ಮಂಗಳೂರು: ವಿಚಾರಣೆ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ವ್ಯಕ್ತಿ ಸಾವು
ಮಂಗಳೂರು, ಜೂನ್ 5: ಬಜ್ಪೆ ಪೊಲೀಸರ ವಶದಲ್ಲಿದ್ದ ವ್ಯಕ್ತಿಯೊಬ್ಬರು ವಿಚಾರಣೆ ವೇಳೆ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಸಾವಿಗೀಡಾದವರನ್ನು ಕಾವೂರು ಬಲ್ಪುಗುಡ್ಡೆಯ ಲೂಯಿಸ್ ಎಂಬವರ ಪುತ್ರ ಮೆಲ್ವಿನ್ ಜಾನ್ (39) ಎಂದು ಗುರುತಿಸಲಾಗಿದೆ.
ಮರವೂರು ಡ್ಯಾಮ್ ಬಳಿ ಭಾನುವಾರ ರಾತ್ರಿ ಸುಮಾರು 10:30ಕ್ಕೆ ನಾಲ್ಕು ಮಂದಿ ಯುವಕರು ಮದ್ಯಸೇವನೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಬಜ್ಪೆ ಪೊಲೀಸರು ಸ್ಥಳಕ್ಕೆ ತೆರಳಿ ನಾಲ್ವರನ್ನು ವಶಕ್ಕೆ ಪಡೆದಿದ್ದರು.

ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾಗ ಸುಮಾರು 11:20ಕ್ಕೆ ಕುರ್ಚಿಯಲ್ಲಿ ಕುಳಿತಿದ್ದ ಮೆಲ್ವಿನ್ ಜಾನ್ ಸ್ಥಳದಲ್ಲೇ ಕುಸಿದು ಬಿದಿದ್ದು, ಠಾಣೆಯ ಸಿಬ್ಬಂದಿಗಳು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ 11:45ಕ್ಕೆ ಅವರು ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೆಲ್ವಿನ್ ಹಲವು ವರ್ಷಗಳಿಂದ ಹೃದಯಸಂಬಂಧಿ ಖಾಹಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಇನ್ನು ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪೊಲೀಸ್ ಆಯುಕ್ತ ಚಂದ್ರಶೇಖರ್ ಅವರು ಉಪಾಯುಕ್ತ (ಕಾನೂನು ಮತ್ತು ಸುವ್ಯವಸ್ಥೆ ವಿಭಾಗ)ರಿಗೆ ಆದೇಶಿಸಿದ್ದಾರೆ. ಈ ಮಧ್ಯೆ ಮೆಲ್ವಿನ್ ಸಹೋದರ ಲಾರೆನ್ಸ್ ಬಜ್ಪೆ ಠಾಣೆಗೆ ದೂರು ನೀಡಿದ್ದು ಸೂಕ್ತ ತನಿಖೆಗಾಗಿ ಒತ್ತಾಯಿಸಿದ್ದಾರೆ.












Click it and Unblock the Notifications