ಕುಮಾರ ಪರ್ವತದ ಗಿರಿಗದ್ದೆ ಭಟ್ರು ಇನ್ನಿಲ್ಲ: ಕಾಡಿನ ಮಧ್ಯ ಮನೆಯೂಟ ನೀಡ್ತಿದ್ದ ಮಹಾಲಿಂಗ ಭಟ್ಟರ ಪರಿಚಯ
ಮಂಗಳೂರು, ಡಿಸೆಂಬರ್ 20: ಕುಮಾರ ಪರ್ವತ ಚಾರಣ ಮಾಡಿದವರಿಗೆ ಗಿರಿಗದ್ದೆ ಎಂಬ ಹೆಸರು ಬಹಳ ಪ್ರೀಯ. ಅದರಲ್ಲೂ ಗಿರಿಗದ್ದೆ ಭಟ್ರು ಎಂದರೆ ಎಲ್ಲರಿಗೂ ಚಿರಪರಿಚಿತ. ಇಲ್ಲಿಯವರೆಗೆ ಸಾವಿರಾರು ಚಾರಣ ಪ್ರಿಯರಿಗೆ ಕಾಡಿನ ನಡುವಿನ ಮನೆಯಲ್ಲಿ ಮನೆಯೂಟ ನೀಡಿದ ಗಿರಿಗದ್ದೆ ಭಟ್ರು ವಿಧಿವಶರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಗಿರಿಗದ್ದೆ ಮಹಾಲಿಂಗ ಭಟ್ ಅವರು ನಿಧನರಾಗಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದಿಂದ ಕುಮಾರ ಪರ್ವತಕ್ಕೆ ಸಾಗುವ ನಾಲ್ಕು ಕಿಲೋಮೀಟರ್ ಕಾಡದಾರಿಯಲ್ಲಿ ಹೋದರೆ ಗಿರಿ ಗದ್ದೆ ಮಹಾಲಿಂಗ ಭಟ್ ಅವರ ಮನೆ ಸಿಗುತ್ತಿತ್ತು. ಏಕಾಂತವನ್ನು ಬಯಸಿದ ಮಹಾಲಿಂಗ ಭಟ್ ಅವರು ಗಿರಿಗದ್ದೆಯಲ್ಲೇ ಕೃಷಿ ಮನೆ ಮಾಡಿ ಪೇಟೆಯ ಜಂಜಾಟದಿಂದ ದೂರ ಇದ್ದರು. ಪ್ರತಿ ದಿನ ನಾಲ್ಕು ಕಿಲೋಮೀಟರ್ ಗಿರಿಗದ್ದೆಯಿಂದ ಸುಬ್ರಹ್ಮಣ್ಯ ಪೇಟೆಗೆ ಬರುತ್ತಿದ್ದ ಮಹಾಲಿಂಗ ಭಟ್ ೨೫ ಕೆಜಿ ಅಕ್ಕಿ, ಬೇಳೆ ಮುಂತಾದ ಆಹಾರ ಸಾಮಾಗ್ರಿ ಹೊತ್ತು ಮತ್ತೆ ನಾಲ್ಕು ಕಿಲೋಮೀಟರ್ ನಡೆದು ಗಿರಿಗದ್ದೆ ಸೇರುತ್ತಿದ್ದರು.

ಕುಮಾರ ಪರ್ವತ ಚಾರಣ ಮಾಡುತ್ತಿದ್ದ ಚಾರಣಗರಿಗೆ ಗಿರಿಗದ್ದೆ ಎಂಬ ಪ್ರದೇಶ ಬಲು ಪ್ರೀಯವಾಗಿತ್ತು. ಮೊದಲೇ ಹೇಳಿದರೆ ಊಟ ತಯಾರು ಮಾಡಿ ಇಡುವ ಭಟ್ರು ಬಂದ ಎಲ್ಲರಿಗೂ ಪ್ರೀತಿಯಿಂದ ಊಟ ಹಂಚಿದ್ದರು. ಹಲವು ಮಂದಿ ಚಾರಣಿಗರು ಗಿರಿಗದ್ದೆ ಭಟ್ಟರೇ ಮನೆಯಲ್ಲೇ ತಂಗಿ ಮಾರನೇ ದಿನ ಚಾರಣ ಮುಂದುವರಿಸುತ್ತಿದ್ದರು.
1974ರಲ್ಲಿ ಗಿರಿಗದ್ದೆಗೆ ಬಂದು ನೆಲೆಸಿದ ಮಹಾಲಿಂಗ ಭಟ್ ಅವರಿಗೆ ಅವರ ಅತ್ತೆ ಪರಮೇಶ್ವರಿ ಅಮ್ಮ ಅವರೂ ಸಾಥ್ ನೀಡಿದರು. ಮಹಾಲಿಂಗ ಭಟ್ ಅವರ ಮಕ್ಕಳೂ ಕಾಡಿನ ನಡುವಿನ ಜೀವನವನ್ನು ಇಷ್ಟಪಟ್ಟರು. ಹೀಗಾಗಿ ಗಿರಿಗದ್ದೆಯಲ್ಲೇ ಅಡಿಕೆ ಕೃಷಿ ಸೇರಿದಂತೆ ಇತರ ಕೃಷಿ ಮಾಡಿ ಮಹಾಲಿಂಗ ಭಟ್ ಜೀವನ ಕಂಡುಕೊಂಡಿದ್ದರು.

ಕುಮಾರ ಪರ್ವತ ಎಂಬ ಕಠಿಣ ಚಾರಣವನ್ನು ಆರಂಭಿಸಿದ ಚಾರಣಿಗರಿಗೆ ಮಹಾಲಿಂಗ ಭಟ್ ಅವರ ಮನೆ ತಾಯಿ ಮನೆಯ ರೀತಿ ಆಶ್ರಯ ನೀಡಿತ್ತು. ಪ್ರತಿಫಲಾಪೇಕ್ಷೆಯಿಲ್ಲದೇ ಕಾಡಿನ ನಡುವೆ ಬಳಲಿ ಬಂದ ಜನರಿಗೆ ಅನ್ನದಾನವನ್ನು ಮಾಡಿದ ಚಾರಣಿಗರ ಅನ್ನದೇವರು ವಿಧಿವಶರಾಗಿರುವುದು ಸಾವಿರಾರು ಚಾರಣಿಗರನ್ನು ದುಃಖ ತೃಪ್ತರನ್ನಾಗಿ ಮಾಡಿದೆ.












Click it and Unblock the Notifications