ಮಂಗಳೂರಿನಲ್ಲಿ ಆಟೋ ಮುಷ್ಕರ ಬಿಜೆಪಿ ಅಸಮಾಧಾನ
ಮಂಗಳೂರು, ಜ.31 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ದಿನಗಳಿಂದ ಆಟೋರಿಕ್ಷಾ ಮುಷ್ಕರ ನಡೆಯುತ್ತಿದ್ದರೂ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಮುಂದಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕ ಆಕ್ರೋಶ ವ್ಯಕ್ತಪಡಿಸಿದೆ. ಜನಪ್ರತಿನಿಧಿಗಳು ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಶುಕ್ರವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಅವರು, ಜನಪ್ರತಿನಿಧಿಗಳು ಮತ್ತು ಸರ್ಕಾರದ ತಟಸ್ಥ ನಿಲುವಿನ ಬಗ್ಗೆ ಜನರು ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು. [ಮಂಗಳೂರು : ಗುರುವಾರವೂ ರಸ್ತೆಗಿಳಿಯದ ಆಟೋಗಳು]

ಆದರೆ, ಆಡಳಿತ ಪಕ್ಷ ಜನರ ಸಮಸ್ಯೆಯನ್ನು ಬಗೆಹರಿಸುವುದು ಬಿಟ್ಟು ನಿದ್ದೆ ಮಾಡುತ್ತಿದೆ ಎಂದು ಆರೋಪಿಸಿದರು. ಆಟೋ ಚಾಲಕರ ಮುಷ್ಕರದ ಬಗ್ಗೆ ಜನಪ್ರತಿನಿಧಿಗಳು ಸಭೆ ನಡೆದಿ, ತಕ್ಷಣ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು. [ಮಂಗಳೂರು : ಖಾಸಗಿ ಬಸ್, ಆಟೋ ದರದ ಬಗ್ಗೆ ಗೊಂದಲ]
ಆಟೋ ಚಾಲಕರ ಸಮಸ್ಯೆಯಂತಹ ಸಣ್ಣ ವಿಷಯವನ್ನು ಬಗೆಹರಿಸಲಾಗದ ರಾಜ್ಯದ ಆಡಳಿತ ಪಕ್ಷದಿಂದ ಜನರು ಏನು ನಿರೀಕ್ಷೆ ಮಾಡಲು ಸಾಧ್ಯ?. ತಕ್ಷಣ ಈ ಸಮಸ್ಯೆಯನ್ನು ಬಗೆಹರಿಸಿ ಜನರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದರು.
ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಕೆ.ಜಯರಾಮ್ ಶೆಟ್ಟಿ, ಮಾಜಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್, ಬಿ.ನಾಗರಾಜ್ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮುಷ್ಕರ ಏಕೆ : ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಜ. 12ರಂದು ಆಟೋ ರಿಕ್ಷಾ ದರಗಳನ್ನು ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿತ್ತು. ಅದರಂತೆ ಆಟೋದಲ್ಲಿ ಕನಿಷ್ಠ ದರದಲ್ಲಿ 5 ರೂ. ಕಡಿಮೆ ಮಾಡಲಾಗಿದೆ. ರೂ.25 ಇದ್ದ ದರವನ್ನು 20 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಇದಕ್ಕೆ ಆಟೋ ಚಾಲಕರು ಅಸಮಾಧಾನ ವ್ಯಕ್ತಪಡಿಸಿ ಬುಧವಾರ ಮತ್ತು ಗುರುವಾರ ಆಟೋ ಸೇವೆಯನ್ನು ಸ್ಥಗಿತಗೊಳಿಸಿದ್ದರು.












Click it and Unblock the Notifications