ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ಕೋಟ್ಯಾಂತರ ರೂ. ಪಂಗನಾಮ!
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಹೇಳಿಕೊಂಡು ವಿಧಾನಸಭೆ ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣವೊಂದು ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಈ ಹಿಂದೆ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಚೈತ್ರಾ ಕೂಡ ಇದೇ ರೀತಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಹಣ ವಂಚನೆ ಮಾಡಿದ ಆರೋಪ ಹೊತ್ತುಕೊಂಡಿದ್ದಾರೆ. ಈ ಪ್ರಕರಣ ಇತ್ಯಾರ್ಥವಾಗುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು ರಾಜ್ಯ ರಾಜಕೀಯದಲ್ಲಿ ಹಣಕ್ಕಾಗಿ ಸ್ಥಾನಗಳು ಮಾರಾಟಕ್ಕಿವೆಯೇ ಎನ್ನುವ ಅನುಮಾನಗಳು ದಟ್ಟವಾಗತೊಡಗಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರಿನ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 2.55 ಕೋಟಿ ರೂಪಾಯಿ ವಂಚಿಸಿದ ಪ್ರಕರಣ ರಾಜ್ಯ ಬಿಜೆಪಿಯಲ್ಲಿ ಕಂಪನ ಸೃಷ್ಟಿಸಿದೆ. ವಂಚಿತರಾದ ಹಗರಿಬೊಮ್ಮನಹಳ್ಳಿಯ ಶಿವಮೂರ್ತಿ, ವಿಜಯಪುರದ ರೇವಣ್ಣ ಸಿದ್ದಪ್ಪ ಹಾಗೂ ಪುತ್ತೂರು ಬಿಜೆಪಿಯ ಮುಖಂಡ ಶೇಖರ್ ಎನ್.ಪಿ ಎನ್ನುವವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ವಿಜಯನಗರ ಜಿಲ್ಲೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಿಜಯಪುರದ ರೇವಣ್ಣ ಸಿದ್ದಪ್ಪ ಹಾಗೂ ಪುತ್ತೂರು ಬಿಜೆಪಿಯ ಮುಖಂಡ ಶೇಖರ್ ಎನ್.ಪಿ ಎನ್ನುವವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಹೇಳಿಕೊಂಡು ವಿಧಾನಸಭೆ ಟಿಕೆಟ್ ಕೊಡಿಸುವುದಾಗಿ ಹೇಳಿ ಶಿವಮೂರ್ತಿ ಅವರ ಬಳಿ ಕೋಟ್ಯಾಂತರ ರೂಪಾಯಿ ಹಣ ಸುಲಿಗೆ ಮಾಡಿದ್ದಾರೆ ಎಂದು ದೂರಲಾಗಿದೆ. ಶೇಖರ್ ಅವರು ನಳಿನ್ ಕುಮಾರ್ ಅವರನ್ನು ಭೇಟಿ ಮಾಡಿದ್ದು, ಬಳಿಕ ಕಟೀಲ್ ಕರೆ ಮಾಡಿ ಟಿಕೆಟ್ ವಿಚಾರವಾಗಿ ಶೇಖರ್ ಜೊತೆ ಮಾತನಾಡಿ ಎಂದು ಹೇಳಿದ್ದರು ಎಂದು ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೆಸರು ಕೇಳಿಬಂದಿದ್ದು, ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.












Click it and Unblock the Notifications