ಕರಾವಳಿಯಲ್ಲಿ ಗೆಜ್ಜೆ ಕಟ್ಟಿ ಯಕ್ಷ ಸೇವೆಗೆ ಸಜ್ಜಾದ ಕಲಾವಿದರು
ಮಂಗಳೂರು, ನವೆಂಬರ್ 17; ಯಕ್ಷಗಾನ ಕರಾವಳಿಯ ಗಂಡು ಕಲೆ, ಸಂಸ್ಕೃತಿಯ ಪ್ರತೀಕ. ಇಂತಹ ಕಡಲ ತಡಿಯ ಅದ್ಭುತ ಕಲೆಗೆ ಕಳೆದ ಎರಡು ವರ್ಷದಿಂದ ಕೊರೊನಾ ದೊಡ್ಡ ಹೊಡೆತ ನೀಡಿತ್ತು. ಪೂರ್ಣ ಪ್ರಮಾಣದ ಯಕ್ಷಗಾನ ತಿರುಗಾಟ ನಡೆಯದೇ ಕಲಾವಿದರು ಕಂಗಾಲಾಗಿದ್ದರು. ಆದರೆ ಈ ಬಾರಿ ಪೂರ್ಣ ಪ್ರಮಾಣದ ಯಕ್ಷಗಾನ ನಡೆಯಲಿದೆ. ಇದೇ ವಿಶ್ವಾಸದಿಂದ ಯಕ್ಷ ಕಲಾವಿದರು ಗೆಜ್ಜೆ ಕಟ್ಟಿ ರಂಗಸ್ಥಳದಲ್ಲಿ ಹೆಜ್ಜೆ ಹಾಕಲು ತಯಾರಾಗಿದ್ದಾರೆ.
ವಿಭಿನ್ನ ಸಂಸ್ಕೃತಿಗಳ ಬೀಡಾದ ಕರಾವಳಿಗರಿಗೆ ಯಕ್ಷಗಾನ ಅಂದರೆ ಪಂಚಪ್ರಾಣ. ಕರಾವಳಿಯಲ್ಲಿ ಬಾಲದಿವೃದ್ಧರವರೆಗೂ ಎಲ್ಲರೂ ಯಕ್ಷಗಾನ ಪ್ರಿಯರೇ. ನವೆಂಬರ್ ತಿಂಗಳ ಕೊನೆ ಬಂತು ಅಂದರೆ ಕರಾವಳಿಯ ಮೂಲೆ ಮೂಲೆಯಲ್ಲೂ ಚಂಡೆ ಸದ್ದು ಕೇಳಿಸುತ್ತದೆ. ಭಾಗವತರ ಇಂಪಾದ ಹಾಡು ಮನ ಸೆಳೆಯುತ್ತದೆ.
ನವೆಂಬರ್ನಿಂದ ಕರಾವಳಿಯಲ್ಲಿ ಕಂಬಳ ಕಲರವ
ನವರಸಗಳನ್ನು ಒಳಗೊಂಡ ವಿಶೇಷ ಕಲೆಗೆ ಕಳೆದ ಎರಡು ವರ್ಷಗಳಿಂದ ಕೊರೊನಾ ದೊಡ್ಡ ಹೊಡೆತ ನೀಡಿತ್ತು. ಸಾಮಾನ್ಯವಾಗಿ ನವೆಂಬರ್ ಕೊನೆಯಿಂದ ಆರಂಭವಾಗುವ ಯಕ್ಷಗಾನ ಮೇ ಮಧ್ಯಭಾಗದವರೆಗೂ ಸುಮಾರು 6 ತಿಂಗಳ ಕಾಲ ನಡೆಯುತ್ತದೆ.
ರಂಗಸ್ಥಳದಲ್ಲೇ ಕುಸಿದು ಬಿದ್ದ ಯಕ್ಷಗಾನ ಕಲಾವಿದ; ವಿಡಿಯೋ ವೈರಲ್
ಉಳಿದ ತಿಂಗಳಲ್ಲಿ ಕೆಲವು ಕಲಾವಿದರು ಮುಂಬೈ, ವಿದೇಶಗಳಲ್ಲಿ ಪ್ರದರ್ಶನ ನೀಡುತ್ತಾ ಜೀವನ ಸಾಗಿಸುತ್ತಾರೆ. ಆದರೆ ಕಳೆದ ಎರಡು ವರ್ಷಗಳಲ್ಲೂ ಕಲಾವಿದರಿಗೆ ಪೂರ್ಣ ಪ್ರಮಾಣದ ಯಕ್ಷಗಾನ ತಿರುಗಾಟ ಸಿಗಲೇ ಇಲ್ಲ. ಹೀಗಾಗಿ ಕಲಾವಿದರು ಸಾಕಷ್ಟು ಕಷ್ಟ ಅನುಭವಿಸಿದ್ದರು. ಕೆಲವು ಕಲಾವಿದರು ಬೇರೆ ಉದ್ಯೋಗ ಅವಲಂಬಿಸಿ ಬದುಕು ಸಾಗಿಸಿದ್ದರು. ಆದರೆ ಸದ್ಯ ಕೊರೊನಾ ಕಡಿಮೆ ಆಗಿದೆ ಯಕ್ಷಗಾನ ತಿರುಗಾಟವನ್ನು ಕೆಲ ಮೇಳ ಆರಂಭಿಸಿದರೆ, ಇನ್ನೂ ಕೆಲವು ಮೇಳ ತಿರುಗಾಟದ ಸಿದ್ದತೆ ನಡೆಸುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಕಲರವ; ಚಿಕ್ಕಮೇಳದಿಂದ ಮನೆ ಮನೆಗಳಲ್ಲಿ ಪ್ರದರ್ಶನ
ಇನ್ನೂ ಯಕ್ಷಗಾನವನ್ನೇ ನಂಬಿ ಬದುಕು ಕಟ್ಟಿಕೊಂಡ ಕಲಾವಿದರು ಕರಾವಳಿಯಲ್ಲಿ ಸಾವಿರಾರು ಮಂದಿ ಇದ್ದಾರೆ. ಯಕ್ಷಗಾನ ತಿರುಗಾಟ ಪೂರ್ಣ ಪ್ರಮಾಣದಲ್ಲಿ ನಡೆಯದೇ ಹೋದರೆ ಜೀವನಕ್ಕಾಗಿ ತುಂಬಾ ಕಷ್ಟ ಪಡುವ ಸ್ಥಿತಿ ಈ ಕಲಾವಿದರ ಕುಟುಂಬದ್ದು. ಹೀಗಾಗಿ ಈ ಬಾರಿ ಆದರೂ ಯಾವುದೇ ಅಡೆ ತಡೆ ಬಾರದೆ ಇರಲಿ ಅಂತ ದೇವರ ಮೇಲೆ ಭಾರ ಹಾಕಿ ವಿಶ್ವಾಸದೊಂದಿಗೆ ಗೆಜ್ಜೆ ಕಟ್ಟಲು ಸಿದ್ದತೆ ಮಾಡಿಕೊಂಡಿದ್ದಾರೆ ಯಕ್ಷಗಾನ ಕಲಾವಿದರು.
