ದುರಂತಕ್ಕೀಡಾದ ಬಾರ್ಜ್ ಮೇಲೆತ್ತಲು ತಜ್ಞರ ತಂಡ ಮಂಗಳೂರಿಗೆ
ಮಂಗಳೂರು, ಜೂನ್ 05 : ಉಳ್ಳಾಲದ ಮೊಗವೀರ ಪಟ್ಣದ ಅರಬ್ಬೀ ಸಮುದ್ರದಲ್ಲಿ ಅರ್ಧ ಮುಳುಗಿ ಅತಂತ್ರ ಸ್ಥಿತಿಯಲ್ಲಿರುವ ಬಾರ್ಜ್ ಹೊರ ತರಲು ಮುಂಬೈಯಿಂದ ತಜ್ಞರ ತಂಡ ಇಂದು (ಸೋಮವಾರ) ಮಂಗಳೂರಿಗೆ ಆಗಮಿಸಲಿದೆ.
ಆಂಧ್ರದ ಧರ್ತಿ ಸಂಸ್ಥೆಗೆ ಸೇರಿರುವ ಈ ಬಾರ್ಜಿನ ಸ್ಥಳಾಂತರ ಮತ್ತು ದುರಸ್ತಿ ಕಾರ್ಯ ತುರ್ತಾಗಿ ಆಗಬೇಕಾಗಿದೆ. ಆದರೆ, ಇದನ್ನು ಹೊರತೆಗೆಯುವುದು ಬಹಳ ಕಷ್ಟಕರವಾದ ಕೆಲಸವಾಗಿದ್ದು, ಪ್ರಸ್ತುತ ಇದರ ಅಧ್ಯಯನ ನಡೆಸಿ ಬಳಿಕ ಮೇಲಕ್ಕೆತ್ತಲಿದೆ.[ಮಂಗಳೂರು: ದುರಂತಕ್ಕೀಡಾದ ಬಾರ್ಜ್ ನಲ್ಲಿದ್ದ 27 ನೌಕರರ ರಕ್ಷಣೆ]

ಸುಮಾರು 33 ಕೋಟಿ ರು. ವೆಚ್ಚದ ಈ ಬಾರ್ಜ್ ಸಿಂಗಾಪುರದಲ್ಲಿ ನಿರ್ಮಾಣ ಮಾಡಲಾಗಿದ್ದು, ಮುಂಬೈಯಿಂದ ಮಂಗಳೂರಿಗೆ 9 ತಿಂಗಳ ಹಿಂದೆ ತರಲಾಗಿತ್ತು. ಉಳ್ಳಾಲದಲ್ಲಿ ಕಡಲ್ಕೊರೆತ ತಡೆಗೋಡೆ ಕಾಮಗಾರಿಯನ್ನು ನಿರ್ವಹಿಸುತ್ತಿತ್ತು.
ಜೂನ್ 03ರಂದು ಉಳ್ಳಾಲ ಮೊಗವೀರಪಟ್ಣದ ಸಮುದ್ರದಲ್ಲಿ ಬ್ರೇಕ್ ವಾಟರ್ ಕಾಮಗಾರಿಗಾಗಿ ಕಾರ್ಮಿಕರನ್ನು ಹೊತ್ತು ತೆರಳಿದ್ದ ಬಾರ್ಜ್ ದುರಂತಕ್ಕೀಡಾಗಿತ್ತು. ಇದರಲ್ಲಿದ್ದ 27 ನೌಕರರ ರಕ್ಷಣೆ ಮಾಡಲಾಗಿತ್ತು.[ಉಳ್ಳಾಲದಲ್ಲಿ ಹಡಗು ದುರಂತ; 33 ಜನರು ಅಪಾಯದಲ್ಲಿ]
ಬಾರ್ಜಿನಲ್ಲಿದ್ದ ಇಂಧನ ಒಂದು ವೇಳೆ ಕಡಲಿಗೆ ಬಿಡುಗಡೆಯಾದರೆ ಜಲಚರಗಳಿಗೆ ಅಪಾಯವಿದೆ. ಅಲ್ಲದೆ ಜೂನ್ ತಿಂಗಳ ಬಳಿಕ ಮೀನುಗಳು ಮರಿ ಇಡುವ ಸಂದರ್ಭದಲ್ಲಿ ಇಂತಹ ಆಯಿಲ್ ಇನ್ನಷ್ಟು ಮಾರಕವಾಗುವುದರಿಂದ ಶೀಘ್ರವೇ ಬಾರ್ಜ್ ಮೇಲಕ್ಕೆತ್ತಬೇಕು ಎಂದು ಇಲ್ಲಿನ ಮೀನುಗಾರರು ಒತ್ತಾಯಿಸಿದ್ದಾರೆ.












Click it and Unblock the Notifications