ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿದರೆ ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದಾರಾ 'ಡಿ ಬಾಸ್' ದರ್ಶನ್?
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿ ಸುಮಲತಾ ಅಂಬರೀಶ್ ಜೊತೆಗೆ ಪ್ರಚಾರ ಮಾಡಿ ವಿಜಯದ ಪತಾಕೆ ಹಾರಿಸಲು ಸಹಾಯ ಮಾಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ. ಈ ಮೂಲಕ ಈ ಹಿಂದೆ ಮಂಡ್ಯದಲ್ಲಿ ಕಠಿಣ ಸ್ಪರ್ಧೆ ನೀಡಿ ಸೋತ್ತಿದ್ದ ಜೆಡಿಎಸ್ ವಿರುದ್ಧವೇ ತಾಯಿ ಮಗ ಅಖಾಡಕ್ಕೆ ಇಳಿಯಲು ಮುಂದಾಗುವ ಸಾಧ್ಯತೆ ಇದೆ.
ಮಂಡ್ಯದಲ್ಲಿ ಸುಮಲತಾಗೆ ಟಿಕೆಟ್ ಕೈತಪ್ಪವ ಸಾಧ್ಯತೆ ಇದ್ದು ಜೆಡಿಎಸ್ ಸೋಲಿಸುವ ಗುರಿಯೊಂದಿಗೆ ತಾಯಿ ಮಗ ಚುನಾವಣಾ ಕಣಕ್ಕೆ ಇಳಿಯುವ ಸನ್ನಿವೇಶಗಳು ದಟ್ಟವಾಗಿವೆ. ಹೀಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಅಖಾಡ ದಿನೇ ದಿನೇ ರಂಗೇರುತ್ತಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳದ್ದು ಒಂದು ರೀತಿಯ ರಾಜಕಾರಣವಾದರೆ ಮಂಡ್ಯದ್ದು ಮಾತ್ರ ಕಳೆದ ಲೋಕಸಭಾ ಚುನಾವಣೆಗಿಂತ ಬೇರೆ ರೂಪ ಪಡೆದುಕೊಂಡಿದೆ.

ಕಳೆದ ಲೋಕಸಭಾ ಚುನಾವಣೆಯ ವೇಳೆ ಆಗ ಸಿಎಂ ಆಗಿದ್ದ ಹೆಚ್‌ಡಿ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯದಿಂದ ಕಣಕ್ಕೆ ಇಳಿಸಿದ್ದರು. ಆಗ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಸೆರಗೊಡ್ಡಿ ಸ್ವಾಭಿಮಾನದ ಮತಭಿಕ್ಷೆ ಕೇಳಿ ವಿಜಯದ ಮಾಲೆ ಕೊರಳಿಗೆ ಹಾಕಿಕೊಂಡಿದ್ದರು. ಆಗ ಸುಮಲತಾ ಅವರಿಗೆ ಹೆಗಲಾಗಿ ನಿಂತಿದ್ದು ಕನ್ನಡದ ಚಿತ್ರರಂಗದ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್.
ಆದರೆ ಬದಲಾದ ರಾಜಕಾರಣದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಜೋಡಿಯಾಗಿ ಸ್ಪರ್ಧಿಸಲು ನಿರ್ಧರಿಸಿವೆ. ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದಾಗಿ ಮಂಡ್ಯದಿಂದ ಯಾರನ್ನು ಕಣಕ್ಕಿಳಿಸಬೇಕು ಎನ್ನುವುದು ಬಿಜೆಪಿಗೆ ಕಗ್ಗಂಟಾಗಿದೆ. ಇತ್ತ ಸುಮಲತಾ ಮಂಡ್ಯದಿಂದ ಸ್ಪರ್ಧಿಸಲು ನನಗೆ ಅವಕಾಶ ಸಿಗಲಿದೆ ಎನ್ನುವ ಭರವಸೆಯಲ್ಲಿ ಪ್ರಚಾರ ಆರಂಭಿಸಿದ್ದಾರೆ.
ಮತ್ತೊಂದೆಡೆ ಜೆಡಿಎಸ್ ದಳಪತಿಗಳು ಮಂಡ್ಯದಿಂದ ತಮ್ಮ ಪಕ್ಷದ ಅಭ್ಯರ್ಥಿ ಸ್ಪರ್ಧಿಸುವುದಾಗಿ ಪ್ರಚಾರ ಆರಂಭಿಸಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ವೆಂಕಟರಮಣಗೌಡರ ಪರ ಪ್ರಚಾರಕ್ಕೆ ದರ್ಶನ ಮುಂದಾಗಿದ್ದಾರೆ. ಇನ್ನೂ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯೂಸಿ ಆಗಿರುವ ಯಶ್ ಕೂಡ ಈ ಬಾರಿ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇದೆಲ್ಲವೂ ಮುಂಬರುವ ಮಂಡ್ಯ ಲೋಕಸಭಾ ಚುನಾವಣೆಯ ಬಗ್ಗೆ ಭಾರೀ ಕುತೂಹಲವನ್ನು ಹುಟ್ಟು ಹಾಕಿವೆ.

