ಮೇಲುಕೋಟೆಯ ಚೆಲುವನಾರಾಯಣನ ಅದ್ಧೂರಿ ವೈರಮುಡಿ ಧಾರಣೆ: ಇಲ್ಲಿದೆ ಮಹತ್ವದ ಮಾಹಿತಿ
ಮಂಡ್ಯ, ಏಪ್ರಿಲ್ 07: ಭಾರತದ ಪ್ರಮುಖ ನಾಲ್ಕು ವೈಷ್ಣವ ಕ್ಷೇತ್ರಗಳಾದ ( ಶ್ರೀರಂಗ, ತಿರುಪತಿ, ಕಾಂಚೀಪುರ) ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವದ ಸಂಭ್ರಮ ಮನೆ ಮಾಡಿದೆ, ಲಕ್ಷಾಂತರ ಭಕ್ತರು ಕಿರೀಟಧಾರಿಯಾದ ಚೆಲುವರಾಯನನ್ನು ಕಣ್ತುಂಬಿಕೊಳ್ಳಲು ಮೇಲುಕೋಟೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಚೆಲುವರಾಯಸ್ವಾಮಿಗೆ ವೈರಮುಡಿ ಧರಿಸಲಾಗುತ್ತಿದ್ದು, ಈ ಸಂದರ್ಭ ನಡೆಯುವ ಉತ್ಸವವೇ ವೈರಮುಡಿ ಬ್ರಹ್ಮೋತ್ಸವವಾಗಿದೆ. ಈ ಬಾರಿ ಇಂದು (ಏಪ್ರಿಲ್ 7) ಸೋಮವಾರದಂದು ನಡೆಯುತ್ತಿದ್ದು, ಇಡೀ ಮೇಲುಕೋಟೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಈ ಸುಂದರ ಕ್ಷಣವನ್ನು ಕಣ್ತುಂಬಿ ಕೊಳ್ಳಲು ಮತ್ತು ಭವ್ಯ ಮೆರವಣಿಗೆಯಲ್ಲಿ ಭಾಗಿಯಾಗಲು ಭಕ್ತರು ತವಕಿಸುತ್ತಿದ್ದಾರೆ. ಪ್ರತಿ ದಿನವೂ ಮೇಲುಕೋಟೆಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅದರಲ್ಲೂ ವೈರಮುಡಿಯ ವೇಳೆ ಪಾಲ್ಗೊಂಡು ದೇವರ ದರ್ಶನ ಮಾಡಿದರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಮೇಲುಕೋಟೆ ನಿಸರ್ಗ ಸುಂದರ ತಾಣವಾಗಿರುವುದಲ್ಲದೆ, ಪವಿತ್ರ ಕ್ಷೇತ್ರವಾಗಿಯೂ ಗಮನಸೆಳೆಯುತ್ತವೆ. ಇಲ್ಲಿಗೆ ತೆರಳಿದವರಿಗೆ ಬೆಟ್ಟಗುಡ್ಡಗಳು ಅವುಗಳ ಮೇಲೆ ಮತ್ತು ನಡುವೆ ನೆಲೆನಿಂತಿರುವ ಹತ್ತಾರು ದೇಗುಲಗಳು, ಸ್ಪಟಿಕದಂತೆ ಹೊಳೆಯುವ ಸುಂದರ ಕಲ್ಯಾಣಿ, ಕೆರೆಗಳು, ಹಚ್ಚ ಹಸಿರಿನೊಂದಿಗೆ ಸುತ್ತಲೂ ಹರಡಿಕೊಂಡಿರುವ ಕೃಷಿ ಭೂಮಿಗಳು ಹೀಗೆ ಸುಂದರ ಲೋಕವೊಂದು ನಮ್ಮ ಕಣ್ಮನ ಸೆಳೆಯುತ್ತವೆ.
