ಕರಾವಳಿ ಕ್ರೈಸ್ತರ ಕುರಲ್ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಣೆಗೆ ಒತ್ತಾಯ
ಮಂಗಳೂರು, ಜುಲೈ 11: ಕರಾವಳಿಯ ಕ್ರೈಸ್ತರಿಗೆ ಮರಿಯಮ್ಮ ಜಯಂತಿ ಅಥವಾ ಕುರಲ್ ಹಬ್ಬ ವಿಶೇಷವಾಗಿದ್ದು, ಅಂದು ಕರಾವಳಿ ಜಿಲ್ಲೆಗಳಲ್ಲಿ ಸಾರ್ವತ್ರಿಕ ರಜಾ ಘೋಷಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.
ಸೆಪ್ಟೆಂಬರ್ 8ರಂದು ಮರಿಯಮ್ಮ ಜಯಂತಿ ಕರಾವಳಿಯಲ್ಲಿ ಆಚರಿಸುವ ಹಿನ್ನೆಲೆಯಲ್ಲಿ ಅಂದು ಸಾರ್ವತ್ರಿಕ ರಜೆ ಘೋಷಿಸುವಂತೆ ಕೆಥೊಲಿಕ್ ಸಭಾದಿಂದ ರಾಜ್ಯ ಸರಕಾರವನ್ನು ಒತ್ತಾಯಿಸಲಾಗಿದೆ.
ಮರಿಯಮ್ಮ ಜಯಂತಿ ಕನ್ನಯಾ ಮರಿಯಮ್ಮನವರ ಜನ್ಮದಿನವಾಗಿದ್ದು, ಆ ದಿನವನ್ನು ಕರಾವಳಿಯ ಕ್ರೈಸ್ತರು ಕೊಯ್ಲು ಹಬ್ಬವಾಗಿ ಆಚರಿಸುತ್ತಾರೆ. ರೈತರು ಬೆಳೆದ ಹೊಸ ಫಸಲನ್ನು ದೇವರಿಗೆ ಅರ್ಪಿಸಿ, ಪ್ರಾರ್ಥನಾ ಮಂದಿರಗಳಲ್ಲಿ ಪೂಜಾ ವಿಧಿಗಳೊಂದಿಗೆ ತಮ್ಮ ಮನೆಗಳಲ್ಲಿ ಸಹಭೋಜನ ಮಾಡುತ್ತಾರೆ.

4 ಲಕ್ಷದಷ್ಟು ಕ್ರೈಸ್ತರು ಕರಾವಳಿಯಲ್ಲಿಇದ್ದಾರೆ. ಕ್ರೈಸ್ತ ಸಮುದಾಯದವರ ಈ ಮರಿಯಮ್ಮ ಜಯಂತಿ ವಿಶೇಷ ಹಬ್ಬಕ್ಕೆ ಕರಾವಳಿ ಜಿಲ್ಲೆಗಳನ್ನು ಸೀಮಿತಗೊಳಿಸಿ, ಸೆಪ್ಟೆಂಬರ್ 8ರಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆಯಾಗಿ ಘೋಷಿಸಬೇಕೆಂದು ಕೆಥೊಲಿಕ್ ಸಭಾದ ಮಂಗಳೂರು ಪ್ರದೇಶದ ಅಧ್ಯಕ್ಷ ರೋಲ್ಫಿ ಡಿಕೋಸ್ತಾ ಒತ್ತಾಯಿಸಿದ್ದಾರೆ.
ಕ್ರೈಸ್ತ ಸಮುದಾಯದ ಬಡ, ಮದ್ಯಮ ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ಸರ್ವತೋಮುಖ ಅಬಿವೃದ್ಧಿಗೆ ಪ್ರತ್ಯೇಕ ಕ್ರೈಸ್ತ ನಿಗಮ ಸ್ಥಾಪಿಸಬೇಕಂದು ಒತ್ತಾಯಿಸಲಾಗುತ್ತಿದೆ. ಈ ಬೇಡಿಕೆಗಳನ್ನು ಮುಂದಿಟ್ಟು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಹಾಗೂ ಸಚಿವ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ಈ ಬೇಡಿಕೆಗಳ ಮಹತ್ವ ಮನವರಿಕೆ ಮಾಡಿಸುವ ದೃಷ್ಠಿಯಿಂದ ಕೆಥೊಲಿಕ್ ಸಭಾದ ಪದಾಧಿಕಾರಿಗಳು ಹಾಗೂ ಕ್ರೈಸ್ತ ಧರ್ಮಗುರುಗಳು ಸದ್ಯದಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಿದ್ದಾರೆ.












Click it and Unblock the Notifications