ಜೆಡಿಎಸ್‍ನಲ್ಲಿ ಕುತೂಹಲ ಕೆರಳಿಸಿದ ಶಿವರಾಮೇಗೌಡರ ನಡೆ!
ಮಂಡ್ಯ, ಫೆಬ್ರವರಿ 09; ಮಂಡ್ಯದ ಜೆಡಿಎಸ್‍ನಲ್ಲಿ ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಭಿನ್ನಾಭಿಪ್ರಾಯಗಳು ಮೂಡುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ಜೆಡಿಎಸ್ ನಾಯಕ ಎಲ್. ಆರ್. ಶಿವರಾಮೇಗೌಡ ಅವರ ಇತ್ತೀಚಿನ ನಡೆ-ನುಡಿಗಳು ಅದನ್ನು ಪುಷ್ಠೀಕರಿಸುತ್ತಿದೆ.
2023ರ ವಿಧಾನಸಭಾ ಚುನಾವಣೆಗೆ ನಾಗಮಂಗಲ ಕ್ಷೇತ್ರದಿಂದ ಎಲ್. ಆರ್. ಶಿವರಾಮೇಗೌಡರು ಜೆಡಿಎಸ್‍ನ ಟಿಕೆಟ್ ಆಕಾಂಕ್ಷಿ. ಈ ಕುರಿತಂತೆ ಈಗಿನಿಂದಲೇ ಹೇಳಿಕೆ ನೀಡಲು ಆರಂಭಿಸಿರುವುದು ಹಾಲಿ ಜೆಡಿಎಸ್ ನವರೇ ಆಗಿರುವ ಶಾಸಕ ಕೆ. ಸುರೇಶ್ ಗೌಡರಿಗೆ ಇರಿಸುಮುರಿಸನ್ನುಂಟು ಮಾಡುತ್ತಿದೆ.
ಮಂಡ್ಯದಲ್ಲಿ ಜೆಡಿಎಸ್ ಭದ್ರವಾಗಿಸಲು ನಿಖಿಲ್ ರೈತ ತಂತ್ರ!
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಕುಮಾರ ಸ್ವಾಮಿಗೆ ರಾಜಕೀಯ ಭವಿಷ್ಯ ತೋರಿಸುವತ್ತ ಶ್ರಮವಹಿಸುತ್ತಿದ್ದಾರೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರೂ ಅಚ್ಚರಿಯಿಲ್ಲ.
ರಾಜಕೀಯಕ್ಕೆ ಬರಲು ಯೋಚಿಸಬೇಕಾಗಿದೆ: ನಿಖಿಲ್ ಕುಮಾರಸ್ವಾಮಿ!
ಒಂದು ವೇಳೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೂ ಅದು ಮಂಡ್ಯ ಜಿಲ್ಲೆಯಲ್ಲಿಯೇ ಸ್ಪರ್ಧೆ ಮಾಡುತ್ತಾರೆ. ಆ ವೇಳೆ ಅಲ್ಲಿನ ಯಾವುದಾದರೊಂದು ಕ್ಷೇತ್ರವನ್ನು ಸ್ಥಳೀಯ ಶಾಸಕರಾಗಲೀ, ಮುಖಂಡರಾಗಲೀ ಬಿಟ್ಟುಕೊಡುವುದು ಅನಿವಾರ್ಯವಾಗಲಿದೆ.
ಬದಲಾಗುತ್ತಿದೆ ಜೆಡಿಎಸ್ ಕಾರ್ಯತಂತ್ರ: ಟಾಪ್ ಗೇರ್ನಲ್ಲಿ ಎಚ್ಡಿಕೆ, ನಿಖಿಲ್ ಕುಮಾರಸ್ವಾಮಿ

