿಸದೆ ದೈವಾರಾದನೆಯ ಶ್ರದ್ಧೆ ವ್ಯಕ್ತಪಡಿಸಿರುವ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ, ಬಬ್ಬು ಸ್ವಾಮಿ ದೈವದ ನೇಮೋತ್ಸವ ಏರ್ಪಾಟಾಗಿತ್ತು. ಇದ್ದಕ್ಕಿದ್ದಂತೆ ನಡುರಾತ್ರಿ ವ್ಯಾಪಕ ಮಳೆ ಆರಂಭವಾಯಿತು. ಸುರಿಯುವ ಮಳೆಯಲ್ಲೇ ದೈವ ನರ್ತಕ ರವಿ ಪಡ್ಡಮ್ ಅವರು ಗಗ್ಗರಸೇವೆ ನಡೆಸಿಕೊಟ್ಟರು.
ಮಳೆಯಲ್ಲೇ ನಡೆಯುತ್ತಿರುವ ನೇಮೋತ್ಸವದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ದೈವರಾದನೆಯ ಬಗ್ಗೆ ಕರಾವಳಿ ಜನರಲ್ಲಿ ಇರುವ ಶ್ರದ್ದೆ ಈ ಮೂಲಕ ವ್ಯಕ್ತವಾಗಿದೆ. ಆರಾಧನೆಯಲ್ಲಿ ಯಾವುದೇ ಲೋಪ ಬಾರದಂತೆ ದೈವರಾಧಕರು ಮತ್ತು ಜನರು ಈ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ. ಅಂದ ಹಾಗೆ ತುಳುನಾಡಿನಲ್ಲಿ ಈ ವರ್ಷದಲ್ಲಿ ನಡೆಯುವ ಬಬ್ಬು ಸ್ವಾಮಿ ದೈವದ ಕೊನೆಯ ಕೋಲ ಇದು ಎಂದು ತಿಳಿದು ಬಂದಿದೆ.












Click it and Unblock the Notifications