2024ರ ಮಂಡ್ಯ ಎಲೆಕ್ಷನ್?
ಕಳೆದ ಎಲೆಕ್ಷನ್‌ನಲ್ಲಿ ಸುಮಲತಾ ಪರ ಜೋಡೆತ್ತು ಪ್ರಚಾರ ಮಾಡಿತ್ತು. ಆದರೆ 2024ರ ಎಲೆಕ್ಷನ್‌ಗೆ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗಿದೆ. ಕೈ ಸಂಭಾವ್ಯ ಅಭ್ಯರ್ಥಿ ವೆಂಕಟರಮಣಗೌಡ ಜೊತೆ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತ ಪ್ರಚಾರಕ್ಕೆ ಮುಂದಾಗಿರುವ ಸುಮಲತಾ ಅವರನ್ನು ಆಹ್ವಾನಿಸಿರುವಂತೆ ಕಾಣಿಸುತ್ತಿಲ್ಲ.
ಮೇಲ್ನೋಟಕ್ಕೆ ಎಲ್ಲಾ ಸರಿಯಿದ್ದರು ಒಳಗಡೆ ಏನೂ ಸರಿ ಇಲ್ಲ ಅನ್ನೋದು ಕಾಣಿಸುತ್ತಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಜೋಡಿಯಾಗಿ ನಟ ದರ್ಶನ್ ಹಾಗೂ ಯಶ್ ಸುಮಲತಾ ಪರ ಸುಮಾರು 25 ದಿನಗಳ ಕಾಲ ಪ್ರಚಾರ ನಡೆಸಿದ್ದರು. 'ಅಮ್ಮಾ ನಾವು ನಿಮ್ಮ ಜೊತೆಯಲ್ಲಿ ಇದ್ದೇವೆ, ನಿಮಗೋಸ್ಕರ ಶ್ರಮ ಪಡುತ್ತೇವೆ' ಅಂತ ಪ್ರಚಾರದಲ್ಲಿ ಭಾಗವಿಸಿದ್ದರು. 25 ದಿನಗಳ ಪ್ರಚಾರದಲ್ಲಿ ಅಭೂತಪೂರ್ವವಾಗಿ ಬೆಂಬಲ ಹಾಗೂ ಸ್ವಾಗತ ಅವರಿಗೆ ಸಿಕ್ಕಿತ್ತು. ಅದೇ ರೀತಿ ಈ ಬಾರಿಯೂ ಆಗುತ್ತೆ ಅನ್ನೋ ಸುಮಲತಾ ಕನಸು ನನಸಾಗಿಲ್ಲ. ಈಗ ಸುಮಲತಾ ಅವರು ಒಬ್ಬಂಟಿಯಾದಂತೆ ಕಾಣಿಸುತ್ತಿದೆ.

ಒಬ್ಬಂಟಿಯಾದ ಸುಮಲತಾ?
ಅತ್ತ ಬಿಜೆಪಿಯಿಂದಲೂ ಸುಮಲತಾ ಅವರಿಗೆ ನಿರೀಕ್ಷೆಯಂತೆ ಟಿಕೆಟ್ ಘೋಷಣೆಯಾಗಿಲ್ಲ. ಇತ್ತ ಜೊತೆಯಾಗಿದ್ದ ಜೋಡೆತ್ತುಗಳು ಒಂದೊಂದು ಕಡೆ ಮುಖ ಮಾಡಿವೆ. ಯಶ್ ಪ್ಯಾನ್ ಇಂಡಿಯಾದಲ್ಲಿ ಬ್ಯುಸಿಯಾಗಿದ್ದು ಪ್ರಚಾರದಲ್ಲಿ ಭಾಗವಹಿಸುವುದಿಲ್ಲ, ಈ ಬಾರಿ ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ಸ್ವಂತ ಮಗ ಎನ್ನುತ್ತಿದ್ದ ದರ್ಶನ್ ಕೂಡ ಕಾಂಗ್ರೆಸ್ ಅಭ್ಯರ್ಥಿ ಪರ ಕಾಣಿಸಿಕೊಂಡಿದ್ದಾರೆ. ಇದು ಎಲ್ಲಾ ಘಟನೆಗಳನ್ನು ನೋಡಿದರೆ ಈ ಬಾರಿ ಚುನಾವಣೆಗೆ ಸುಮಲತಾ ಒಂಟಿಯಾದ್ರಾ ಅನ್ನೋ ಅನುಮಾನ ಶುರುವಾಗಿದೆ. ಆದರೆ ಮತ್ತೊಂದು ದೃಷ್ಟಿಯಿಂದ ನೋಡಿದರೆ ಇಲ್ಲಿ ಯಾರೇ ಜಯ ಗಳಿಸಿದರೂ ಅದು ಅಮ್ಮ ಮಗನ ಜಯವೇ ಆಗಲಿದೆ ಎನ್ನುವುದು ಮಾತ್ರ ಅಲ್ಲಗಳಿಯುವಂತಿಲ್ಲ.