ಪಕ್ಷದ ನಾಯಕರ ಹೇಳಿಕೆಗಳು
2019ರ ಲೋಕ ಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು ಕಂಡಿದ್ದರೂ ರಾಜಕೀಯದ ಒಳಮರ್ಮ ನಿಖಿಲ್‍ಕುಮಾರಸ್ವಾಮಿಗೆ ಚೆನ್ನಾಗಿಯೇ ಅರ್ಥವಾಗಿದೆ. ಅವರ ಸೋಲಿಗೆ ಅವರದ್ದೇ ಪಕ್ಷದ ಮುಖಂಡರ ಅಸಂಬದ್ಧ ಹೇಳಿಕೆಗಳು ಕೂಡ ಕಾರಣ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅವತ್ತು ಎಲ್. ಆರ್. ಶಿವರಾಮೇಗೌಡರು ಎದುರಾಳಿ ಸುಮಲತಾ ಅವರ ವಿರುದ್ಧ ನೀಡಿದ ಹೇಳಿಕೆಗಳು ಮುಜುಗರ ತಂದಿದ್ದವಲ್ಲದೆ, ಪಕ್ಷಕ್ಕೂ ಹೊಡೆತ ನೀಡಿದ್ದವು.

ಜೆಡಿಎಸ್‍ನಲ್ಲಿ ಎಲ್ಲವೂ ಸರಿಯಿಲ್ಲ
ವಿಧಾನಸಭಾ ಚುನಾವಣೆಗೆ ಇನ್ನೆರಡು ವರ್ಷ ಬಾಕಿಯಿದೆ. ಆದರೆ, ಈಗಲೇ ಪಕ್ಷದ ಟಿಕೆಟ್ ಬಗ್ಗೆ ಆಕಾಂಕ್ಷೆ ವ್ಯಕ್ತಪಡಿಸಿರುವುದು ಅದರಲ್ಲೂ ಸ್ಥಳೀಯ ಶಾಸಕರು ಇರುವಾಗಲೇ ತಾನು ಸ್ಪರ್ಧಿಸುತ್ತೇನೆ ಎಂಬ ಹೇಳಿಕೆ ನೀಡಿರುವುದನ್ನು ನೋಡಿದರೆ ಜೆಡಿಎಸ್‍ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತಿದೆ.
ಆದರೆ, ಶಿವರಾಮೇಗೌಡರು ಮಾತ್ರ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಿಯೇ ತೀರುತ್ತೇನೆ ಎಂಬ ಹಠಕ್ಕೆ ಬಿದ್ದಂತೆ ಕಾಣುತ್ತಿದ್ದು, ಅದಕ್ಕೆ ಬೇಕಾದ ತಯಾರಿಗಳನ್ನು ಈಗಿನಿಂದಲೇ ಮಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಿಯೇ ತೀರುತ್ತೇನೆಂದು ಹೊರಟರೆ ಆಗ ಅಲ್ಲಿ ಹಾಲಿ ಶಾಸಕರಾಗಿರುವ ಸುರೇಶ್ ಗೌಡರು ಸುಮ್ಮನಿರುತ್ತಾರಾ? ಎಂಬ ಪ್ರಶ್ನೆಗಳು ಮೂಡುತ್ತವೆ.

ಬೆಂಬಲಿಗರ ಒತ್ತಡ
ಶಿವರಾಮೇಗೌಡರ ಪ್ರಕಾರ ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬೆಂಬಲಿಗರರು ಒತ್ತಡ ಹೇರುತ್ತಿದ್ದಾರಂತೆ. ಹಾಗಾಗಿ ಜೆಡಿಎಸ್‍ನಿಂದ ಟಿಕೆಟ್ ಪಡೆದು ಸ್ಪರ್ಧಿಸುತ್ತಾರಂತೆ. ಆದರೆ ಈಗ ಅದೇ ಕ್ಷೇತ್ರದ ಜೆಡಿಎಸ್ ಶಾಸಕರಾಗಿರುವ ಕೆ. ಸುರೇಶ್‍ಗೌಡರನ್ನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಮನವಿ ಮಾಡುತ್ತಾರಂತೆ. ಆದರೆ ಇದನ್ನು ಸುರೇಶ್ ಗೌಡರು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುತ್ತಾರಾ? ಅದು ಗೊತ್ತಿಲ್ಲ. ಆದರೆ ಶಿವರಾಮೇಗೌಡರಂತು ತುಂಬಾ ಆತ್ಮವಿಶ್ವಾಸದಿಂದ ಇರುವುದು ಕಂಡು ಬರುತ್ತಿದೆ.

