ಬೆಳ್ತಂಗಡಿ: ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ ರೂಪಾ
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರಿಂಗ್ ಅಧಿಕಾರಿಯೊಬ್ಬರು ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಮಂಗಳೂರು, ಫೆಬ್ರವರಿ, 21: ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ತಾಂತ್ರಿಕ ವಿಭಾಗದ ಸಹಾಯಕ ಇಂಜಿನಿಯರಿಂಗ್ ಅಧಿಕಾರಿಯೊಬ್ಬರು ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ರೂಪಾ ಎನ್ನುವ ಇಂಜಿನಿಯರಿಂಗ್ ಅಧಿಕಾರಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬೆಳ್ತಂಗಡಿ ತಾಲೂಕಿನ ಪರಿಶಿಷ್ಟ ಜಾತಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ಸಭಾಂಗಣ ನಿರ್ಮಾಣ ಕಾಮಗಾರಿಯೊಂದರ ಬಿಲ್ ಪಾವತಿಗೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ರೂಪಾ ಅವರು 10 ಸಾವಿರ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಬೆಳ್ತಂಗಡಿ ತಾಲೂಕಿನ ಗುರಿಪಲ್ಲದ ಕನ್ಯಾಡಿ ಗ್ರಾಮದ ಗುತ್ತಿಗೆದಾರರೊಬ್ಬರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ
ದೂರುದಾರರು ರೂಪಾ ಅವರಿಗೆ 2 ಸಾವಿರ ರೂಪಾಯಿ ಹಣವನ್ನು ಮೊದಲೇ ನೀಡಿದ್ದರು. ನಂತರ ರೂಪಾ ಸೋಮವಾರ (ಫೆಬ್ರವರಿ 20) ದೂರುದಾರರಿಂದ 8 ಸಾವಿರ ರೂಪಾಯಿ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ಬೀಸಿದ ಬಲೆಗೆ ಬಿದ್ದಿದ್ದಾರೆ. ಅವರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡಿದ್ದೇವೆ ಎಂದು ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸಿ.ಎ.ಸೈಮನ್ ಮಾಹಿತಿ ನೀಡಿದ್ದಾರೆ.

ಲೋಕಾಯುಕ್ತ ಪೊಲೀಸ್ ಡಿವೈಎಸ್‌ಪಿಗಳಾದ ಕಲಾವತಿ ಕೆ., ಚಲುವರಾಜು ಬಿ., ಇನ್ಸ್‌ಪೆಕ್ಡರ್ ಅಮಾನುಲ್ಲ ಎ. ಸೇರಿದಂತೆ ಮತ್ತಿತರ ಸಿಬ್ಬಂದಿಗಳು ಭಾಗಿಯಾಗಿದ್ದರು.
ಡಿ. ರೂಪಾ ಮತ್ತು ರೋಹಿಣಿ ಜಟಾಪಟಿ
ಮತ್ತೊಂದೆಡೆ ಐಪಿಎಸ್ ಡಿ. ರೂಪಾ ಮತ್ತು ಐಎಎಸ್ ರೋಹಿಣಿ ಸಿಂಧೂರಿ ನಡುವೆ ಜಟಾಪಟಿ ತಾರಕ್ಕೇರಿದೆ. ರೋಹಿಣಿ ಸಿಂಧೂರಿ ಅವರು ಸಂಧಾನಕ್ಕಾಗಿ ಸಾರಾ ಮಹೇಶ್ ಅವರನ್ನು ಭೇಟಿಯಾಗಿದ್ದರು ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿದವು. ಅಲ್ಲಿಂದ ರೋಹಿಣಿ ಸಿಂಧೂರಿಯವರ ಮೇಲೆ ಡಿ. ರೂಪಾ ಅವರು ಕೆಲವು ಫೋಟೋಗಳನ್ನು ಬಿಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ಈ ಜಗಳ ಮತ್ತಷ್ಟು ತಿರುವುಗಳನ್ನು ಪಡೆದುಕೊಂಡಿದ್ದು, ಇವರಿಬ್ಬರ ಜಗಳದ ನಡುವೆ ಸರ್ಕಾರವೇ ಎಂಟ್ರಿ ಕೊಡುವಂತಾಯಿತು. ಈ ಮಹಿಳಾ ಅಧಿಕಾರಿಗಳ ಜಗಳ ಮತ್ತೆ ಯಾವ ತಿರುವು ಪಡೆದುಕೊಳ್ಳುತ್ತದೆಯೋ ಅನ್ನುವುದನ್ನು ಕಾದುನೋಡಬೇಕಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಡಿ.ಕೆ. ರವಿ ತಾಯಿ, ನಿಮ್ಮಿಬ್ಬರ ಜಗಳದಲ್ಲಿ ನನ್ನ ಮಗನನ್ನು ತರಬೇಡಿ. ನನ್ನ ಮಗ ಸಾವನ್ನಪ್ಪಿ 8 ವರ್ಷಗಳು ಕಳೆದಿವೆ. ಅವನ ಮೇಲೆ ಯಾವುದೇ ಕಪ್ಪು ಚುಕ್ಕೆಗಳು ಇಲ್ಲ, ಆದರೆ ನಿಮ್ಮ ಜಗಳದ ನಡುವೆ ನನ್ನ ಮಗನ ಹೆಸರನ್ನು ತರಬೇಡಿ ಎಂದು ಮನವಿ ಮಾಡಿಕೊಂಡರು. ಹಾಗೆಯೇ ನನ್ನ ಮಗನ ಬಳಿ ಸಮಾಜಿಕ ಸೇವೆಗಳ ಬಗ್ಗೆ ಸಲಹೆಗಳನ್ನು ಕೇಳಲು ಸಿಂಧೂರಿ ಹಾಗಾಗ ಮನೆಗೆ ಬರುತ್ತಿದ್ದರು ಎಂದು ಪ್ರತಿಕ್ರಿಯೆ ನೀಡಿದ್ದರು.












Click it and Unblock the Notifications