ಬಂಟ್ವಾಳ: ಯುವತಿ ಮೇಲೆ ಹಲ್ಲೆ - ಯುವಕರ ಬಂಧನ
ಬಂಟ್ವಾಳ, ಜು.4: ಕಲ್ಲಡ್ಕ ಬಳಿ ಬಸ್ಸಿನಲ್ಲಿ ತೆರಳುತ್ತಿದ್ದ ಯುವತಿ ಹಾಗೂ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಟ್ವಾಳ ನಗರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ವಿಶ್ವನಾಥ್, ವಿಜೇತ್ ಹಾಗೂ ಶಿವರಾಜ್ ಎಂದು ಗುರುತಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಿವಾಸಿ ಖಾಸಿಂ ರಹೀಂ ಎಂಬಾತ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಬೆಂಗಳೂರಿನ ಶೇಷಾದ್ರಿಪುರಂನ ಕಾಲೇಜೊಂದರ ವಿದ್ಯಾರ್ಥಿಗಳಾಗಿರುವ ಕಿರಣ್ ಹಾಗೂ ಆತನ ತಂಗಿ ಅಂಕಿತಾ ಜೊತೆ ಕಿರಣ್ ಸ್ನೇಹಿತ ಖಾಸಿಂ ರಹೀಂ ಕೂಡ ಕಲ್ಲಡ್ಕಕ್ಕೆ ಬಂದಿದ್ದ ವೇಳೆ ಗುರುವಾರ ಈ ಘಟನೆ ನಡೆದಿದೆ. ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಅಂಕಿತಾ ಕಾಲೇಜಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪಡೆಯಲು ತನ್ನ ಅಣ್ಣ ಕಿರಣ್ ಹಾಗೂ ಅಣ್ಣನ ಸ್ನೇಹಿತನ ಜೊತೆ ಕಲ್ಲಡ್ಕಕ್ಕೆ ಬಂದಿದ್ದರು.

ಇಬ್ಬರು ಯುವಕರು ಓರ್ವ ಯುವತಿಯ ಜೊತೆ ಬಸ್ಸಿನಲ್ಲಿ ತೆರಳುತ್ತಿದ್ದಾರೆ, ಇದರಲ್ಲಿ ಓರ್ವ ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕನೂ ಇದ್ದ ಎಂದು ಆಕ್ಷೇಪಿಸಿ ತಂಡವೊಂದು ಮೂವರನ್ನು ಕಲ್ಲಡ್ಕದ ಪೇಟೆಯಲ್ಲಿ ಬಸ್ಸಿನಿಂದ ಇಳಿಸಿ ಆಕ್ಷೇಪ ವ್ಯಕ್ತಪಡಿಸಿತ್ತು.
ಘಟನೆಯಿಂದ ಕಲ್ಲಡ್ಕದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮಧ್ಯ ಪ್ರವೇಶಿಸಿದ ಪೊಲೀಸರು, ಮೂವರನ್ನೂ ರಿಕ್ಷಾವೊಂದರಲ್ಲಿ ಕುಳ್ಳಿರಿಸಿ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ನಗರ ಠಾಣೆಗೆ ತೆರಳುವಂತೆ ಸೂಚಿಸಿದ್ದರು. ಅದರಂತೆ ಮೂವರೂ ಕಲ್ಲಡ್ಕ ಬಳಿಯ ಕೆ.ಸಿ.ರೋಡಿನತ್ತ ಬರುತ್ತಿದ್ದಂತೆಯೇ ರಿಕ್ಷಾವನ್ನು ತಡೆದ ಮೂವರ ಗುಂಪು ಖಾಸಿಂ ರಹೀಂ ನನ್ನು ರಿಕ್ಷಾದಿಂದ ಎಳೆದು ಹಲ್ಲೆ ನಡೆಸಿದೆ ಎಂದು ಬಂಟ್ವಾಳ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications