ಅಧರ್ಮದಲ್ಲಿ ಹೋದವರನ್ನು ನೋಡಿಕೊಳ್ಳುತ್ತೇನೆ: ವಿನಯ್ ಕುಲಕರ್ಣಿ ಸೇವೆಯಲ್ಲಿ ಅಬ್ಬರಿಸಿದ ಕೊರಗಜ್ಜ
ಮಂಗಳೂರು, ಜುಲೈ 28: ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಧಾರವಾಡ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸದ್ಯ ಕೊರಗಜ್ಜ ದೈವದ ಮೊರೆ ಹೋಗಿದ್ದಾರೆ.
ಯೋಗೇಶ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯ ವಿನಯ್ ಕುಲಕರ್ಣಿಗೆ ಧಾರವಾಡ ಕ್ಷೇತ್ರ ಪ್ರವೇಶಿಸದಂತೆ ನಿರ್ಬಂಧ ಹೇರಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಂಕಷ್ಟ ಪರಿಹಾರಕ್ಕಾಗಿ ದೈವದ ಮೊರೆ ಹೋಗಿದ್ದಾರೆ.

ಮಂಗಳೂರಿನ ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಕೊರಗಜ್ಜನ ಕಟ್ಟೆಯಲ್ಲಿ ಹರಕೆ ಕೋಲ ಸೇವೆಯಲ್ಲಿ ಶಾಸಕ ವಿನಯ್ ಕುಲಕರ್ಣಿ ಮತ್ತು ಕುಟುಂಬಸ್ಥರು ಭಾಗಿ ಆಗಿದ್ದಾರೆ. ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ಅವರಿಗೆ ಸ್ಪೀಕರ್ ಯು.ಟಿ.ಖಾದರ್ ಸಹೋದರ ಇಫ್ತಿಕಾರ್ ಆಲಿ ಸಾಥ್ ನೀಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಕ್ಷೇತ್ರಕ್ಕೆ ಭೇಟಿ ನೀಡದೆಯೇ ಬಿಜೆಪಿ ಅಭ್ಯರ್ಥಿ ವಿರುದ್ಧ ವಿನಯ್ ಕುಲಕರ್ಣಿ ಗೆದ್ದಿದ್ದಾರೆ. ಯೋಗೇಶ ಗೌಡ ಹತ್ಯೆ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಕ್ಷೇತ್ರ ಪ್ರವೇಶಕ್ಕೆ ನಿರ್ಬಂಧ ಮುಂದುವರಿದಿದೆ. ಮುಂದಿನ ತಿಂಗಳು ಕೋರ್ಟ್ ವಿಚಾರಣೆ ನಡೆಯಲಿದೆ ಎಂಬ ಮಾಹಿತಿ ಇದೆ.
48 ದಿನದೊಳಗೆ ಧಾರವಾಡ ಕ್ಷೇತ್ರ ಪ್ರವೇಶ ನಿರ್ಬಂಧ ತೆರವು
ಕೋಲದಲ್ಲಿ 48 ದಿನಗಳ ಒಳಗೆ ಸಮಸ್ಯೆ ಬಗೆಹರಿಸುವುದಾಗಿ ಕೊರಗಜ್ಜ ಅಭಯ ನೀಡಿದೆ. 48 ದಿನಗಳ ಒಳಗೆ ಧಾರವಾಡ ಕ್ಷೇತ್ರ ಪ್ರವೇಶ ನಿರ್ಬಂಧ ತೆರವಿನ ಬಗ್ಗೆ ದೈವ ನುಡಿದಿದೆ. ಇನ್ನು ಮೂರು ವರ್ಷಗಳ ಕಾಲ ಬಹಳ ಸೂಕ್ಷ್ಮವಾಗಿ ಇರುವಂತೆ ದೈವ ಸೂಚನೆ ನೀಡಿದೆ.

ಹೆಣ್ಣಿನ ಕಾರಣದಿಂದಲೇ ಈ ಎಲ್ಲಾ ಸಂಕಷ್ಟ ಎದುರಾಗಿದ್ದು, ಅಧರ್ಮದಲ್ಲಿ ಹೋದವರನ್ನು ನಾನು ನೋಡಿಕೊಳ್ಳುತ್ತೇನೆ. ಸಂಕಷ್ಟ ನಿವಾರಣೆ ಬಳಿಕ ಸಂತೋಷದಿಂದ ಕೋಲಸೇವೆ ನೀಡುವಂತೆ ತೊಕ್ಕೊಟ್ಟಿನ ಕೊರಗಜ್ಜ ಸನ್ನಿಧಿಯಲ್ಲಿ ಶಾಸಕ ವಿನಯ್ ಕುಲಕರ್ಣಿಗೆ ಅಭಯ ನೀಡಲಾಗಿದೆ.
ಕೋಲಸೇವೆ ಬಗ್ಗೆ ಶಾಸಕ ವಿನಯ್ ಕುಲಕರ್ಣಿ ಮಾತನಾಡಿದ್ದು, ಚುನಾವಣಾ ಪೂರ್ವದಲ್ಲಿಯೇ ಕೋಲ ಸೇವೆಯ ಬಗ್ಗೆ ಕಾಂಗ್ರೆಸ್ ನಾಯಕರು, ನನ್ನ ಸ್ನೇಹಿತರು ಹೇಳಿದ್ದರು. ಈಗ ಸಮಯ ಕೂಡಿ ಬಂದ ಹಿನ್ನೆಲೆ ಕುಟುಂಬ ಸಮೇತರಾಗಿ ಬಂದು ಕೋಲ ಸೇವೆಯಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದ್ದಾರೆ.












Click it and Unblock the Notifications