ಕಾಸರಗೋಡಿನ ಶಿಕ್ಷಕಿಗೆ ಲೋಕಸಭಾ ಟಿಕೆಟ್: ಹೈಕಮಾಂಡ್ ಮಣೆ ಹಾಕಿದ ಈ ಮಹಿಳೆ ಯಾರು ಗೊತ್ತಾ?
ಮಂಗಳೂರು, ಮಾರ್ಚ್ 03: ಜಿದ್ದಾಜಿದ್ದಿನ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ತನ್ನ ಮೊದಲ ಹುರಿಯಾಳುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಶೇಷ ಎಂಬಂತೆ ಮೊದಲ ಪಟ್ಟಿಯ ಆ ಒಂದು ಹೆಸರೇ ಸೆನ್ಸೇಷನಲ್ ಸೃಷ್ಠಿ ಮಾಡಿದೆ.
ಮಲೆಯಾಳಿಗಳ ನಾಡಿನಲ್ಲಿ ಭಾಜಪಾ ಧ್ವಜ ಹಾರಿಸಿದ ಮಹಿಳೆಯೋರ್ವರಿಗೆ ಬಿಜೆಪಿ ಲೋಕಸಭಾ ಟಿಕೆಟ್ ನೀಡಿದೆ. ಕೇರಳ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಅಶ್ವಿನಿ ಎಂ.ಎಲ್ ಎನ್ನುವವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಬಿಜೆಪಿ ಲೋಕಸಭಾ ಸ್ಪರ್ಧಿ ಅಶ್ವಿನಿ ಎಂ.ಎಲ್ ಯಾರು ಗೊತ್ತಾ?
ಮೂಲತಃ ಬೆಂಗಳೂರಿನವರಾದ ಅಶ್ವಿನಿ ಎಂ.ಎಲ್, ಮಂಜೇಶ್ವರ ಮೂಲದ ವ್ಯಕ್ತಿಯನ್ನು ಮದುವೆಯಾಗಿ ಮಂಜೇಶ್ವರಕ್ಕೆ ಆಗಮಿಸಿದರು. ಮಂಜೇಶ್ವರ ವರ್ಕಾಡಿಯ ಖಾಸಗಿ ಶಾಲೆಯಲ್ಲಿ ಅಧ್ಯಾಪಕಿ ವೃತ್ತಿಯಲ್ಲಿ ತೊಡಗಿಸಿಕೊಂಡು ಬಳಿಕ ಮಂಜೇಶ್ವರದ ಹಿಂದುಳಿದ ಸಾಮಾಜಿಕ ಸ್ಥಿತಿಗತಿಗಳನ್ನು ಮನಗಂಡು ಸಮಾಜಸೇವೆಗೆ ಇಳಿದಿದ್ದಾರೆ.
ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯತ್ವ ಪಡೆದು ಸಾರ್ವಜನಿಕ ಜೀವನದಲ್ಲಿ ತೊಡಗಿಸಿದ ಅವರು ಮಂಜೇಶ್ವರ ತಾಲೂಕು ಪಂಚಾಯತ್‌ನ ಕಡಂಬಾರ್ ಡಿವಿಷನ್ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದರು. ಪಕ್ಷದ ನಿರೀಕ್ಷೆಯನ್ನು ಹುಸಿಗೊಳಿಸದ ಅಶ್ವಿನಿ ಎಂ.ಎಲ್ ಕ್ಷೇತ್ರದ ಜನರ ನಂಬಿಕೆಯನ್ನು ಗಳಿಸಿಕೊಂಡು ಮೊದಲ ಪ್ರಯತ್ನದಲ್ಲೇ ವಿಜಯ ಪತಾಕೆ ಹಾರಿಸಿ ಭರ್ಜರಿ ಜಯದೊಂದಿಗೆ ತಾಲೂಕು ಪಂಚಾಯತ್ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಕಮ್ಯುನಿಸ್ಟ್ ಪಕ್ಷದ ಭಧ್ರಕೋಟೆಯಲ್ಲಿ ಭಾಜಪಾ ಧ್ವಜ ಹಾರಿಸಿದ ಅಶ್ವಿನಿ ಅವರ ಪಕ್ಷ ಸಂಘಟನಾ ಚಾತುರ್ಯವನ್ನು ಗಮನಿಸಿದ ಬಿಜೆಪಿ ಮತ್ತೆ ಗುರುತಿಸಿದೆ. ಜನಪ್ರತಿನಿಧಿಯಾಗಿ ಆಯ್ಕೆಯಾದ ನಂತರವೂ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡಿರುವ ಅಶ್ವಿನಿ ಎಂ.ಎಲ್ ಸಂಘಟನಾ ಕಾರ್ಯಾ ಶೈಲಿಯನ್ನು ಕಂಡ ಪಕ್ಷದ ನೇತೃತ್ವ ಇವರಿಗೆ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆಯ ಜವಾಬ್ದಾರಿಯನ್ನು ಹೆಗಲಲ್ಲಿ ಇರಿಸಿದೆ. ಇದೀಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮೊದಲ ಪಟ್ಟಿಯಲ್ಲೇ ಅಶ್ವಿನಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.












Click it and Unblock the Notifications