ಬಪ್ಪನಾಡಿನಲ್ಲಿ ರಥ ಹೋಗುವ ದಾರಿಯಲ್ಲಿದ್ದ ವಾಹನಗಳನ್ನ ಜಖಂಗೊಳಿಸಿದ ಭಕ್ತರು: ವ್ಯಾಪಕ ಆಕ್ರೋಶ
ಮಂಗಳೂರು, ಏಪ್ರಿಲ್ 04: ದೇವರ ರಥ ಹೋಗುವ ದಾರಿಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನು ಭಕ್ತರು ಜಖಂಗೊಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಪ್ಪನಾಡು ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿರುವ ಪುರಾಣ ಪ್ರಸಿದ್ಧ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಮಾರ್ಚ್ 24 ರಿಂದ ಮಾರ್ಚ್ 31ರವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಆದರೆ ಈ ಬಾರಿ ಜಾತ್ರಾ ಮಹೋತ್ಸವದ ವೇಳೆ ನಡೆದ ಅವಘಡ ಆಕ್ರೋಶಕ್ಕೆ ಕಾರಣವಾಗಿದೆ.

ಬಪ್ಪನಾಡು ಜಾತ್ರಾ ಮಹೋತ್ಸವದ ವೇಳೆ ರಥೋತ್ಸವದ ದಿನ ರಥ ಹೋಗುವ ದಾರಿಯಲ್ಲಿ ಕೆಲವು ವಾಹನಗಳನ್ನು ಪಾರ್ಕ್ ಮಾಡಲಾಗಿತ್ತು. ಈ ವೇಳೆ ರಥ ಹೋಗಲು ದಾರಿ ಮಾಡುವ ಸಲುವಾಗಿ ಭಕ್ತರು ನಿಲ್ಲಿಸಿದ್ದ ಕಾರು, ರಿಕ್ಷಾ, ಬೈಕ್‌ಗಳನ್ನು ಬದಿಗೆ ದೂಡಿ ಹಾಕಿದ್ದಾರೆ. ಈ ವೇಳೆ ಅನೇಕ ವಾಹನಗಳಿಗೆ ಹಾನಿಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಬಪ್ಪನಾಡು ದೇವಾಲಯದ ಡೋಲು ಜಾತ್ರೆ
ಮಲ್ಲಿಗೆ ಪ್ರಿಯೆ ಎಂದೇ ಹೆಸರಾಗಿರುವ ಬಪ್ಪನಾಡು ದೇವಾಲಯದ ಡೋಲು ಜಾತ್ರೆ ತುಳುನಾಡಿನ ಏಳು ಪ್ರಮುಖ ಜಾತ್ರೆಗಳಲ್ಲೊಂದು. ಉಡುಪಿ ಪರ್ಯಾಯ, ಮೂಲ್ಕಿ ಅರಸರ ಕಂಬಳ, ಕವತ್ತಾರು ಆಯನ, ಧರ್ಮಸ್ಥಳದ ಲಕ್ಷದೀಪೋತ್ಸವ, ಪಡುಬಿದ್ರೆಯ ಢಕ್ಕೆಬಲಿ, ಕಾಪು ಸುಗ್ಗಿಮಾರಿ ಪೂಜೆ ಜಾತ್ರೆಯಂತೆ ಬಪ್ಪನಾಡು ದೇವಾಲಯದ ಡೋಲು ಜಾತ್ರೆ ಕೂಡ ಅದ್ಧೂರಿಯಾಗಿ ನಡೆಯುತ್ತದೆ. ಮಾರ್ಚ್ 24 ರಿಂದ ಮಾರ್ಚ್ 31ರವರೆಗೆ ನಡೆದ ಬಪ್ಪನಾಡು ದೇವಾಲಯದ ಡೋಲು ಜಾತ್ರೆಯ ಕೊನೆಯ ದಿನ ಕವಾಟೋದ್ಘಾಟನೆ, ಉತ್ಸವ ಬಲಿ, ಓಕುಳಿ, ಶ್ರೀ ದೇವಿ ಮತ್ತು ಸಸಿಹಿತ್ತು ಶ್ರೀ ಭಗವತೀಯರ ಭೇಟಿ, ಮಹಾ ರಥೋತ್ಸವ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತ್ತು.












Click it and Unblock the Notifications