ಬಾಲಕನ ಎದೆಭಾಗಕ್ಕೆ ಇಳಿದ ತೆಂಗಿನ ಗರಿ-ಸರ, ಆಮೇಲೆ ಏನಾಯ್ತು?
12 ವರ್ಷದ ಬಾಲಕನೊಬ್ಬನ ಎದೆಭಾಗಕ್ಕೆ ತೆಂಗಿನ ಗರಿ ಹಾಗೂ ಕುತ್ತಿಗೆಯಲ್ಲಿದ್ದ ಸರ ಹೊಕ್ಕಿಕೊಂಡಿರುವ ಘಟನೆ ರಾಜ್ಯದಲ್ಲಿ ನಡೆದಿದೆ. ಆತನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರು ಸುಮಾರು ಎರಡು ಗಂಟೆಗಳ ಕಾಲ ಆಪರೇಷನ್ ಮಾಡಿ ಬಾಲಕನ ಎದೆಯಲ್ಲಿದ್ದ ಗರಿ ಹಾಗೂ ಸರವನ್ನು ದೇಹದಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ಈ ಘಟನೆ ನಡೆದಿರುವುದು ಮಡಿಕೇರಿಯಲ್ಲಿ ಎಂದು ತಿಳಿದುಬಂದಿದೆ.
ಮಡಿಕೇರಿಯಲ್ಲಿ ನೆಲೆಸಿರುವ ಅಸ್ಸಾಂ ಮೂಲದ ಕುಟುಂಬದ ಬಾಲಕ ಆಟವಾಡುತ್ತಿದ್ದಾಗ ತೆಂಗಿನ ಗರಿಯ ಭಾಗವೊಂದು ಆತನ ಮೇಲೆ ಬಿದ್ದಿತ್ತು. ಈ ರಭಸಕ್ಕೆ ಬಾಲಕನ ಕುತ್ತಿಗೆಯಲ್ಲಿದ್ದ ಸರದ ಜೊತೆಗೆ ತೆಂಗಿನ ಗರಿಯೂ ಎದೆಯ ಭಾಗದಲ್ಲಿ ಸಿಲುಕಿಕೊಂಡು ದೇಹಕ್ಕೆ ಇಳಿದಿತ್ತು.

ಬಾಲಕನ ಕುತ್ತಿಗೆ ಮೂಲಕ ದೊಡ್ಡ ಗಾತ್ರದ ತೆಂಗಿನ ಗರಿಯ ದಿಂಡು ಹಾಗೂ ಕಬ್ಬಿಣದ ಚೈನ್ ಎದೆಯೊಳಗೆ ಹೊಕ್ಕಿತ್ತು. ಶನಿವಾರ ಸಂಜೆ ಕೆಲಸ ಮಾಡುತ್ತಿದ್ದ ವೇಳೆ ಬಾಲಕ ಕಮಲ್ ಹಸನ್ ಬಿದ್ದ ರಭಸಕ್ಕೆ ತೆಂಗಿನ ದಿಂಡು ಕುತ್ತಿಗೆ ಮೂಲಕ ಎದೆಯ ಭಾಗಕ್ಕೆ ಇಳಿದಿತ್ತು. ಬಳಿಕ ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಬಾಲಕನನ್ನು ಮಧ್ಯರಾತ್ರಿ ಕರೆದೊಯ್ಯಲಾಗಿತ್ತು.
ರಾತ್ರಿಯಾದರೂ ವೈದ್ಯರು ಕೂಡಲೇ ಆಪರೇಷನ್‌ಗೆ ಸಿದ್ಧತೆ ಮಾಡಿಕೊಂಡರು. ಕಾರ್ಡಿಯೋಥೊರಾಸಿಕ್ ಮತ್ತು ವಾಸ್ಕುಲರ್ ಸರ್ಜರಿ ವಿಭಾಗದ ಸಂಪೂರ್ಣ ತಂಡವು ವೈದ್ಯ ಸುರೇಶ್ ಪೈ ನೇತೃತ್ವದಲ್ಲಿ ಆಪರೇಷನ್ ಯಶಸ್ವಿಯಾಗಿ ನಿರ್ವಹಿಸಿದೆ. ಸುಮಾರು ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡವು ಬಾಲಕನ ಎದೆಯಲ್ಲಿದ್ದ ಗರಿ ಮತ್ತು ಸರವನ್ನು ಯಶಸ್ವಿಯಾಗಿ ಹೊರತೆಗೆದಿದೆ.
ಮಂಗಳೂರಿನಲ್ಲಿ ಈ ಬಾಲಕನ ಎದೆಯಲ್ಲಿ ಹೊಕ್ಕಿದ್ದ ತೆಂಗಿನ ಗರಿ ಹಾಗೂ ಸರವನ್ನು ಸುದೀರ್ಘ ಅವಧಿಯ ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆಯಲಾಗಿದೆ. ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸಿದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಡಾ.ಸುರೇಶ್ ಪೈ ನೇತೃತ್ವದ ತಂಡದ ಕಾರ್ಯ ಶ್ಲಾಘನೀಯ ಎಂದು ಆರೋಗ್ಯ ಇಲಾಖೆ ಮಾಹಿತಿ ಹಂಚಿಕೊಂಡಿದೆ.
ಬಾಲಕ ಈಗ ಚೇತರಿಸಿಕೊಳ್ಳುತ್ತಿದ್ದು, ಆತನ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯುತ್ತಮ ದರ್ಜೆಯ ಹಾಗೂ ಗುಣಮಟ್ಟದ ವೈದ್ಯಕೀಯ ಸಾಧನಗಳು ಇರುವುದು ಹಾಗೂ ಶ್ರೇಷ್ಠ ತಜ್ಞ ವೈದ್ಯರ ತಂಡದಿಂದ ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಾಗಿದೆ. ಸಾರ್ವಜನಿಕರಿಗೆ ಸದಾ ಉತ್ತಮ ಸೇವೆ ನೀಡುವುದು ನಮ್ಮ ಆದ್ಯ ಕರ್ತವ್ಯ ಎಂದು ಇಲಾಖೆ ಹೇಳಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಸಿಗೋದಿಲ್ಲ ಎಂಬ ದೂರುಗಳ ನಡುವೆ ಈ ವೈದ್ಯರ ಸ್ಪಂದನೆಯು ಮೆಚ್ಚುಗೆಗೆ ಪಾತ್ರವಾಗಿದೆ.












Click it and Unblock the Notifications