ಬಿಜೆಪಿ ಟಿಕೆಟ್ ಯಾರಿಗೆ?
ಬಿಜೆಪಿ ಟಿಕೆಟ್ ತಮಗೆ ನೀಡುವ ಭರವಸೆಯಲ್ಲಿ ಸುಮಲತಾ ಇದ್ದಾರೆ. ಆದರೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಜೆಡಿಎಸ್ ಮಂಡ್ಯ ಟಿಕೆಟ್ ಇಂಗಿತ ವ್ಯಕ್ತಪಡಿಸಿದೆ. ಹೀಗಾಗಿ ಬಿಜೆಪಿ ಕೂಡ ಯಾರಿಗೆ ಟಿಕೆಟ್ ನೀಡುವುದು ಎಂದು ನಿಖರವಾಗಿಲ್ಲ. ಒಂದು ವೇಳೆ ಜೆಡಿಎಸ್‌ಗೆ ಟಿಕೆಟ್ ನೀಡಿದರೆ ಸುಮಲತಾ ಕೋಪಕ್ಕೆ ಇದು ಕಾರಣವಾಗಬಹುದು. ಹೀಗಾಗಿ ಬಿಜೆಪಿಗೆ ಬೆಂಬಲ ಸೂಚಿಸಿದರೂ ತಮ್ಮ ಟಿಕೆಟ್ ಕಸಿದುಕೊಳ್ಳಲು ಕಾರಣವಾದ ಜೆಡಿಎಸ್ ವಿರುದ್ಧ ಸುಮಲತಾ ಒಳಮುನಿಸುವ ಹೊಂದುವ ಸಾಧ್ಯತೆ ಇದೆ.
ಆದರೆ ಕಾಂಗ್ರೆಸ್ ಪರ ದರ್ಶನ್ ಪ್ರಚಾರಕ್ಕೆ ಮುಂದಾಗಿರುವುದು ನೋಡಿದರೆ ಸುಮಲತಾ ಅವರಿಗೆ ಬಿಜೆಪಿ ಟಿಕೆಟ್ ನೀಡುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಹೀಗಾಗಿ ಅಮ್ಮ ಮಗನಿಗೆ ಜೆಡಿಎಸ್ ವಿರುದ್ಧ ಗೆಲ್ಲುವ ಮಹದಾಸೆ ಇರುವುದು ಇಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ಜೆಡಿಎಸ್‌ಗೆ ಟಿಕೆಟ್? ಡಿ ಬಾಸ್ ಕೈ ಸಿದ್ಧತೆ
ಒಂದು ವೇಳೆ ಬಿಜೆಪಿ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡಿದ್ದೇ ಆದರೆ ಮಂಡ್ಯ ಚುನಾವಣೆ ರಾಜ್ಯದ ಗಮನ ಸೆಳೆಯುವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯ ಅಭ್ಯರ್ಥಿ ವಿರುದ್ಧ ಸ್ಪರ್ಧಿಸುವವರು ಕಾಂಗ್ರೆಸ್ ಅಭ್ಯರ್ಥಿಯೇ ಆದರೂ, ಕಳೆದ ಬಾರಿ ಜೆಡಿಎಸ್ ಪರ ಸ್ಪರ್ಧಿಸಿದ ನಿಖಿಲ್ ಹಾಗೂ ಇವರ ವಿರುದ್ಧ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸುಮಲತಾ ಅಮ್ಮನಿಗೆ ಬೆನ್ನೆಲುಬಾಗಿ ನಿಂತಿದ್ದ ಡಿ ಬಾಸ್ ನಡುವಿನ ಸ್ಪರ್ಧೆ ಎನ್ನಲಾಗುತ್ತಿದೆ.
ಆಗ ದರ್ಶನ್ ಬೆಂಬಲಿತ ಅಭ್ಯರ್ಥಿ ಸುಮಲತಾ ಜಯ ಗಳಿಸಿದ್ದರು. ಆದರೀಗ ಕಾಂಗ್ರೆಸ್ ಅಭ್ಯರ್ಥಿಗೆ ದರ್ಶನ್ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಬಿಜೆಪಿ ಬೆಂಬಲಿತ ಪಕ್ಷ ಜಯ ಗಳಿಸಿದರೆ ಅಮ್ಮನಿಗೆ ಜಯವಾದರೆ, ಇತ್ತ ಕಾಂಗ್ರೆಸ್ ಜಯ ಗಳಿಸಿದರೆ ಮಗನಿಗೆ (ದರ್ಶನ್) ಜಯ ಎಂಬಂತಾಗುತ್ತದೆ. ಆದರೆ ಇವರಿಬ್ಬರ ವಿರುದ್ಧ ಸ್ಪರ್ಧಿ ಮಾತ್ರ ಜೆಡಿಎಸ್ ಅನ್ನೋದು ಮಾತ್ರ ಹಿಂದೆ ತಳ್ಳಿ ಹಾಕುವಂತಿಲ್ಲ.












Click it and Unblock the Notifications