ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ: ಬಜರಂಗದಳ ಕಾರ್ಯಕರ್ತರ ಬಂಧನ
ಮಂಗಳೂರು, ನವೆಂಬರ್ 28: ನೈತಿಕ ಪೊಲೀಸ್‌ಗಿರಿ ಆರೋಪದ ಮೇಲೆ ಮಂಗಳೂರಿನಲ್ಲಿ ಬಜರಂಗದಳ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಮಂಗಳೂರು ನಗರದ ಮೋರ್ಗನ್ಸ್ ಗೇಟ್ ಬಳಿಯ ಮಂಕಿ ಸ್ಟಾಂಡ್‌ನಲ್ಲಿ ಜೊತೆಯಾಗಿ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಅನ್ಯಕೋಮಿನ ಜೋಡಿಯ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದ ಮೇಲೆ ಇಬ್ಬರನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಕ್ಷಯ್ ರಾವ್ ಹಾಗೂ ಶಿಬಿನ್ ಪಡಿಕ್ಕಲ್ ಬಂಧಿತ ಆರೋಪಿಗಳು.
ಸೋಮವಾರ ರಾತ್ರಿ 8ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಪಾಂಡೇಶ್ವರ ನಿವಾಸಿ ನೂರುಲ್ ಅಮೀನ್, ಮುಳಿಹಿತ್ಲು ಬಳಿ ಸ್ಪೋರ್ಟ್ಸ್ ಅಂಗಡಿಯಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಚಿಕ್ಕಮಗಳೂರಿನ ಹಿಂದೂ ಯುವತಿಯೊಂದಿಗೆ ಮೊಬೈಲ್ ರಿಪೇರಿ ಮಾಡಿಸಿ ಮಿಲಾಗ್ರಿಸ್ ಚರ್ಚ್ ಕಡೆಯಿಂದ ಭಗಿನಿ ಸಮಾಜದತ್ತ ಸ್ಕೂಟರ್‌ನಲ್ಲಿ ತೆರಳುತ್ತಿದ್ದ.

ಅನ್ಯಕೋಮಿನ ಜೋಡಿ ಸ್ಕೂಟರ್ ಬರುತ್ತಿರುವುದನ್ನು ಗಮನಿಸಿದ ಇಬ್ಬರು ಬಜರಂಗದಳ ಕಾರ್ಯಕರ್ತರು ಬೈಕ್‌ನಲ್ಲಿ ಬೆನ್ನಟ್ಟಿದ್ದಾರೆ. ಬಳಿಕ ಸ್ಕೂಟರ್ ಅಡ್ಡ ಹಾಕಿ ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ತೆರಳುತಿದ್ದಂತೆ ಮಧ್ಯ ಪ್ರವೇಶಿಸಿದ ಹೊಯ್ಸಳ ವಾಹನದ ಪೊಲೀಸರು ಗುಂಪನ್ನು ಚದುರಿಸಿ, ಜೋಡಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ತನಿಖೆ ನಡೆಸಿ ಅನೈತಿಕ ಪೊಲೀಸ್ ಗಿರಿ ನಡೆಸಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
1.57 ಕೋಟಿ ರೂ ಮೌಲ್ಯದ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನ: ಮೂವರ ಬಂಧನ
ಮಂಗಳೂರಿನ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 1.57 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ (ಅಂಬರ್ ಗ್ರೀಸ್)ಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿಕ್ಕಮಗಳೂರು ಮೂಲದ ಸದ್ಯ ಬಂಟ್ವಾಳ ತಾಲೂಕಿನ ವಿಟ್ಲ ಮಂಗಿಲಪದವು ನಿವಾಸಿಗಳಾದ ಪ್ಯಾರೇಜಾನ್ (37), ಬದ್ರುದ್ದೀನ್ (28), ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯ ಸನ್ನಿಧಿ ಕೋಯಿಲ್ ಟೆಂಪಲ್ ಸ್ಟ್ರೀಟ್ ನಿವಾಸಿ ರಾಜೇಶ್ ಆರ್.(22) ಬಂಧಿತ ಆರೋಪಿಗಳು.

ಮಂಗಳೂರಿನ ಪಂಪ್ ವೆಲ್ ಬಳಿಯ ಇಂಡಿಯಾನ ಆಸ್ಪತ್ರೆಯ ಬಳಿ ಮೂವರು ಸ್ವಿಫ್ಟ್ ಕಾರಿನಲ್ಲಿ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್)ಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಬಂದ ಖಚಿತ ಮಾಹಿತಿಯನ್ವಯ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 1.575 ಕೆಜಿ ತೂಕದ 1,57,50,000 ರೂ. ಮೌಲ್ಯದ ತಿಮಿಂಗಿಲದ ವಾಂತಿ(ಅಂಬರ್ ಗ್ರೀಸ್) ಹಾಗೂ ಕಾರು, ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications