ದಾರಿಯುದ್ದಕ್ಕೂ ಫೋನ್ ನಲ್ಲಿ ಕ್ಷಮೆ ಕೇಳಿದ್ದ ಸಿದ್ಧಾರ್ಥ
ಮಂಗಳೂರು, ಜುಲೈ 30: ಕೆಫೆ ಕಾಫಿ ಡೇ ಮಾಲೀಕ ಉದ್ಯಮಿ ಸಿದ್ಧಾರ್ಥ ಅವರ ನಾಪತ್ತೆ ಪ್ರಕರಣವನ್ನು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಸಿದ್ದಾರ್ಥ ನಾಪತ್ತೆಯಾಗಿದ್ದ ಉಳ್ಳಾಲದ ನೇತ್ರಾವತಿ ಸೇತುವೆ ಮೇಲೆ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮರಾದಲ್ಲಿ ದಾಖಲಾಗಿರುವ ವಿಡಿಯೋಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಸಿದ್ದಾರ್ಥ ಅವರು ಬಳಸಿದ ಕಾರನ್ನು ನಗರದ ಕಂಕನಾಡಿ ನಗರ ಠಾಣೆಯಲ್ಲಿ ಇರಿಸಲಾಗಿದೆ.
ನೇತ್ರಾವತಿ ನದಿಯಲ್ಲಿ ಶೋಧಕಾರ್ಯ ಮುಂದುವರೆದಿದ್ದು, ಮುಳುಗು ತಜ್ಜರು, ಎನ್ ಡಿಆರ್ ಫ್ ಟೀಮ್ ಅಳವೆ ಬಾಗಿಲಿನಲ್ಲಿ ಕಾರ್ಯಾಚರಣೆ ಮುಂದುವರೆಸಿದೆ. ಶೋಧಕಾರ್ಯಕ್ಕೆ ಭಾರತೀಯ ತಟ ರಕ್ಷಣಾ ಪಡೆಯ ಹೋವರ್ ಕ್ರಾಫ್ಟ್ ಸಹಾಯ ಪಡೆಯಲಾಗಿದೆ.

ಈ ನಡುವೆ ಸಿದ್ಧಾರ್ಥ್ ನಾಪತ್ತೆಯಾಗುವ ಮೊದಲು ಕಾರಿನಲ್ಲಿ ತನ್ನ ಸ್ನೇಹಿತರಿಗೆಲ್ಲಾ ಕರೆ ಮಾಡಿ ನನ್ನನ್ನು ಕ್ಷಮಿಸಿಬಿಡಿ ಎಂದು ಹೇಳುತ್ತಿದ್ದರು ಎಂದು ಅವರ ಕಾರಿನ ಡ್ರೈವರ್ ಬಸವರಾಜ್ ಮಾಹಿತಿ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ದಾರಿಯುದ್ದಕ್ಕೂ ಸ್ನೇಹಿತರಿಗೆಲ್ಲಾ ಕರೆ ಮಾಡಿ ನನ್ನನ್ನು ಕ್ಷಮಿಸಿಬಿಡಿ ಎಂದು ಕೇಳಿಕೊಳ್ಳುತ್ತಿದ್ದರು. ಮಂಗಳೂರು ಸರ್ಕಲ್ ಗೆ ಹೋಗುವವರೆಗೂ ಸ್ನೇಹಿತರ ಬಳಿ ಕ್ಷಮೆ ಕೇಳಿದರು ಎಂದು ಬಸವರಾಜ್ ವಿವರಿಸಿರುವುದಾಗಿ ತಿಳಿದುಬಂದಿದೆ.












Click it and Unblock the Notifications