Cyclone Asani; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಗಾಳಿ, ಮಳೆ
ಮಂಗಳೂರು, ಮಾರ್ಚ್ 20; ಬಿರುಬೇಸಿಗೆಯಿಂದ ತತ್ತರಿಸಿ ಹೋಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷದ ಮೊದಲ ಮಳೆಯ ಸಿಂಚನವಾಗಿದೆ. ಇಡೀಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಶನಿವಾರ ಮಧ್ಯಾಹ್ನ ಮತ್ತು ರಾತ್ರಿ ಜಿಲ್ಲೆಯ ಹಲವೆಡೆ ಭಾರೀ ಗಾಳಿ, ಮಳೆಯಾಗಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಶುಕ್ರವಾರ ಮತ್ತು ಶನಿವಾರ ಜಿಲ್ಲೆಯ ಹಲವೆಡೆ ಭಾರೀ ಗಾಳಿ, ಮಳೆ ಸುರಿದಿದೆ. ಶನಿವಾರ ಸಂಜೆ ಸುರಿದ ಭಾರೀ ಮಳೆಗೆ ಸುಳ್ಯ ತಾಲೂಕಿನ ಕಲ್ಮಕಾರು, ಬಾಳುಗೋಡು, ಹರಿಹರ ಭಾಗದಲ್ಲಿ ಅಪಾರ ನಷ್ಟವಾಗಿದೆ. ಗಾಳಿಗೆ ಸುಮರು 150ಕ್ಕೂ ಅಧಿಕ ಅಡಿಕೆ ಮರಗಳು ಧರೆಗುರುಳಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ, ಬೆಳ್ತಂಗಡಿ, ಉಪ್ಪಿನಂಗಡಿ, ಗುರುವಾಯನಕೆರೆ, ಗೇರುಕಟ್ಟೆ, ಮುಂಡಾಜೆ, ಗೇರುಕಟ್ಟೆ ಸೇರಿದಂತೆ ಹಲವು ಭಾಗದಲ್ಲಿ ಭಾರೀ ಮಳೆಯಾಗಿದೆ. ಅನಿರೀಕ್ಷಿತ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ನಡೆಯುತ್ತಿದ್ದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಡೆಯಾಗಿದೆ. ಶನಿವಾರ ತಡರಾತ್ರಿಯೂ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರೀ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಅಲ್ಲಲ್ಲಿ ನಡೆಯುತ್ತಿದ್ದ ದೇವಸ್ಥಾನಗಳ ಬ್ರಹ್ಮಕಲಶೋತ್ಸವ, ನೇಮೋತ್ಸವಕ್ಕೂ ಅಡ್ಡಿಯಾಗಿದೆ.
ಪುತ್ತೂರಿನ ಮಹೋತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಎದುರಿನ ಬಾಕಿಮಾರು ಗದ್ದೆಯಲ್ಲಿ ನಡೆಯುತ್ತಿದ್ದ ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳಕ್ಕೂ ಭಾರೀ ಮಳೆ ಅಡ್ಡಿ ಮಾಡಿದೆ. ತಡರಾತ್ರಿಯೂ ಕಂಬಳವನ್ನು ತದೇಕಚಿತ್ತದಿಂದ ಕಾಣುತ್ತಿದ್ದ ಸಾವಿರಾರು ಅಭಿಮಾನಿಗಳಿಗೆ ಭಾರೀ ಮಳೆ ಕಿರಿಕಿರಿಯನ್ನುಂಟು ಮಾಡಿದೆ.

ಬಿರು ಬೇಸಗೆಯಿಂದ ತತ್ತರಿಸಿದ ದಕ್ಷಿಣ ಕನ್ನಡ ಜಿಲ್ಲೆಗೆ ಮಳೆ ತಂಪನ್ನು ಬೀರಿದೆ. ಉರಿ ಬಿಸಿಲಿನ ಹಿನ್ನಲೆಯಲ್ಲಿ ತಾಪಮಾನ 40 ಡಿಗ್ರಿಯವರೆಗೂ ಏರಿದೆ. ಜಿಲ್ಲೆಯ ಜೀವ ನದಿ ನೇತ್ರಾವತಿ ಮತ್ತು ಕುಮಾರಾಧಾರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಬಾವಿ, ಕೆರೆ, ಕೊಳವೆ ಬಾವಿಗಳಲ್ಲೂ ಅಂತರ್ಜಾಲ ಮಟ್ಟ ಕುಸಿದಿದೆ.
ಅಡಿಕೆ, ತೆಂಗು, ಬಾಳೆ ತೋಟಕ್ಕೆ ಬೇಕಾದ ಪ್ರಮಾಣದಲ್ಲಿ ನೀರು ಸಿಗದೆ ಬಿಸಿಲಿನ ಹೊಡೆತಕ್ಕೆ ಅಡಿಕೆ ಹಿಂಗಾರವೂ ಕರಟಿದೆ. ಆದರೆ ಈಗ ಜಿಲ್ಲೆಯಾದ್ಯಂತ ಉತ್ತಮ ಮಳೆಯ ಸಿಂಚನವಾಗಿದ್ದು, ಕೃಷಿಕರಲ್ಲಿ ನೆಮ್ಮದಿ ತರಿಸಿದೆ.












Click it and Unblock the Notifications