ಕದ್ರಿ ಪಾರ್ಕ್ ನಲ್ಲಿ ಪುಟಾಣಿ ರೈಲು, ಸಂಗೀತ ಕಾರಂಜಿಗೆ ಸಿಎಂ ಚಾಲನೆ
ಮಂಗಳೂರು, ಜನವರಿ 8: ಮಂಗಳೂರಿನ ಚಿಣ್ಣರಿಗೆ ಇದು ಸಂತೋಷದ ಸುದ್ದಿ. ನಗರದ ಕದ್ರಿ ಪಾರ್ಕ್ ನಲ್ಲಿ ಕಳೆದ 5 ವರ್ಷಗಳಿಂದ ಓಡಾಟ ನಿಲ್ಲಿಸಿದ್ದ ಬಾಲಮಂಗಳ ಎಕ್ಸ್ ಪ್ರೆಸ್ ಪುಟಾಣಿ ರೈಲು ಮತ್ತೆ ಚುಕುಬುಕು ಸದ್ದು ಹೊರಡಿಸಲಿದೆ.
ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾತ್ರಿ ಪುಟಾಣಿಗಳ ಬಾಲಮಂಗಳ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದರು.
ಭಾನುವಾರ ಬೆಳ್ತಂಗಡಿ, ಪುತ್ತೂರು ಹಾಗೂ ಮೂಡಬಿದ್ರೆಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಉದ್ಘಾಟಿಸಿ ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕದ್ರಿ ಪಾರ್ಕ್ ಗೆ ಭೇಟಿ ನೀಡಿ ಬಾಲಮಂಗಳ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದರು.

ರೈಲು ಈಗ ಓಡಲ್ಲ
ಆದರೆ ಹೊಸ ರೈಲಿಗೆ ಕೆಲವು ಭಾಗಗಳ ಜೋಡಣೆ , ರೈಲ್ವೆ ಇಲಾಖೆಯಿಂದ ಹಳಿ ಪರಿಶೀಲನೆ ಕಾರ್ಯ ಬಾಕಿ ಇದ್ದು ರೈಲು ಸವಾರಿಯನ್ನು ಆನಂದಿಸುವ ಭಾಗ್ಯಕ್ಕೆ ಮಾತ್ರ ಮಕ್ಕಳು ಇನ್ನಷ್ಟು ದಿನ ಕಾಯಬೇಕಾಗಿದೆ.

ಸಂಗೀತ ಕಾರಂಜಿ ಉದ್ಘಾಟನೆ
ಕರಾವಳಿಗರು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಸಂಗೀತ ಕಾರಂಜಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು . ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನೂತನವಾಗಿ ಈ ರಾಜೀವ ಗಾಂಧಿ ಸಂಗೀತ ಕಾರಂಜಿ ನಿರ್ಮಿಸಲಾಗಿದೆ.

ಜಿಂಕೆ ಪಾರ್ಕ್ ಪಕ್ಕದಲ್ಲಿ ಕಾರಂಜಿ
ಕದ್ರಿ ಪಾರ್ಕ್ ಪಕ್ಕದಲ್ಲೇ ಜಿಂಕೆ ಪಾರ್ಕ್ ಎಂದು ಕರೆಸಿಕೊಳ್ಳುವ ಉದ್ಯಾನವನ ಇದೆ. ಇದನ್ನು ಒಟ್ಟು 7 ಕೋಟಿ ರೂಪಾಯಿ ವೆಚ್ಚದಲ್ಲಿ ಸುಂದರ ಉದ್ಯಾನವನವಾಗಿ ರೂಪುಗೊಳಿಸಲಾಗಿದೆ. ಇದರ ಪಕ್ಕದಲ್ಲೇ ಈ ಸಂಗೀತ ಕಾರಂಜಿ ಇದೆ.

ತುಳುನಾಡಿನ ಇತಿಹಾಸ ಪರಿಚಯ
ನೂತನವಾಗಿ ನಿರ್ಮಿಸಲಾದ ಸಂಗೀತ ಕಾರಂಜಿಯ ಮೂಲಕ ತುಳುನಾಡಿನ ಸಂಸ್ಕೃತಿ , ಪರಂಪರೆ, ಆಚರಣೆ ಸೇರಿದಂತೆ ಭವ್ಯ ಇತಿಹಾಸವನ್ನು ಪರಿಚಯಿಸುವ ಪ್ರಯತ್ನವನ್ನೂ ಮಾಡಲಾಗಿದೆ. ಪ್ರತಿ ದಿನ ಸಂಜೆ 7:30 ಕ್ಕೆ ಸಾರ್ವಜನಿಕರು ಈ ಸಂಗೀತ ಕಾರಂಜಿ ಕಾರ್ಯಕ್ರಮವನ್ನು ಕಣ್ತುಂಬಿ ಕೊಳ್ಳಬಹುದಾಗಿದೆ.












Click it and Unblock the Notifications