ಮಂಡ್ಯದಲ್ಲಿ ಆಕರ್ಷಣೀಯ ಫಲಪುಷ್ಪ ಪ್ರದರ್ಶನ, ಮಧುರ ವಸ್ತ್ರೋತ್ಸವ: ಇಂದೇ ಭೇಟಿ ನೀಡಿ
ಮಂಡ್ಯ, ಜನವರಿ 25: ಮಂಡ್ಯ ನಗರದ ತೋಟಗಾರಿಕೆ ಕಚೇರಿ ಆವರಣದಲ್ಲಿ ಶುಕ್ರವಾರದಿಂದ 5 ದಿನಗಳ ಕಾಲ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನ ಹಾಗೂ ಜವಳಿ ಇಲಾಖೆ ವತಿಯಿಂದ ಆಯೋಜಿಸಿರುವ ಮಧುರ ವಸ್ತ್ರೋತ್ಸವಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದ್ದಾರೆ.
ನಗರದ ತೋಟಗಾರಿಕೆ ಕಚೇರಿ ಆವರಣದ ಉದ್ಯಾನವನದಲ್ಲಿ ಆಕರ್ಷಕ ಬಣ್ಣದ ನಾನಾ ಜಾತಿಯ ಹೂಗಳಿಂದ ನಿರ್ಮಾಣಗೊಂಡ ಕಲಾಕೃತಿಗಳು ಪುಷ್ಪಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ. ಸೆಲ್ಫಿ ಪಾಯಿಂಟ್‌ಗಳಲ್ಲಿ ಎಲ್ಲರೂ ಫೋಟೋ ತೆಗೆದುಕೊಳ್ಳುವುದರೊಂದಿಗೆ ಫಲಪುಷ್ಪ ಪ್ರದರ್ಶನ ಜನಮನ ಸೆಳೆಯುತ್ತಿದೆ.

9 ಲಕ್ಷ ವಿವಿಧ ಬಣ್ಣದ ಸೇವಂತಿಗೆ ಮತ್ತು ಗುಲಾಬಿ ಹೂವುಗಳಿಂದ ಪ್ರವಾಸಿ ತಾಣ, ದೇವಾಲಯಗಳ ನಿರ್ಮಾಣವಾಗಿದ್ದು, ವಿವಿಧ ಹೂ ಅಲಂಕಾರಿಕ ಕುಂಡಗಳ ಜೋಡಣೆ, ವಿವಿಧ ತರಕಾರಿ ಬೆಳೆಗಳು ಹಾಗೂ ಪೌಷ್ಠಿಕ ಕೈತೋಟ ಮಾದರಿ ಹಾಗೂ ತರಕಾರಿ ಕೆತ್ತನೆ ಪ್ರದರ್ಶನ ಮತ್ತು ಜಿಲ್ಲೆಯ ತೋಟಗಾರಿಕೆ ಬೆಳೆಗಳ ವೈವಿದ್ಯತೆಯ ಮಾದರಿಗಳ ಪ್ರದರ್ಶನ ಹಾಗೂ ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಮತ್ತು ವಿವಿಧ ಅಭಿವೃದ್ಧಿ ಇಲಾಖೆಗಳ ಕಾರ್ಯಕ್ರಮಗಳ ಸಮಗ್ರ ಮಾಹಿತಿ ಇಲ್ಲಿ ಆಕರ್ಷಿಸುತ್ತದೆ.
ಪ್ರತಿ ದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ ಸಂಜೆ 6 ಗಂಟೆಯಿದ ರಾತ್ರಿ 10 ಗಂಟೆಯವರೆಗೆ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಯಸ್ಕರಿಗೆ ಟಿಕೆಟ್ ದರ 30, 6-12 ವರ್ಷದ ಮಕ್ಕಳಿಗೆ 20 ಹಾಗೂ ಸಮವಸ್ತ್ರ ಧರಿಸಿ ಬರುವ ಶಾಲಾ ಮಕ್ಕಳ ಗುಂಪುಗಳಿಗೆ ಹಾಗೂ 6 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತವಾಗಿದೆ.

ಫಲಪುಷ್ಪ ಪ್ರದರ್ಶನದಲ್ಲಿ 9 ಲಕ್ಷ ವಿವಿಧ ಬಣ್ಣದ ಸೇವಂತಿಗೆ ಮತ್ತು ವಿವಿಧ ಬಣ್ಣದ ಗುಲಾಬಿ ಹೂವುಗಳನ್ನು ಬಳಸಿ ಪ್ರಸಿದ್ದ ದೇವಾಲಯ ಹಾಗೂ ಪ್ರಸಿದ್ದ ಪ್ರವಾಸಿ ತಾಣಗಳನ್ನು ನಿರ್ಮಿಸಲಾಗಿದೆ. ಯುವ ಜನತೆಯನ್ನು ಸೆಳೆಯಲು ಹತ್ತು ವಿವಿಧ ಕಡೆಗಳಲ್ಲಿ ಸೆಲ್ಫಿ ಪಾಯಿಂಟ್, ಹೂವಿನ ಆಕೃತಿಯ ಕ್ಷಯ ರೋಗ ಕುರಿತು ಜಾಗೃತಿ, ನರೇಗಾ ಯೋಜನೆಯ ಮಾಹಿತಿಯೊನ್ನೊಳಗೊಂಡ ಸ್ಥಬ್ಥ ಚಿತ್ರ, ವಿವಿಧ ಆಕರ್ಷಕ ಬಗೆಯ ಅಡಿನಿಯಂ ಗಿಡಗಳ ಪ್ರದರ್ಶಿಕೆ, ಬೋನ್ಸಾಯ್ ಗಿಡಗಳ ಪ್ರದರ್ಶಿಕೆ, ವಿವಿಧ ತರಕಾರಿ ಹಣ್ಣುಗಳನ್ನು ಬಳಸಿ ಕಲಾಕೃತಿಗಳ ಕೆತ್ತನೆ ಮಾಡಲಾಗಿದೆ.
ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಪಶು ಸಂಗೋಪನೆ ಇಲಾಖೆ, ಆರೋಗ್ಯ ಇಲಾಖೆ, ಕೈಗಾರಿಕೆ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ವತಿಯಿಂದ ಕಲಾಕೃತಿಗಳನ್ನು ಹಾಗೂ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಗುತ್ತಿದೆ. ಮಧುರ ವಸ್ತ್ರೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ್, ಸಿಇಒ ಶೇಖ್ ತನ್ವೀರ್ ಅಸಿಫ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ನಗರ ಸಭೆಯ ಅಧ್ಯಕ್ಷ ನಾಗೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಕೈಮಗ್ಗ ಇಲಾಖೆ ಉಪನಿರ್ದೇಶಕ ರಂಗಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.












Click it and Unblock the Notifications