ಮೇಲುಕೋಟೆಗೆ ಭಕ್ತರು ಮತ್ತು ಪ್ರವಾಸಿಗರು ಆಗಾಗ್ಗೆ ಇಲ್ಲಿಗೆ ಬರುತ್ತಲೇ ಇರುತ್ತಾರೆ. ಅದರಲ್ಲೂ ಪ್ರತಿಯೊಬ್ಬರೂ ತಮ್ಮ ಜೀವಮಾನದಲ್ಲಿ ವೈರಮುಡಿ ಬ್ರಹ್ಮೋತ್ಸವದಲ್ಲಿ ಭಾಗಿಯಾಗ ಬೇಕೆಂದು ಬಯಸುತ್ತಾರೆ. ವೈರಮುಡಿ ಬಗ್ಗೆ ಹೇಳಬೇಕೆಂದರೆ ಇದು ವಜ್ರ ಖಚಿತ ಕಿರೀಟವಾಗಿದ್ದು, ಇದು ಶ್ರೀಮಾನ್ ನಾರಾಯಣನ ಕಿರೀಟವೆಂದೂ ದ್ವಾಪರಯುಗದಲ್ಲಿ ಕೃಷ್ಣನ ಮೂಲಕ ಚೆಲುವರಾಯನಿಗೆ ಗರುಡನಿಂದ ತೊಡಿಸಿದನೆಂಬುವುದು ಒಂದೆಡೆಯಾದರೆ, ಮತ್ತೊಂದೆಡೆ ವೈಕುಂಠದಿಂದ ರಾಕ್ಷಸ ವಿರೋಚನ ಕದ್ದಿದ್ದ ನಾರಾಯಣನ ಕಿರೀಟವನ್ನು ಗರುಡ ರಾಕ್ಷಸನೊಂದಿಗೆ ಹೋರಾಡಿ ಮರಳಿ ತಂದು ಚೆಲುವರಾಯನಿಗೆ ಅರ್ಪಿಸಿದನೆಂಬುದು ಜನವಲಯದಲ್ಲಿರುವ ನಂಬಿಕೆಯಾಗಿದೆ.

ವೈರಮುಡಿ ಕುರಿತಂತೆ ಪುರಾಣ ಕಥೆ ಹೇಳುವುದೇನು?
ಚೆಲುವರಾಯಸ್ವಾಮಿಗೆ ಧರಿಸುವ ಸಂದರ್ಭ ನಡೆಯುವ ಉತ್ಸವವೇ ವೈರಮುಡಿ ಬ್ರಹ್ಮೋತ್ಸವವಾಗಿದೆ. ಇದು ಹೇಗೆ ಆಚರಣೆಗೆ ಬಂತೆಂಬುವುದರ ಬಗ್ಗೆ ಪುರಾಣದ ಕಥೆಯೊಂದು ಪ್ರಚಲಿತದಲ್ಲಿದೆ. ತ್ರೇತಾಯುಗದಲ್ಲಿ ಅಯೋಧ್ಯೆಯಲ್ಲಿ ದಶರಥ ಮಹಾರಾಜ ತನ್ನ ಮಾನಸ ಪುತ್ರ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಿದ್ದರು. ಪಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನವನ್ನು ಗೊತ್ತು ಮಾಡಿ ಅರಮನೆಯಲ್ಲಿ ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿದ್ದನು.
ಇನ್ನೇನು ಪಟ್ಟಾಭಿಷೇಕ ನಡೆಯಬೇಕೆನ್ನುವಷ್ಟರಲ್ಲಿ ಕೈಕೇಯಿಯ ಕುತಂತ್ರದಿಂದಾಗಿ ಶ್ರೀರಾಮ ವನವಾಸಕ್ಕೆ ತೆರಳಬೇಕಾಯಿತು. ಆದರೆ ತನ್ನ ಅಣ್ಣ ಶ್ರೀರಾಮನ ಪಟ್ಟಾಭಿಷೇಕವನ್ನು ಕಣ್ಣಾರೆ ನೋಡಬೇಕೆನ್ನುವ ಬಯಕೆಯಲ್ಲಿದ್ದ ಸೋದರ ಲಕ್ಷ್ಮಣನಿಗೆ ತನ್ನ ಆಸೆ ಈಡೇರಲಿಲ್ಲವಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತಂತೆ.

