ಮಂಗಳೂರು: ಸಮುದ್ರ ಮಧ್ಯದಲ್ಲಿದ್ದ ಹಡಗಿನಲ್ಲಿ ಕುಸಿದು ಬಿದ್ದ ಸಿಬ್ಬಂದಿ, ಕೋಸ್ಟ್ ಗಾರ್ಡ್‌ನಿಂದ ರಕ್ಷಣೆ
ಮಂಗಳೂರು, ಡಿಸೆಂಬರ್ 27: ಸಮುದ್ರದ ಮಧ್ಯದಲ್ಲಿ ಹಡಗಿನಲ್ಲಿ ಸಿಬ್ಬಂದಿಯೊಬ್ಬರು ಪ್ರಜ್ಞಾಹೀನರಾಗಿದ್ದು, ಅವರನ್ನು ರಕ್ಷಿಸುವಲ್ಲಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಯಶಸ್ವಿ ಆಗಿದ್ದಾರೆ. ಎನ್‌ಎಂಪಿಎ ಬಂದರು ಪ್ರದೇಶದಿಂದ 9.5 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಲಂಗರು ಹಾಕಿದ್ದ ಲೈಬೀರಿಯಾ ಮೂಲದ ತೈಲ ಟ್ಯಾಂಕರ್ ಹಡಗಿನಲ್ಲಿ ಸಿಬ್ಬಂದಿಯೊಬ್ಬರು ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.
ಎಂಟಿ ಐವರಿ ರೇ ಎಂಬ ಹಡಗಿನಲ್ಲಿದ್ದ ಸಿಬ್ಬಂದಿ ನಿನ್ನೆ ರಾತ್ರಿ ವಾಶ್ ರೂಮಿನಲ್ಲಿದ್ದ ಏಕಾಏಕಿ ಕುಸಿದು ಬಿದ್ದಿದ್ದಾರೆ. ಜೊತೆಯಲ್ಲಿದ್ದ ಇತರ ಸಿಬ್ಬಂದಿ ತಕ್ಷಣ ಕರ್ನಾಟಕದ ಕೋಸ್ಟ್ ಗಾರ್ಡ್‌ಗೆ ರಕ್ಷಣೆ ಕೋರಿದ್ದಾರೆ. ಕೋಸ್ಟ್ ಗಾರ್ಡ್‌ಗೆ ಮಧ್ಯರಾತ್ರಿ 12.30ರ ವೇಳೆಗೆ ಕರೆ ಬಂದಿತ್ತು. ತುರ್ತಾಗಿ ಸ್ಪಂದಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ಸಿ-448 ಇಂಟರ್ ಸೆಪ್ಟರ್ ಬೋಟ್ ನಲ್ಲಿ ವೈದ್ಯರ ಸಹಿತ ಹಡಗಿನ ಬಳಿಗೆ ತೆರಳಿದ್ದಾರೆ.

ತಡರಾತ್ರಿ 2.10ರ ವೇಳೆಗೆ ಬೋಟ್ ಅಲ್ಲಿಗೆ ತಲುಪಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರಿಗೆ ತುರ್ತು ಚಿಕಿತ್ಸೆ ನೀಡಿ, ತಕ್ಷಣ ಅವರನ್ನು ಮಂಗಳೂರಿನ ಬಂದರಿಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಐವರಿ ರೇ ಹಡಗು ತೈಲ ಮತ್ತು ಕೆಮಿಕಲ್ ಸರಕನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಈ ಹಡಗು 13 ದಿನಗಳ ಹಿಂದೆ ಲೈಬೀರಿಯಾದಿಂದ ಕೆಂಪು ಸಮುದ್ರ ಮೂಲಕ ಮಂಗಳೂರು ಬಂದರಿಗೆ ಆಗಮಿಸಿತ್ತು. ಮಂಗಳೂರು ಬಂದರಿನಲ್ಲಿ ಒಳಬರಲು ಸಿಗ್ನಲ್ ಸಿಗದೇ ಇದ್ದುದರಿಂದ ಸಮುದ್ರ ಮಧ್ಯೆ ಲಂಗರು ಹಾಕಿತ್ತು. ಈ ವೇಳೆ, ಸಿಬ್ಬಂದಿ ತೀವ್ರ ಅಸ್ವಸ್ಥಗೊಂಡ ಘಟನೆ ನಡೆದಿತ್ತು.
ನದಿಗೆ ಸ್ನಾನ ಮಾಡಲೆಂದು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು
ಉಡುಪಿ: ನದಿಯ ಬಳಿ ಸ್ನಾನ ಮಾಡಲೆಂದು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಪಟ್ಟಿಬಾವು ಬಳಿ ನಡೆದಿದೆ. ಕಾರ್ಕಳ ಅಜಯ್ (21) ಮೃತ ಯುವಕ ಎಂದು ಗುರುತಿಸಲಾಗಿದೆ. ಕಾರ್ಕಳದಲ್ಲಿ ಎಲೆಕ್ಟ್ರೀಷಿಯನ್ ಕೆಲಸ ಮಾಡಿಕೊಂಡಿದ್ದು ಅಜಯ್ ಸ್ನೇಹಿತರಾದ ಮನೋಜ್, ಮನೋಹರ ಹಾಗೂ ಇತರರೊಂದಿಗೆ ಬೈರಂಪಳ್ಳಿ ಗ್ರಾಮದ ಕೆ ಸಿ ರೋಡ್ ಗೆ ವಾಲಿಬಾಲ್ ಆಡಲೆಂದು ಮನೆಯಿಂದ ಹೋಗಿದ್ದಾನೆ.
ವಾಲಿಬಾಲ್ ಆಟ ಆಡಿದ ನಂತರ ಮೃತ ಅಜಯ್ ತನ್ನ ಸ್ನೇಹಿತರೊಂದಿಗೆ ಪಟ್ಟಿಬಾವು ಹೊಳೆಯ ಬಳಿ ಸ್ನಾನ ಮಾಡಲೆಂದು ಹೋಗಿದ್ದಾರೆ ನದಿಯ ಇನ್ನೊಂದು ದಡಕ್ಕೆ ಹೋಗುವುದಾಗಿ ಹೊಳೆಯ ನೀರಿಗಿಳಿದಿದ ಅಜಯ್ ಮದ್ಯದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಉಡುಪಿಯ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications