ಪಶ್ಚಿಮ ವಲಯ ಐಜಿಪಿಯಾಗಿ ಅಮ್ರಿತ್ ಪೌಲ್
ಮಂಗಳೂರು, ಮೇ 27 : ಮಂಗಳೂರಿನಲ್ಲಿ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ಅಮ್ರಿತ್ ಪೌಲ್ ಅವರು ಪಶ್ಚಿಮ ವಲಯದ ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದರು. 1998ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಪೌಲ್ ಉಡುಪಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಬೆಂಗಳೂರು ಹೆಡ್ ಕ್ವಾರ್ಟರ್ - 1 ರ ಐಜಿಪಿಯಾಗಿದ್ದ ಅಮ್ರಿತ್ ಪೌಲ್ ಅವರನ್ನು ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ ವರ್ಗಾಯಿಸಿ ಸರ್ಕಾರ ಕಳೆದ ಮಂಗಳವಾರ ಆದೇಶ ಹೊರಡಿಸಿತ್ತು. ಹಿಂದೆ ಸೀಮಂತ್ ಕುಮಾರ್ ಸಿಂಗ್ ಪಶ್ಚಿಮ ವಲಯ ಐಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮಂಗಳೂರಿನ ಪಾಂಡೇಶ್ವರದಲ್ಲಿ ಕೇಂದ್ರ ಸ್ಥಾನ ಹೊಂದಿರುವ ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರ ಕಚೇರಿಲ್ಲಿ ಸೋಮವಾರ ಅಮ್ರಿತ್ ಪೌಲ್ ಅವರು ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದರು. ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಆರ್.ಹಿತೇಂದ್ರ ಮುಂತಾದ ಅಧಿಕಾರಿಗಳು ಅಮ್ರಿತ್ ಪೌಲ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಉಡುಪಿ ಎಸ್ಪಿಯಾಗಿದ್ದರು : 1998ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಅಮ್ರಿತ್ ಪೌಲ್ ಅವರು 2000 ದಿಂದ 2003ರವರೆಗೆ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 1998ರಲ್ಲಿ ಬೀದರ್ ಜಿಲ್ಲೆಯ ಬಾಲ್ಕಿಯಲ್ಲಿ ಪೌಲ್ ಸೇವೆಯನ್ನು ಆರಂಭಿಸಿದರು.
ಎಬಿವಿಪಿ ಕಾರ್ಯಕಾರಣಿ ಆರಂಭ : ಮಂಗಳೂರಿನ ಸಂಘ ನಿಕೇತನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಮೇ 26ರಂದು ಆರಂಭವಾಗಿದ್ದು, 29ರವರೆಗೆ ನಡೆಯಲಿದೆ. 364 ಮಂದಿ ರಾಷ್ಟ್ರೀಯ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಪರಿಷತ್‌ನ ಸಂಘಟನಾತ್ಮಕ ವಿಷಯ, ಕಾರ್ಯ ವಿಸ್ತರಣೆಯ ಚಟುವಟಿಕೆ ಮತ್ತು ಮುಂದಿನ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲು ಸಭೆ ಕರೆಯಲಾಗಿದೆ. [ಮಂಗಳೂರಿನಲ್ಲಿ ಎಬಿವಿಪಿ ಕಾರ್ಯಕಾರಣಿ]












Click it and Unblock the Notifications