ವಿದ್ಯಾರ್ಥಿನಿಯ ಕೊಲೆಗೆ ಯತ್ನಿಸಿದ ಆರೋಪಿಗೆ 18 ವರ್ಷ ಕಠಿಣ ಸಜೆ: ಮಂಗಳೂರಿನ ಈ ಕೇಸ್ ನೆನಪಿದೆಯಾ?
ಮಂಗಳೂರು, ಜನವರಿ 13: ಕಾಲೇಜು ವಿದ್ಯಾರ್ಥಿನಿಗೆ ದೈಹಿಕವಾಗಿ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಲ್ಲದೆ ಕೊಲೆಗೈಯುವ ಉದ್ದೇಶದಿಂದ ಚಾಕುವಿನಿಂದ ತಿವಿದಿರುವ ಸುಶಾಂತ್ ಎಂಬಾತನಿಗೆ 2ನೇ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯವು ಶುಕ್ರವಾರ 18 ವರ್ಷ 1 ತಿಂಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನೃತ್ಯ ತರಬೇತಿದಾರನಾಗಿದ್ದ ಶಕ್ತಿನಗರ ನಿವಾಸಿ ಆರೋಪಿ ಸುಶಾಂತ್(31) ಕಾರ್ಕಳದ ನಿಟ್ಟೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ನಿರಂತರ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ವಿದ್ಯಾರ್ಥಿನಿ ಕಾರ್ಕಳ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಅದರಂತೆ ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ಪರಿಣಾಮ ಹತಾಶನಾಗಿದ್ದ ಆರೋಪಿ ಜೈಲಿನಿಂದ ಜಾಮೀನು ಪಡೆದ ಬಳಿಕ 2019ರ ಜೂನ್ 28ರಂದು ಸಂಜೆ 4:30ಕ್ಕೆ ವಿದ್ಯಾರ್ಥಿನಿಯನ್ನು ಕೊಲೆಗೈಯ್ಯುವ ಉದ್ದೇಶದಿಂದ ಸ್ಕೂಟರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾನೆ. ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಹಿಂಬದಿಯ ಶಾಂತಿಧಾಮದ ಬಳಿ ತಡೆದು ನಿಲ್ಲಿಸಿದ ಸುಶಾಂತ್, ವಿದ್ಯಾರ್ಥಿನಿ ಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿ ಚೂರಿಯಿಂದ ತಿವಿದು ಗಂಭೀರ ಸ್ವರೂಪದ ಗಾಯಗೊಳಿಸಿದ್ದಾನೆ.
ಅಲ್ಲದೆ ಚೂರಿಯಿಂದ ತನ್ನ ಕುತ್ತಿಗೆಯನ್ನೇ ತಿವಿದು ಆತ್ಮಹತ್ಯೆಗೆ ಯತ್ನಿಸಿದ್ದ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಜುಲೈ 4ರಂದು ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಎಸ್‌ಐ ಗುರಪ್ಪಕಾಂತಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯವು ಆರೋಪಿಗೆ ಶಿಕ್ಷೆ ವಿಧಿಸಿದೆ.
ಐಪಿಸಿ ಸೆಕ್ಷನ್ 341ರಡಿ 1 ತಿಂಗಳ ಸಾದಾ ಸಜೆ, ಐಪಿಸಿ ಸೆಕ್ಷನ್ 326ರಡಿ 7 ವರ್ಷಗಳ ಕಠಿಣ ಸಜೆ ಹಾಗೂ 1 ಲಕ್ಷ ರೂ. ದಂಡ, ಐಪಿಸಿ ಸೆಕ್ಷನ್ 307ರಡಿ 10 ವರ್ಷಗಳ ಕಠಿಣ ಸಜೆ, ಐಪಿಸಿ ಸೆಕ್ಷನ್ 354ರಡಿ 1 ವರ್ಷಗಳ ಕಠಿಣ ಸಜೆ ಹಾಗೂ 10,000 ರೂ. ದಂಡ, ದಂಡ ಪಾವತಿಸಲು ವಿಫಲವಾದಲ್ಲಿ 2 ತಿಂಗಳ ಕಠಿಣ ಸಜೆ ಅನುಭವಿಸಲು ನ್ಯಾಯಾಲಯವು ಆರೋಪಿಗೆ ಆದೇಶಿಸಿದೆ. ಆರೋಪಿ ಒಟ್ಟು 18 ವರ್ಷ 1 ತಿಂಗಳು ಅನುಭವಿಸುವಂತೆ ತೀರ್ಪು ನೀಡಿವೆ. ಅಲ್ಲದೆ ದಂಡವನ್ನು ವಿಧಿಸಿದ್ದು, ದಂಡದ ಮೊತ್ತದಲ್ಲಿ 2 ಲಕ್ಷ ರೂ.ವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಆದೇಶಿಸಿದ್ದಾರೆ. ಸಂತ್ರಸ್ತೆಯ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ನಾಯಕ್ ವಾದ ಮಂಡಿಸಿದ್ದರು.
ಮಂಗಳೂರಿನಲ್ಲಿ ಹಾಡಹಗಲೇ ಕಳ್ಳತನ: ಮೂರು ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ಮಂಗಳೂರು: ಹಾಡಹಗಲೇ ಖದೀಮರು ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ಕಳವು ಮಾಡಿರುವ ಘಟನೆ ಮಂಗಳೂರು ನಗರದ ಹೊರವಲಯದ ಕುಲಶೇಖರದ ಕೆಎಂಎಫ್ ಡೈರಿ ಸಮೀಪ ಇರುವ ನಂದಿನಿ ನಗರದಲ್ಲಿ ನಡೆದಿದೆ
ಅರುಣ್ ಎಚ್.ಎಸ್ ಜನವರಿ 11ರಂದು ಬೆಳಗ್ಗೆ 10.30ಕ್ಕೆ ಪತ್ನಿಯನ್ನು ಫರಂಗಿಪೇಟೆಗೆ ಬಿಟ್ಟು ಅಪರಾಹ್ನ 5 ಗಂಟೆಗೆ ಮನೆಗೆ ವಾಪಸ್ ಬಂದಾಗ ಖದೀಮರು ಮನೆಯ ಹಂಚುಗಳನ್ನು ಕಿತ್ತು ಮನೆ ನುಗ್ಗಿ ಮನೆಯ ಕಪಾಟಿನವೊಳಗಿದ್ದ ಸರ, ಕಿವಿಯೋಲೆ, ಸರ, ಕೈಬಳೆ, ಉಂಗುರಗಳು ಸೇರಿದಂತೆ ಒಟ್ಟು ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications