ಮಂಗಳೂರು ದಸರಾಕ್ಕಾಗಿ ಸೈಕಲ್ ಜಾಥಾ
ಮಂಗಳೂರು, ಸೆ.23 : ಅತ್ತ ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಸಿದ್ಧತೆಗೆಳು ನಡೆಯುತ್ತಿವೆ. ಇತ್ತ ಕರಾವಳಿ ತೀರದ ಮಂಗಳೂರಿನಲ್ಲಿ ದಸರಾ ಉತ್ಸವ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ ದಸರಾದಲ್ಲಿ ಸೈಕಲ್ ಜಾಥಾ ಏರ್ಪಡಿಸಲಾಗಿದೆ.
ಮಂಗಳೂರಿನ ಕಾಂಚನ ಹುಂಡೈ ಅಂಡ್ ರಾವ್ ಅಸೋಸಿಯೇಟ್ಸ್ ಏಳು ಕಿ.ಮೀ.ಉದ್ದದ ಬೈಸಿಕಲ್ ಜಾಥಾ ಏರ್ಪಡಿಸಲಾಗಿದೆ. ಅ.6ರಂದು ಸೈಕಲ್ ರೈಡ್ 2013 ಎಂಬ ಶೀರ್ಷಿಕೆಯಡಿ ಈ ಸೈಕಲ್ ಜಾಥಾ ನಡೆಯಲಿದೆ.

ಮಂಗಳೂರಿನ ದಸರಾ ಆಚರಣೆ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಾ, ಆರೋಗ್ಯದ ಕಾಳಜಿ ಮೂಡಿಸು ಉದ್ದೇಶದಿಂದ ಈ ಜಾಥಾ ಹಮ್ಮಿಕೊಳ್ಳಲಾಗಿದೆ. ಜಾಥಾದಲ್ಲಿ ವಿವಿಧ ವಯೋಮಾನದ ಸುಮಾರು 1000 ಜನರು ಭಾಗವಹಿಸುವ ನಿರೀಕ್ಷೆ ಇದೆ.
ಪುರುಷರು, ಮಹಿಳೆಯರು ಮತ್ತು ಮಕ್ಕಳು ಎಂದು ಮೂರು ವಿಭಾಗಳಲ್ಲಿ ಸ್ಪರ್ಧೆ ನಡೆಸಲು ಉದ್ದೇಶಿಸಲಾಗಿದೆ. ಸೈಕಲ್ ಜಾಥಾದಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಜಾನಪದ ತಂಡಗಳು ಮನರಂಜನೆ ನೀಡಲಿವೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ 25,000 ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳು ದೊರೆಯಲಿವೆ.
ಜಾಥಾದ ಮಾರ್ಗ : ಕುದ್ರೋಳಿ ದೇವಾಲಯದಿಂದ ಜಾಥಾ ಪ್ರಾರಂಭವಾಗಲಿದೆ. ನಂತರ ಲೇಡಿ ಹಿಲ್ ಸರ್ಕಲ್, ಲಾಲ್ ಬಾಗ್, ಜೈಲ್ ರಸ್ತೆ, ಪಿಂಟೋಸ್ ಲೇನ್, ತೇಜಸ್ವಿನಿ ಆಸ್ಪತ್ರೆ, ಬಂಟ್ಸ್ ಹಾಸ್ಟೆಲ್, ಪಿವಿಎಸ್, ನವಭಾರತ್ ಸರ್ಕಲ್ ಮಾರ್ಗವಾಗಿ ಸಾಗಿ, ಕೆನರಾ ಹೈಸ್ಕೂಲ್ ನಲ್ಲಿ ಮುಕ್ತಾಯಗೊಳ್ಳಲಿದೆ.
ಜಾಥಾದಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ ಮತ್ತು ಟಿ ಶರ್ಟ್ ನೀಡಲಾಗುವುದು ಎಂದು ಸಂಘಟಕರಾದ ರಾಜೇಶ್ ಹೇಳಿದ್ದಾರೆ. ಜಾಥಾದಲ್ಲಿ ಸ್ಪರ್ಧಿಗಳಿಗೆ ತೊಂದರೆ ಆಗದಂತೆ, ಅಗತ್ಯ ವೈದ್ಯಕೀಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಜಾಥಾದಲ್ಲಿ ಭಾಗವಹಿಸಲು ಇಚ್ಛಿಸುವವರು 0824 - 2426048, 8497836307 ನಂಬರ್ ಗೆ ಕರೆ ಮಾಡಬಹುದಾಗಿದೆ.












Click it and Unblock the Notifications