Lok Sabha Election 2024: ನಳೀನ್ ಕುಮಾರ್ ಕಟೀಲ್‌ಗೆ 'ಕಡ್ಡಾಯ ನಿವೃತ್ತಿ' ನೀಡಲು ನಿರ್ಧರಿಸಿದ ಬಿಜೆಪಿ
ಮಂಗಳೂರು, ಮಾರ್ಚ್ 13: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗಿದೆ. ಈಗಾಗಲೇ ಬಿಜೆಪಿಯಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಹಾಗೂ ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಅಧಿಕೃತ ಚಾಲನೆ ಸಿಗಲಿದೆ.
ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಒಂದಿಷ್ಟು ಬದಲಾವಣೆಗಳಾಗುತ್ತಿದ್ದು, ಈ ಬಾರಿ ಬಿಜೆಪಿ ಪಕ್ಷದಲ್ಲಿ ಒಂದಿಷ್ಟು ಮುಖ್ಯವಾದ ಬದಲಾವಣೆಗಳಾಗಲಿದ್ದು, ಬಿಜೆಪಿಯ ಹಾಲಿ ಸಂಸದರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುವ ಸಾಧ್ಯತೆ ಹೆಚ್ಚಿದೆ.

ಮೈಸೂರಿನ ಹಾಲಿ ಸಂಸದ ಪ್ರತಾಪ್ ಸಿಂಹ, ತುಮಕೂರು ಸಂಸದ ಜಿ.ಎಸ್. ಬಸವರಾಜು, ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಚಿಕ್ಕಬಳ್ಳಾಪುರ ಸಂಸದ ಬಿ.ಎನ್ ಬಚ್ಚೇಗೌಡ, ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್, ಹಾವೇರಿಯ ಹಾಲಿ ಸಂಸದ ಶಿವಕುಮಾರ್ ಉದಾಸಿ ಸೇರಿದಂತೆ ಅನೇಕ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಈ ಪೈಕಿ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್‌ಗೆ ಬಿಜೆಪಿ ಕಡ್ಡಾಯ ನಿವೃತ್ತಿ ನೀಡಲು ನಿರ್ಧರಿಸಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಬಿಜೆಪಿ ಹೈಮಾಂಡ್ ಹಾಗೂ ರಾಜ್ಯ ಬಿಜೆಪಿ ನಾಯಕರು ನಳೀನ್ ಕುಮಾರ್ ಕಟೀಲ್‌ಗೆ ಕಡ್ಡಾಯ ನಿವೃತ್ತಿ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಳೀನ್ ಕುಮಾರ್ ಕಟೀಲ್‌ಗೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಕಳೆದ ವಿಧಾನಸಭಾ ಚುನಾವಣೆಯಂತೆ ಬಿಜೆಪಿ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ. ಇದರಿಂದಾಗಿ ಬಿಜೆಪಿ ಮತಗಳು ವಿಭಜನೆಯಾಗುತ್ತದೆ. ಹೀಗಾಗಿ ಹೊಸಬರಿಗೆ ಅವಕಾಶ ನೀಡಿ ಅರುಣ್ ಕುಮಾರ್ ಪುತ್ತಿಲ ಮನವೊಲಿಸಬಹುದು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಕಡ್ಡಾಯ ನಿವೃತ್ತಿ ವರಿಷ್ಠರು ಸಂದೇಶ ರವಾನಿಸಿದ್ದು, ಈ ಬಾರಿ ಕ್ಷೇತ್ರದಲ್ಲಿ ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎಂದು ಬಿಜೆಪಿ ನಾಯಕರು ದೂರವಾಣಿ ಕರೆ ಮೂಲಕ ಕಟೀಲ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಅವಕಾಶ ಸಿಕ್ಕಾಗ ನನಗೆ ನ್ಯಾಯ ಸಿಕ್ಕಿದೆ- ನಳಿನ್ ಕುಮಾರ್ ಕಟೀಲ್
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್‌ಗೆ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಅನುಮಾನವೇ ಆಗಿದೆ. ಟಿಕೆಟ್ ಕೈತಪ್ಪುವ ವಿಚಾರದ ಬಗ್ಗೆ ಈಗಾಗಲೇ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು, ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಬೇಕು ಎನ್ನುವುದು ನಮ್ಮ ಪಕ್ಷದ ವಿಶೇಷತೆ. ನಮ್ಮ ಪಕ್ಷದಲ್ಲಿ ತುಳಿಯುವ ಕೆಲಸ ಆಗಲ್ಲ. ಬೆಳೆಸುವ ಕಾರ್ಯ ಆಗುತ್ತದೆ. ನಾನು ಸಾಮಾನ್ಯ ಕಾರ್ಯಕರ್ತನಾಗಿ ಬಂದವನು. ಸಂಘದ ಕಾರ್ಯಕ್ಕೋಸ್ಕರ ಬಂದಿದ್ದು, ಬಿಜೆಪಿ ಕೆಲಸ ಮಾಡು ಅಂದ್ರು ಮಾಡಿದೆ. ಲೋಕಸಭೆಗೆ ನಿಲ್ಲು ಅಂದ್ರು ನಿಂತೆ, ರಾಜ್ಯಾಧ್ಯಕ್ಷನೂ ಆದೆ. ಯಾವ ಪಾರ್ಟಿಯಲ್ಲಿ ಸಾಮಾನ್ಯ ಕಾರ್ಯಕರ್ತ ರಾಜ್ಯಾಧ್ಯಕ್ಷ ಆಗುತ್ತಾರೆ. ಇಲ್ಲಿ ಯಾರನ್ನು ತುಳಿಯುವುದಿಲ್ಲ. ಅವಕಾಶ ಸಿಕ್ಕಾಗ ನನಗೆ ನ್ಯಾಯ ಸಿಕ್ಕಿದೆ ಎಂದು ಭಾವುಕರಾಗಿದ್ದರು.












Click it and Unblock the Notifications