ಉಡುಪಿಯ ಗಂಡು ಮಗುವಿಗೆ ಆಂಬುಲೆನ್ಸ್ ತಾಯಿ ಮನೆಯಾಯ್ತು!
ಉಡುಪಿ, ನವೆಂಬರ್, 14: ಇತ್ತೀಚಿನ ದಿನಗಳಲ್ಲಿ ಕೆಲವು ಮಕ್ಕಳಿಗೆ 108 ಆಂಬುಲೆನ್ಸ್ ವಾಹನ ತವರು ಮನೆಯಾಗುತ್ತಿದೆ. ಮೈಸೂರು, ಬಂಟ್ವಾಳ ಇನ್ನಿತರ ಕಡೆ ಗರ್ಭಿಣಿಯರು ಮುದ್ದಾದ ಮಕ್ಕಳಿಗೆ ಆಂಬುಲೆನ್ಸ್ ನಲ್ಲೇ ಜನ್ಮ ನೀಡಿದ್ದಾರೆ. ಇದಕ್ಕೆ ಉಡುಪಿ ಜಿಲ್ಲೆಯು ಸಾಕ್ಷಿಯಾಗಿದೆ.
ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು 108 ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗುತ್ತಿರುವಾಗ ಆಕೆ ಮಾರ್ಗ ಮಧ್ಯದಲ್ಲಿ ಮಗುವನ್ನು ಹೆತ್ತ ಘಟನೆ ಉಡುಪಿಯ ಬ್ರಹ್ಮಾವರ ಸಮೀಪದ ಎಸ್.ಎಂ.ಎಸ್. ಕಾಲೇಜಿನ ಮುಂಭಾಗದಲ್ಲಿ ನಡೆದಿದೆ. ಬ್ರಹ್ಮಾವರ ನೀಲಾವರ ನಿವಾಸಿ ಸಂಜನಾ (21) 108 ಆಂಬುಲೆನ್ಸ್ ನಲ್ಲಿ ಗಂಡು ಮಗು ಹೆತ್ತ ಮಹಿಳೆ.[ಮೈಸೂರು: ಮಾರ್ಗಮಧ್ಯೆಯೇ ಆಂಬುಲೆನ್ಸ್ ನಲ್ಲಿ ಹೆಣ್ಣು ಮಗು ಜನನ]

ಗೋಪಾಲ ಎನ್ನುವವರ ಪತ್ನಿ ಸಂಜನಾ ಅವರಿಗೆ ಶುಕ್ರವಾರ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಬ್ರಹ್ಮಾವರ 108 ಆಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಕೆಲವೇ ನಿಮಿಷಗಳಲ್ಲೇ ಬಂದ ಆಂಬುಲೆನ್ಸ್ ಆಕೆಯನ್ನು ಉಡುಪಿಯ ಹೆರಿಗೆ ಆಸ್ಪತ್ರೆಯತ್ತ ಕರೆದೊಯ್ಯುತ್ತಿತ್ತು.
ಆ ಸಂದರ್ಭದಲ್ಲಿ ತೀವ್ರವಾದ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸಂಜನ ಮಾರ್ಗಮಧ್ಯೆ ಬ್ರಹ್ಮಾವರ ಎಸ್.ಎಂ,ಎಸ್, ಕಾಲೇಜಿನ ಎದುರು ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಡು ಮಗುವಿಗೆ ಜನ್ಮನೀಡಿದ್ದಾರೆ.[ಗರ್ಭಿಣಿ ಪಾಲಿಗೆ ಆಪದ್ಬಾಂಧವನಾದ ಬಂಟ್ವಾಳ ಆಸ್ಪತ್ರೆ ಸಿಬ್ಬಂದಿ]
ಆ ಸಂದರ್ಭದಲ್ಲಿ ಸಮಯ ಪ್ರಜ್ಞೆ ಮೆರೆದ 108 ವಾಹನ ಚಾಲಕ ಮಲ್ಲಪ್ಪ ಹಾಗೂ ಸ್ಟಾಫ್ ನರ್ಸ್ ಚಂದ್ರಶೇಖರ್ ತಾಯಿ ಮತ್ತು ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿ ಉಡುಪಿಯ ಆಸ್ಪತ್ರೆಗೆ ದಾಖಲಿಸಿದ್ದು, ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದಾರೆ.












Click it and Unblock the Notifications