ಹೆಲ್ಮೆಟ್ ಇಲ್ಲದೆ ಬೈಕ್ ರೈಡ್; ಫೋಟೊ ತೆಗೆದ ಪೊಲೀಸ್ ಮೇಲೆ ಹಲ್ಲೆ
ಮಂಗಳೂರು ಜೂನ್ 21: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದ ಬೈಕ್ ಸವಾರನೊಬ್ಬ ಟ್ರಾಫಿಕ್ ಪೊಲೀಸ್ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುತ್ತಿದ್ದವನ ಫೋಟೊ ತೆಗೆದ ಕಾರಣಕ್ಕೆ ಬೈಕ್ ಸವಾರ ಕರ್ತವ್ಯ ನಿರತ ಟ್ರಾಫಿಕ್ ಕಾನ್ ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದಾನೆ.
ಮಂಗಳೂರು ಹೊರವಲಯದ ತೊಕ್ಕೊಟ್ಟು ಬಳಿ ಈ ಘಟನೆ ನಡೆದಿದೆ. ತೊಕ್ಕೊಟ್ಟು ಫ್ಲೈ ಓವರ್ ಸಮೀಪ ಕರ್ತವ್ಯದಲ್ಲಿದ್ದ ಟ್ರಾಫಿಕ್ ಕಾನ್ ಸ್ಟೆಬಲ್ ಸಂಗಣ್ಣ ಗೌಡ ಎಂಬುವರ ಮೇಲೆ ಹಲ್ಲೆ ನಡೆದಿದೆ. ಬೈಕ್ ಸವಾರ, ಹಲ್ಲೆ ನಡೆಸಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಸಂಗಣ್ಣ ಗೌಡ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಸಿಬ್ಬಂದಿಯಾಗಿದ್ದಾರೆ. ಹಲ್ಲೆ ಕುರಿತು ಸಂಗಣ್ಣ ಗೌಡ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಬೈಕ್ ಸವಾರ ಮದನಿ ನಗರದವನೆಂದು ತಿಳಿದು ಬಂದಿದೆ. ಆರೋಪಿ ಅಝರ್ ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಹಿಡಿಯುವಲ್ಲಿ ಸಹಕರಿಸಿದ ಹಮೀದ್ ಪಾವಳ, ಹೋಂ ಗಾರ್ಡ್ ಅವರನ್ನು ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಪ್ರಶಂಸಿಸಿದ್ದಾರೆ.












Click it and Unblock the Notifications