ತಂದೆ-ತಾಯಿಯಿಂದ ನಿರಾಕರಣೆ: ಕ್ರಿಶ್ಚಿಯನ್ ಕುಟುಂಬದ ಮಡಿಲು ಸೇರಿದ ಲೀಲಾವತಿ ಬಾಲ್ಯ ಹೇಗಿತ್ತು..?
ಮಂಗಳೂರು, ಡಿಸೆಂಬರ್ 09: ಕಲಾ ಸರಸ್ವತಿಯಲ್ಲಿ ಐಕ್ಯರಾದ ದಕ್ಷಿಣ ಭಾರತದ ಮೇರ ನಟಿ ಲೀಲಾವತಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರು. ಲೀಲಾವತಿಯವರ ಬಾಲ್ಯದ ಜೀವನ, ತುಳು ಸಿನಿಮಾರಂಗಕ್ಕೆ ಅವರ ಕೊಡುಗೆ, ಸಿನಿಮಾದ ಆರಂಭದ ಜೀವನದ ನೆನಪನ್ನು ತುಳು ಚಿತ್ರರಂಗದ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಬಿಚ್ಚಿಟ್ಟಿದ್ದಾರೆ.
ಲೀಲಾವತಿಯವರೊಂದಿಗೆ ಒಡನಾಟದಲ್ಲಿದ್ದ ತಮ್ಮ ಲಕ್ಷ್ಮಣ ಅವರು ಅವರ ತುಳು ಭಾಷಾ ಪ್ರೇಮ, ತುಳು ಸಿನಿಮಾದ ಆರಂಭದ ಕಾಲದಲ್ಲಿ ಲೀಲಾವತಿಯವರು ಬೆನ್ನೆಲುಬಾಗಿ ನಿಂತದ್ದು, ತುಳುನಾಡಿನ ವಿಶೇಷ ಮೀನಿನ ಖಾದ್ಯವನ್ನು ತಯಾರಿಸುತ್ತಿದ್ದುದು, ವಿನೋದ್ ರಾಜ್ ಹಾಗೂ ಲೀಲಾವತಿಯವರು ತುಳು ಭಾಷೆಯಲ್ಲಿಯೇ ನಿತ್ಯ ವ್ಯವಹರಿಸುತ್ತಿರುವುದು ಎಲ್ಲವನ್ನೂ ನೆನಪು ಮಾಡಿದ್ದಾರೆ.

ಹಿರಿಯ ನಟಿ ಲೀಲಾವತಿ ವಿಧಿವಶರಾಗಿದ್ದು, ಅವರು ಬಾಲ್ಯದ ದಿನಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನಾವೂರಿನಲ್ಲಿ ಕಳೆದಿದ್ದರು. ಬಾಲ್ಯದಲ್ಲಿ ಲೀಲಾವತಿಯವರು ವಾಸವಿದ್ದ ಮನೆ ಈಗ ಇಲ್ಲದಿದ್ದರೂ, ಆ ಜಾಗದ ಕುರುಹು ಈಗಲೂ ಇದೆ.
ಲೀಲಾವತಿಯವರು ಹುಟ್ಟಿದಾಗ ಮಗು ಹೆಣ್ಣೆಂದು ಅವರ ತಂದೆ ತಾಯಿ ತೊರೆದಿದ್ದರು. ಆಗ ಅವರನ್ನು ಕ್ರಿಶ್ಚಿಯನ್ ದಂಪತಿ ಸಾಕಿದ್ದರು. ಈ ದಂಪತಿಯ ಸಂಬಂಧಿ, ಲೀಲಾವತಿಯವರೊಂದಿಗೆ ಒಡನಾಟವಿದ್ದ ದನ್ವಿಲ್ ಡಿಸಿಲ್ವಾ ಲೀಲಾವತಿವಯವರಿದ್ದ ಮನೆಯಿದ್ದ ಸ್ಥಳದ ಕುರುಹನ್ನು ತೋರಿಸಿದ್ದಾರೆ.
ಅಲ್ಲದೆ 15 ವರ್ಷಗಳ ಹಿಂದೆ ನಾವೂರಿನ ಮನೆಗೆ ಅವರು ಬಂದಿದ್ದರು. ಇಲ್ಲಿ ಬಂದು ತನಗೆ ಸಂತೋಷವಾಗಿದೆ. ಬಾಲ್ಯ ನೆನಪಾಗುತ್ತದೆ ಎಂದು ಲೀಲಾವತಿ ಹೇಳಿದ್ದರು ಎಂದು ದನ್ವಿಲ್ ಡಿಸೋಜ ನೆನಪಿಸಿದ್ದಾರೆ. ಆದರೆ ಲೀಲಾವರಿಯವರಿದ್ದ ಮನೆ ಈಗ ಇಲ್ಲ ಅವರು ಮುಳಿ ಹುಲ್ಲಿನ ಮನೆಯಲ್ಲಿ ವಾಸವಿದ್ದರಂತೆ.
ಲೀಲಾವತಿಯವರನ್ನು ಸಾಕಿದ್ದ ಕ್ರಿಶ್ಚಿಯನ್ ಕುಟುಂಬದ ಮಗಳು, ಲೀಲಾವತಿಯವರಿಗೆ ಸೋದರಿಯಂತಿದ್ದ ಲೂಸಿ ಸಿಕ್ವೇರಾ ತಮ್ಮಿಬ್ಬರ ಒಡನಾಟದ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ. ಬಾಲ್ಯದಿಂದಲೂ ಕಷ್ಟ-ಸುಖಗಳನ್ನು ನೋಡಿಕೊಂಡು ಬೆಳೆದ ಲೀಲಾವತಿ ಅವರು ನಟನೆಯನ್ನು ವೃತ್ತಿಯಾಗಿ ಸ್ವೀಕರಿಸಿ ಚಿತ್ರರಂಗತ್ತ ಹೆಜ್ಜೆ ಇಟ್ಟರು.

ಲೀಲಾವತಿ ಅವರ ಸಿನಿಮಾ ಪ್ರಯಾಣ
ಲೀಲಾವತಿ ಅವರು 1949ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು ಕಯಾದುವಿನ ಸಖಿಯಾಗಿ ಅಭಿನಯಿಸಿದ್ದರು. ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಸುಬ್ಬಯ್ಯ ನಾಯ್ಡು ಅವರ 'ಭಕ್ತ ಪ್ರಹ್ಲಾದ'ದಲ್ಲಿ ಕೂಡಾ ಲೀಲಾವತಿ ಅಭಿನಯಿಸಿದ್ದರು.
ಲೀಲಾವತಿ ಅವರು ತಮ್ಮ 50 ವರ್ಷಗಳ ವೃತ್ತಿ ಜೀವನದಲ್ಲಿ 600 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. 'ಭಕ್ತ ಕುಂಬಾರ', 'ಮನ ಮೆಚ್ಚಿದ ಮಡದಿ' ಮತ್ತು 'ಸಂತ ತುಕಾರಂ' ಚಿತ್ರಗಳಲ್ಲಿನ ಸ್ಮರಣೀಯ ನಟನೆಗೆ 1999 ರಲ್ಲಿ ಡಾ. ರಾಜ್‌ಕುಮಾರ್ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಲೀಲಾವತಿ ಕೇವಲ ನಟನೆ ಚಿತ್ರರಂಗ ಮಾತ್ರವಲ್ಲದೇ ಸಮಾಜಸೇವೆಯಲ್ಲೂ ಗುರುತಿಸಿಕೊಂಡಿದ್ದರು.












Click it and Unblock the Notifications