ಮುಂದೆ ಲಕ್ಷ್ಮಣ ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಆದಿಶೇಷನ ಅವತಾರ ತಾಳಿ ಆ ನಂತರ ಕಲಿಯುಗದಲ್ಲಿ ರಾಮಾನುಜರಾಗಿ ಜನಿಸಿ, ಶ್ರೀರಾಮನ ಆರಾಧ್ಯದೈವ ಚೆಲುವರಾಯಸ್ವಾಮಿ ನೆಲೆಸಿದ ಮೇಲುಕೋಟೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕೆ ನಿಗದಿಪಡಿಸಿದ ಫಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನದಂದೇ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಧರಿಸುವ ಮೂಲಕ ತನ್ನ ಮನದ ಇಚ್ಛೆಯನ್ನು ನೆರವೇರಿಸಿಕೊಂಡನಂತೆ ಈ ಸುದಿನವನ್ನು ಪ್ರತಿವರ್ಷವೂ ವೈರಮುಡಿ ಬ್ರಹ್ಮೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ವೈರಮುಡಿ ಜೊತೆಗೆ ರಾಜಮುಡಿ ಕಿರೀಟ ಧಾರಣೆ: ಏನಿದರ ವಿಶೇಷ?
ಇನ್ನೊಂದೆಡೆ ಮೈಸೂರು ರಾಜರ ಆಡಳಿತದಲ್ಲಿ ವೈರಮುಡಿ ಕಿರೀಟ ರಾಜಾಶ್ರಯದಲ್ಲಿತ್ತಾದರೂ ಬಳಿಕ ಸರ್ಕಾರದ ವಶಕ್ಕೆ ಹಸ್ತಾಂತರಿಸಲಾಯಿತು. ಈಗ ಮಂಡ್ಯದ ಸರ್ಕಾರಿ ಖಜಾನೆಯಲ್ಲಿದ್ದು, ಉತ್ಸವದ ಸಂದರ್ಭ ವೈರಮುಡಿ, ರಾಜಮುಡಿ ಕಿರೀಟವನ್ನು ಬಿಗಿ ಭದ್ರತೆಯಲ್ಲಿ ಮೇಲುಕೋಟೆಗೆ ತರಲಾಗುತ್ತದೆ. ಅಲ್ಲದೇ ಬಳಿಕ ದ್ವಾರದ ಹನುಮಂತನ ಗುಡಿಯ ಬಳಿಯಿಂದ ಬೆಳ್ಳಿ ಪಲ್ಲಕಿಯಲ್ಲಿರಿಸಿ ಪೂಜಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ವೈರಮುಡಿ ಬ್ರಹ್ಮೋತ್ಸವ ಸಂದರ್ಭ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಮಾತ್ರವಲ್ಲದೇ, ಮೈಸೂರು ಅರಸರಾದ ರಾಜ ಒಡೆಯರ್ ಅರ್ಪಿಸಿದ ರಾಜಮುಡಿಯಲ್ಲದೆ, ಗಂಡಭೇರುಂಡ ಪದಕ, ಶಂಖ, ಚಕ್ರ, ಗಧೆ, ಪದ್ಮಪೀಠ, ಕರ್ಣಕುಂಡಲ ಸೇರಿದಂತೆ 14 ಆಭರಣಗಳನ್ನು ಧರಿಸಲಾಗುತ್ತದೆ.
ಹತ್ತು ದಿನಗಳ ಉತ್ಸವದಲ್ಲಿ ಪ್ರತಿದಿನವೂ ವಿವಿಧ ಕೈಂಕರ್ಯಗಳೊಂದಿಗೆ ಉತ್ಸವ ನಡೆಯುತ್ತದೆ. ಅದರಲ್ಲೂ ನಾಲ್ಕನೆಯ ದಿನವು ಬಹಳ ಪ್ರಮುಖ ದಿನವಾಗಿದ್ದು ಅಂದು ರಾತ್ರಿ ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢನಾದ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಹಾಗೂ ಬ್ರಾಹ್ಮಿ ಮುಹೂರ್ತದಲ್ಲಿ ರಾಜಮುಡಿ ಕಿರೀಟವನ್ನು ಧಾರಣೆ ಮಾಡಲಾಗುತ್ತದೆ ಇದುವೇ ವೈರಮುಡಿ ಬ್ರಹ್ಮೋತ್ಸವವಾಗಿದೆ.
