'ಪೇಜಾವರ ಸ್ವಾಮೀಜಿಯವರನ್ನು ಭೇಟಿ ಮಾಡಿದಕ್ಕೆ ಬೆದರಿಕೆ ಕರೆಗಳು: ರಹೀಂ
ಮಂಗಳೂರು, ಮಾರ್ಚ್. 21 : ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಅಲ್ಲದೆ ನನ್ನ ಕೊಲೆ ಯತ್ನ ನಡೆಯುತ್ತಿದೆ ಎಂದು ಬಿಜೆಪಿ ಮುಖಂಡ ರಹೀಂ ಉಚ್ಚಿಲ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಧರ್ಮ ವಿರೋಧಿಯಲ್ಲ. ಮುಸ್ಲಿಂ ಸಮುದಾಯ ಆಚರಿಸುವ ಎಲ್ಲಾ ಆಚಾರ-ವಿಚಾರಗಳನ್ನು ಶ್ರದ್ಧೆಯಿಂದ ಪಾಲಿಸುತ್ತೇನೆ.
ಇಷ್ಟಾದರೂ ನಾನು ಧರ್ಮವಿರೋಧಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇನ್ನು ಕಳೆದ ವಾರ ಉಡುಪಿಯಲ್ಲಿ ಪೇಜಾವರ ಸ್ವಾಮೀಜಿಯವರನ್ನು ಭೇಟಿ ಮಾಡಿ ಅವರಿಂದ ಗೌರವ ಶಾಲು ಹೊದಿಸಿಕೊಂಡಿದ್ದಕ್ಕೆ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ತನ್ನ ಮೇಲೆ ಬಂದಿರುವ ಆರೋಪಗಳ ಕುರಿತು ಪೊಲೀಸರಿಗೆ ದೂರು ನೀಡಿದರೆ, ನ್ಯಾಯಾಲಯದ ಅನುಮತಿ ಪಡೆದು ಎಫ್ಐಆರ್ ದಾಖಲಿಸುವುದಾಗಿ ಹೇಳುತ್ತಾರೆ ಎಂದರು.
ತಾನು ಬಿಜೆಪಿ ಸೇರಿದಾಗಿನಿಂದ ತನ್ನ ಮೇಲೆ ಕೊಲೆಯತ್ನ ನಡೆಯುತ್ತಿದೆ. ಪಾಕಿಸ್ತಾನ, ಕಾಶ್ಮೀರದಿಂದಲೂ ಬೆದರಿಕೆ ಕರೆಗಳು ಬಂದಿವೆ. ಬಿಜೆಪಿ ತೊರೆಯುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications