ಪೋಷಕರ ಬೇಜವಾಬ್ದಾರಿತನ: ಸ್ವಿಮ್ಮಿಂಗ್ ಪೂಲ್ ಗೆ ಬಿದ್ದ ಮಗು, ಮುಂದೇನಾಯ್ತು?
ಮಂಗಳೂರು, ಜನವರಿ 01: ಪೋಷಕರ ಬೇಜವಾಬ್ದಾರಿತನಕ್ಕೆ ಮಗು ನೀರಿಗೆ ಬಿದ್ದು, ಆನಂತರ ಪಾರಾದ ಆಘಾತಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುತ್ತೂರಿನ ಕುಂಬ್ರದಲ್ಲಿ ರೆಸಾರ್ಟ್ ಒಂದರ ಸ್ವಿಮ್ಮಿಂಗ್ ಪೂಲ್ ಬಳಿ ಮಗುವನ್ನು ಬಿಟ್ಟು ಪೋಷಕರು ಬೇಜವಾಬ್ದಾರಿ ಮೆರೆದಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಾರ್ಟಿಯಲ್ಲಿ ಭಾಗವಹಿಸಿದ್ದ ಪೋಷಕರು ಮೊಬೈಲ್ ನಲ್ಲಿ ತಲ್ಲಿನರಾಗಿದ್ದ ಸಂದರ್ಭದಲ್ಲಿ ಹಠಾತ್ತನೆ ನೀರಿಗೆ ಬಿದ್ದ ನಾಲ್ಕು ವರ್ಷ ಪ್ರಾಯದ ಮಗು ಸುಮಾರು 2 ನಿಮಿಷಗಳ ಕಾಲ ನೀರಿನಲ್ಲಿ ಒದ್ದಾಟ ನಡೆಸಿದೆ.
ಇದನ್ನು ಗಮನಿಸಿದ ಮಗುವಿನ ತಾಯಿ ಬೊಬ್ಬೆ ಹೊಡೆದ ಪರಿಣಾಮ ಮಗುವನ್ನು ರಕ್ಷಿಸಲಾಗಿದೆ . ಮೂರು ಬಾರಿ ಮಗು ಮುಳುಗಿ ಮೇಲೇಳುತ್ತ ಸಹಾಯಕ್ಕೆ ಕೈಚಾಚುತ್ತಿರುವುದನ್ನು ಮಗುವಿನ ತಾಯಿ ಗಮನಿಸಿದ್ದಾರೆ. ಕೂಡಲೇ ಅಲ್ಲಿದ್ದ ವ್ಯಕ್ತಿಯೋರ್ವ ನೀರಿಗೆ ಧುಮುಕಿ ಮಗುವನ್ನು ರಕ್ಷಿಸಿದ್ದಾರೆ.

ಮಗು ಸಾಕಷ್ಟು ನೀರು ಕುಡಿದಿದ್ದ ಕಾರಣ ಅಸ್ವಸ್ಥಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮಗುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಘಟನೆ ನಡೆಯುವ ಸಂದರ್ಭದಲ್ಲಿ ಸ್ವಿಮಿಂಗ್ ಪೂಲ್ ನಲ್ಲಿ ಹಲವು ಮಂದಿ ಇದ್ದರೂ ನೀರಿಗೆ ಬಿದ್ದ ಮಗುವಿನ ಒದ್ದಾಟ ಯಾರೂ ಗಮನಿಸದೇ ಇರುವುದು ಬೇಸರದ ಸಂಗತಿ.

ಪುತ್ತೂರಿನ ಕುಂಬ್ರ ಪರ್ಲಡ್ಕ ಬಿಗ್ರೋಸ್ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ಬಳಿ ಡಿಸೆಂಬರ್ 26 ರಂದು ಈ ಘಟನೆ ನಡೆದಿದ್ದ, ಇದೀಗ ಸಿಸಿಟಿವಿಯ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.












Click it and Unblock the Notifications