ಕೃಷ್ಣ ರಾಜೀನಾಮೆ: ಮಂಡ್ಯದಲ್ಲಿ ಅತಂತ್ರವಾಯ್ತು ಕಾಂಗ್ರೆಸ್!

By: ಮಂಡ್ಯ ಪ್ರತಿನಿಧಿ
Subscribe to Oneindia Kannada

ಮಂಡ್ಯ, ಫೆಬ್ರವರಿ 7: ಈಗಾಗಲೇ ಒಡೆದು ಹೋಳಾಗಿರುವ ಮಂಡ್ಯದ ಕಾಂಗ್ರೆಸ್‍ನಲ್ಲಿ ಹಿರಿಯ ನಾಯಕ ಎಸ್.ಎಂ. ಕೃಷ್ಣ ಅವರ ರಾಜೀನಾಮೆ ಬಳಿಕ ರಾಜಕೀಯ ಮೇಲಾಟಗಳು ನಡೆಯುತ್ತಿದ್ದು, ಒಂದಷ್ಟು ಮಂದಿ ಪಕ್ಷಕ್ಕೆ ನಿಷ್ಠೆ ತೋರಿಸಿ ಉಳಿದುಕೊಂಡಿದ್ದರೆ, ನಾಯಕ ನಿಷ್ಠೆಯವರು ರಾಜೀನಾಮೆ ನೀಡಿ ಹೊರಬರುತ್ತಿದ್ದಾರೆ.

ಮೈಸೂರಿನಲ್ಲೂ ಕೆಲವು ಕೃಷ್ಣರ ಅಭಿಮಾನಿಗಳು ರಾಜೀನಾಮೆ ನೀಡಿದ ಸುದ್ದಿಗಳಿವೆ. ಇತ್ತೀಚೆಗೆ ಕೃಷ್ಣ ಅವರು ರಾಜಕೀಯದಿಂದ ದೂರವಾಗಿಯೇ ಇದ್ದರು. ಅವರ ಬಗ್ಗೆ ಕಾಂಗ್ರೆಸ್‍ನ ಯಾವ ನಾಯಕರೂ ಮಾತನಾಡುತ್ತಿರಲಿಲ್ಲ. ಅವರು ರಾಜೀನಾಮೆ ಘೋಷಣೆ ಮಾಡಿದ ಬಳಿಕ ಮಂಡ್ಯ ಸೇರಿದಂತೆ ಹಳೇ ಮೈಸೂರು ವ್ಯಾಪ್ತಿಯಲ್ಲಿ ಸಂಚಲನ ಆರಂಭವಾಗಿದೆ.

ಮಂಡ್ಯದಲ್ಲಿ ಕಾಂಗ್ರೆಸ್ ಯುಗ ಅಂತ್ಯಗೊಳ್ಳುವ ಲಕ್ಷಣಗಳು ಕಂಡು ಬರುತ್ತಿದೆ. ಕಾಂಗ್ರೆಸ್ ಉಸಿರಾಡಲು ಅಂಬರೀಶ್ ಅವರ ಪ್ರಭಾವ ಇತ್ತು ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಅವರನ್ನು ಸಂಪುಟದಿಂದ ಕೈಬಿಟ್ಟ ಬಳಿಕ ಅವರು ಪಕ್ಷದ ಚಟುವಟಿಕೆಯಿಂದ ದೂರವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.[ಕೃಷ್ಣನ ಹಿಂದೆ ಹೊಂಟಿತು ಮಂಡ್ಯದ ಕಾಂಗ್ರೆಸ್ ಪಟಾಲಂ]

ಉಭಯ ಸಂಕಟ

ಉಭಯ ಸಂಕಟ

ಎಸ್ಸೆಂ ಕೃಷ್ಣ ರಾಜೀನಾಮೆ ನಂತರ ಅವರ ಮಾರ್ಗದರ್ಶನದಲ್ಲಿ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದ ಕೆಲವು ನಾಯಕರಿಗೆ ಈಗ ಸಂಕಟ ಆರಂಭವಾಗಿದೆ. ಕೃಷ್ಣ ಅವರನ್ನು ಬೆಂಬಲಿಸಿ ಹೊರ ಬರುವಂತಿಲ್ಲ. ಪಕ್ಷದಲ್ಲೇ ಇದ್ದು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆಯೂ ಇಲ್ಲದ ಉಭಯ ಸಂಕಟ ಅವರನ್ನು ಕಾಡುತ್ತಿದೆ.

ಕೃಷ್ಣ ವಿರೋಧಿ ಬಣಕ್ಕೆ ಸಂತಸ

ಕೃಷ್ಣ ವಿರೋಧಿ ಬಣಕ್ಕೆ ಸಂತಸ

ಮಂಡ್ಯದಲ್ಲಿಯೂ ಎಸ್.ಎಂ.ಕೃಷ್ಣರ ವಿರೋಧಿ ಬಣ ಕೆಲಸ ಮಾಡುತ್ತಾ ಬಂದಿದ್ದು, ಆ ಬಣದ ನಾಯಕರಿಗೆ ಮಾತ್ರ ಎಸ್.ಎಂ.ಕೃಷ್ಣ ರಾಜೀನಾಮೆ ನೀಡಿರುವುದು ಸಂಭ್ರಮ ಪಡುವಂತಾಗಿದೆ. ಆದರೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮಂಡ್ಯ ಜಿಲ್ಲೆಯಲ್ಲಿ ಗಟ್ಟಿಯಾಗಿ ನೆಲೆಯೂರುವ ಧೈರ್ಯ ಈ ಮುಖಂಡರಿಗಿಲ್ಲ. ಕಾರಣ ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಮುಗ್ಗರಿಸಿರುವುದು ಗೊತ್ತಾಗಿದೆ. ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕರೇ ತಟಸ್ಥರಾದರೆ ಮುಂದೆ ಹೇಗೆ ಎಂಬ ಭಯವೂ ಅಳಿದುಳಿದ ನಾಯಕರನ್ನು ಕಾಡುತ್ತಿದೆ.