ಈಗಾಗಲೇ ಹಟ್ಟಿಯಂಗಡಿ ಮೇಳ ತಿರುಗಾಟ ಆರಂಭಿಸಿದೆ. ಧರ್ಮಸ್ಥಳ ಮೇಳವು ಒಂದು ತಿಂಗಳ ಕಾಲ ಧರ್ಮಸ್ಥಳ ದೇವಸ್ಥಾನದಲ್ಲಿಯೇ ಪ್ರದರ್ಶನ ನೀಡಲಿದೆ. ಡಿಸೆಂಬರ್ 5ರ ಬಳಿಕ ಈ ಬಾರಿಯ ತಿರುಗಾಟದ ಜೈತ್ರಯಾತ್ರೆ ಆರಂಭಿಸಲಿದೆ. ಇದೀಗ ತೆಂಕುತಿಟ್ಟಿನ ಪ್ರಖ್ಯಾತ ಭಾಗವತ, ಯಕ್ಷಧ್ರವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆಯ ಎರಡನೇ ವರ್ಷದ ತಿರುಗಾಟ ಆರಂಭವಾಗಿದೆ. ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ನಡೆದು ಕಲಾವಿದರಿಗೆ ಗೆಜ್ಜೆ ಹಸ್ತಾಂತರದ ಮೂಲಕ ಮೇಳದ ತಿರುಗಾಟಕ್ಕೆ ಚಾಲನೆ ನೀಡಲಾಗಿದೆ.
ನವೆಂಬರ್ 16ರಂದು ತಿರುಗಾಟ ಆರಂಭವಾಗಿದ್ದು, ಮೇ 25ರವರೆಗೆ ಒಟ್ಟು ಆರು ತಿಂಗಳವರೆಗೆ ಪಾವಂಜೆ ಮೇಳ ಕಾಲಮಿತಿಯ ಪ್ರದರ್ಶನ ನೀಡಲಿದೆ. ಈಗಾಗಲೇ ಪ್ರದರ್ಶನದ ಎಲ್ಲಾ ದಿನಾಂಕಗಳು ಬುಕ್ಕಿಂಗ್ ಆಗಿದ್ದು, ಈ ಬಾರಿ ಮೇಳವು 191 ಯಕ್ಷಗಾನ ಪ್ರದರ್ಶನಗಳನ್ನು ನೀಡಲಿದೆ.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರ ಕರ್ನಾಟಕ, ಕೇರಳ ಸಹಿತ ದೇಶ, ವಿದೇಶದ ಭಕ್ತರು ಯಕ್ಷಗಾನ ಆರಾಧಕರು ಕರಾವಳಿಯ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಾಗೂ ಪಾವಂಜೆ ಕ್ಷೇತ್ರದಲ್ಲಿ ಹರಕೆ ಮೂಲಕ ಸೇವೆಯಾಟವನ್ನು ನೀಡಲಿದ್ದಾರೆ. ಅದೇ ರೀತಿ ನವೆಂಬರ್ 29ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳು ಈ ವರ್ಷದ ತಿರುಗಾಟವನ್ನು ಆರಂಭಿಸಲಿದೆ.
ಒಟ್ಟಿನ್ನಲ್ಲಿ ಕೊರೊನಾ ಕರಿಛಾಯೆ ದೂರವಾಗಿ ಬೆಳಕಿನಾಟ ಯಕ್ಷಗಾನ ಶುರುವಾಗಿದೆ. ರಂಗಸ್ಥಳದಲ್ಲಿ ಕಲಾವಿದರ ಅಬ್ಬರ ಮೇಳೈಸಲಿದೆ. ಆದರೆ ಹಿಂದಿನ ಎರಡು ವರ್ಷಗಳಂತೆ ಈ ಬಾರಿ ಯಾವುದೇ ನಿರಾಸೆ ಆಗದೇ ಇರಲಿ ಅನ್ನೋದೆ ನಮ್ಮ ಆಶಯ.