ಇನ್ನು ಮೇಲುಕೋಟೆಯು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿಗೆ ಸೇರಿದ್ದು ಮಂಡ್ಯದಿಂದ 28ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು ಮೂರು ಸಾವಿರ ಅಡಿಯಷ್ಟು ಎತ್ತರದಲ್ಲಿದೆ. ಹತ್ತಾರು ದೇಗುಲ, ಕಲ್ಯಾಣಿಗಳಿಂದ ಕೂಡಿರುವ ಈ ಕ್ಷೇತ್ರ ಪರಮ ಪಾವಿತ್ರ್ಯದ ಕ್ಷೇತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ.
ವೈರಮುಡಿ ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ಭಕ್ತರಿಗೆ ಸಕಲ ವ್ಯವಸ್ಥೆ
ವೈರಮುಡಿ ಬ್ರಹ್ಮೋತ್ಸವಕ್ಕೆ ಸಾವಿರಾರು ಭಕ್ತರು ದೂರದ ಊರುಗಳಿಂದ ಆಗಮಿಸುತ್ತಾರೆ. ಈ ಹಿನ್ನಲೆಯಲ್ಲಿ ಭಕ್ತರಿಗಾಗಿ ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ಅಗತ್ಯತೆಗೆ ತಕ್ಕಂತೆ ವ್ಯವಸ್ಥೆ ಮಾಡಲಾಗಿದೆ. ಬಿಸಿಲು ಹೆಚ್ಚಿರುವುದರಿಂದ ಟ್ಯಾಂಕರ್ ಖಾಲಿಯಾದ ನಂತರ ಮರುಪೂರ್ಣವಾಗುವ ರೀತಿ ನೋಡಿಕೊಳ್ಳಲಾಗುತ್ತಿದೆ. ಶೌಚಾಲಯ, ವಾಹನ ನಿಲುಗಡೆ, ವಯಸ್ಸಾದವರು ಹಾಗೂ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ ಕೂಡ ಜಿಲ್ಲಾಡಳಿತ ಮಾಡಿದೆ.
ಇನ್ನು ರಾಜಮುಡಿ ಹಾಗೂ ವೈರಮುಡಿಯನ್ನು ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ತೆಗೆದುಕೊಂಡು ಹೋಗುವಾಗ ಮಾರ್ಗದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲಾ ಖಜಾನೆಯಿಂದ, ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಸ್ಥಾನ, ಇಂಡುವಾಳು, ತೂಬಿನಕೆರೆ, ಗಣಂಗೂರು, ಶೆಟ್ಟಿಹಳ್ಳಿ, ಕಿರಂಗೂರು ಬನ್ನಿಮಂಟಪ, ಕೂಡಲಕುಪ್ಪೆ ಗೇಟ್, ದರಸಗುಕುಪ್ಪೆ, ಪಾಂಡವಪುರ ರೈಲ್ವೆ ನಿಲ್ದಾಣ, ಕೆನ್ನಾಳು, ಪಾಂಡವಪುರ, ಹಿರೇಮರಳಿ ಗೇಟ್, ಬಣಘಟ್ಟ, ಟಿ.ಎಸ್.ಛತ್ರ, ಮಹದೇಶ್ವರ ಪುರ, ಬೆಳ್ಳಾಳೆ, ಜಕ್ಕನಹಳ್ಳಿ, ತಗಲ ಕೆರೆ ಮಾರ್ಗವಾಗಿ ಬಂದು ಮೇಲುಕೋಟೆ ತಲುಪಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಮೇಲುಕೋಟೆ ಚೆಲುವರಾಯಸ್ವಾಮಿಗೆ ವೈರಮುಡಿ ಧಾರಣೆಯಾಗಲಿದೆ.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ












Click it and Unblock the Notifications