ಶಿವರಾಮೇಗೌಡರು ಹೇಳುತ್ತಿರುವುದೇನು?
"ಮುಂದಿನ ವಿಧಾನಸಭಾ ಚುನಾವಣೆಗೆ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸುವ ನಿಟ್ಟಿನಲ್ಲಿ ಕೆಲಸ- ಕಾರ್ಯಗಳನ್ನು ಪ್ರಾರಂಭಿಸಿದ್ದೇನೆ. ನಾನು 9 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು, 3 ಚುನಾವಣೆಯಲ್ಲಿ ಗೆದ್ದಿದ್ದೇನೆ. ಲೋಕಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನನಗೆ ಅಧಿಕಾರ ಸಿಕ್ಕಿದ್ದು ಕೇವಲ ಐದು ತಿಂಗಳು ಮಾತ್ರ. ನನಗೆ ಅನ್ಯಾಯವಾಗಿರುವ ಬಗ್ಗೆ ನಾಗಮಂಗಲ ಸೇರಿದಂತೆ ಇಡೀ ಮಂಡ್ಯ ಜಿಲ್ಲೆಯ ಜನರಿಗೆ ಅನುಕಂಪ ಇದೆ ಎಂದು ಶಿವರಾಮೇಗೌಡರು ಹೇಳಿದ್ದಾರೆ.
"ಇದಕ್ಕಾಗಿಯೇ ನನ್ನ ಮೇಲೆ ಅವರು ವಿಧಾನಸಭೆಗೆ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದಾರೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದಾಗ ಬರೋಬ್ಬರಿ ಎರಡೂವರೆ ಲಕ್ಷ ಮತಗಳ ಅಂತರಗಳಿಂದ ಜನ ನನ್ನನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದ್ದರು" ಎಂದು ಹೇಳಿದ್ದಾರೆ. ಇಷ್ಟು ಮಾತುಗಳನ್ನು ಕೇಳಿದ ಮೇಲೆ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿಯೇ ತೀರುತ್ತಾರೆ ಎಂಬುದಂತು ಮನದಟ್ಟಾಗುತ್ತದೆ.

ಆತ್ಮವಿಶ್ವಾಸ, ಭಿನ್ನಾಭಿಪ್ರಾಯ?
ಈ ಹಿಂದೆ ನಿಖಿಲ್ ಕುಮಾರಸ್ವಾಮಿ ಅವರು ಮುಂದಿನ ಚುನಾವಣೆಗೂ ನಾಗಮಂಗಲದಿಂದ ಸುರೇಶ್ ಗೌಡರೇ ಸ್ಪರ್ಧಿಸುತ್ತಾರೆ ಎಂಬಂತಹ ಹೇಳಿಕೆ ನೀಡಿದ್ದರು. ಜತೆಗೆ ಹಾಲಿ ಶಾಸಕರನ್ನು ಬದಲಾಯಿಸಿ ಮತ್ತೊಬ್ಬರಿಗೆ ಟಿಕೆಟ್ ಕೊಡುವುದು ಕಷ್ಟಸಾಧ್ಯ.
ಆದರೆ, ಸುರೇಶ್‍ಗೌಡರು ಎರಡು ಬಾರಿ ಶಾಸಕರಾಗಿದ್ದು, ಈ ಬಾರಿ ಅವರು ನನಗೆ ಕ್ಷೇತ್ರ ಬಿಟ್ಟುಕೊಟ್ಟು ಲೋಕಸಭೆಗೆ ಹೋಗಲಿ ಎನ್ನುವ ಆಗ್ರಹ ಮಾಡುತ್ತಿರುವ ಶಿವರಾಮೇಗೌಡರು ತನಗೆ ಪಕ್ಷದಿಂದ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಮಾತುಗಳನ್ನಾಡುತ್ತಿರುವುದು ಅವರಲ್ಲಿನ ಆತ್ಮವಿಶ್ವಾಸದಿಂದಲೋ ಅಥವಾ ಪಕ್ಷದೊಳಗಿನ ಭಿನ್ನಾಭಿಪ್ರಾಯದಿಂದಲೋ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.