ಕೃಷ್ಣ ಆಪ್ತವಲಯಕ್ಕೆ ಬಿಸಿ ತುಪ್ಪ

ಕೃಷ್ಣ ಆಪ್ತವಲಯಕ್ಕೆ ಬಿಸಿ ತುಪ್ಪ

ಕೃಷ್ಣರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಮತ್ತು ಮದ್ದೂರಿನ ಹಲವು ಕಾಂಗ್ರೆಸ್ಸಿಗರು ಕೃಷ್ಣರನ್ನು ಬೆಂಬಲಿಸಿದ್ದಾರೆ. ಇದೆಲ್ಲದರ ನಡುವೆ ಕೃಷ್ಣ ಅವರ ನಡೆ ಬಹಳ ಗೌಪ್ಯವಾಗಿದ್ದು, ಅವರ ಹಿಂಬಾಲಕರಿಗೆ ಬಿಸಿ ತುಪ್ಪವಾಗಿದೆ. ಈ ನಡುವೆ ಅವರು ಬೇರೆ ಪಕ್ಷಕ್ಕೆ ಹೋಗುವುದು ಬೇಡ ಹೊಸ ಪಕ್ಷ ಕಟ್ಟಲಿ ಎಂದು ಮಾಜಿ ಸಂಸದ ಜಿ. ಮಾದೇಗೌಡ ಸೇರಿದಂತೆ ಹಲವರು ಸಲಹೆ ನೀಡುತ್ತಿದ್ದಾರೆ. ಆದರೆ ಅದು ಅಷ್ಟು ಸುಲಭದ ಕೆಲಸವಲ್ಲ ಎಂಬುದು ಸ್ವತಃ ಕಷ್ಣರಿಗೆ ಗೊತ್ತಿದೆ.

ಒಕ್ಕಲಿಗರ ಪ್ರಾಬಲ್ಯ

ಒಕ್ಕಲಿಗರ ಪ್ರಾಬಲ್ಯ

ಮಂಡ್ಯದಲ್ಲಿ ಕೃಷ್ಣರ ಬಳಿಕ ಒಕ್ಕಲಿಗ ನಾಯಕರ ಅಗತ್ಯತೆ ಕಾಂಗ್ರೆಸಿಗೆ ಇದೆ. ಹೀಗಾಗಿ ಅಂಬರೀಶ್ ಅವರನ್ನು ಮನವೊಲಿಸಿ ಅವರಿಗೆ ನಾಯಕತ್ವ ನೀಡುವ ಲೆಕ್ಕಚಾರಗಳು ಒಂದೆಡೆಯಾದರೆ, ಮತ್ತೊಂದೆಡೆ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮಂಡ್ಯದಲ್ಲಿ ಸಂಘಟನೆಯ ನಾಯಕತ್ವ ನೀಡುವ ಮಾತುಕತೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಮಂಡ್ಯದಲ್ಲಿ ಒಕ್ಕಲಿಗರ ಪ್ರಾಬಲ್ಯ ಜಾಸ್ತಿಯಿರುವುದರಿಂದ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಗಳು ಕಾಂಗ್ರೆಸ್‍ನಲ್ಲಿ ನಡೆಯುತ್ತಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್ ಮೂಲೆಗುಂಪಾಗುವುದೇ?

ಕಾಂಗ್ರೆಸ್ ಮೂಲೆಗುಂಪಾಗುವುದೇ?

ಇದೆಲ್ಲದರ ನಡುವೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಕೂಡ ಹಿಂದೆ ಬಿದ್ದಿಲ್ಲ. ರಾಜೀನಾಮೆ ನೀಡಿರುವ ಕೃಷ್ಣ ಮತ್ತು ಮೌನಕ್ಕೆ ಶರಣಾಗಿರುವ ಅಂಬರೀಶ್ ಅವರನ್ನು ತಮ್ಮತ್ತ ಸೆಳೆದು ಆ ಮೂಲಕ ಮಂಡ್ಯದಲ್ಲಿ ಕಾಂಗ್ರೆಸ್ ಅನ್ನು ಮೂಲೆಗುಂಪು ಮಾಡಿ ತಮ್ಮ ಪ್ರಾಬಲ್ಯ ಮೆರೆಯಲು ಹವಣಿಸುತ್ತಿದ್ದಾರೆ. ಎಲ್ಲ ಬೆಳವಣಿಗೆಗಳು ಕಾಂಗ್ರೆಸ್ಸಿನ ಮೇಲೆ ಪರಿಣಾಮ ಬೀರಲಿವೆ ಎಂಬುದರಲ್ಲಿ ಎರಡು ಮಾತಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Resignation of former Chief Minister SM Krishna to Congress has opened pandora's box, especially in Mandya. Many loyalist of Krishna have decided to quit the party. Keeping Ambarish away from the cabinet has dented the reputation in Mandya. What will happen in Mandya in upcoming assembly election to Karnataka?
Please Wait while comments are loading...