ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ: ಶಿವರಾಮೇಗೌಡ
Recommended Video

ಮಂಡ್ಯ, ಏಪ್ರಿಲ್ 1: ಈ ಹಿಂದೆ ಸುಮಲತಾ ಗೌಡ್ತಿಯಲ್ಲ ಎಂಬ ಹೇಳಿಕೆ ವಿಚಾರವಾಗಿ ಮಾತಿನ ಪ್ರಹಾರ ನಡೆದ ಬೆನ್ನಲ್ಲೇ ಮತ್ತೆ ಅದೇ ಗೌಡ್ತಿ ಹೆಸರಿನಲ್ಲಿ ವಾಗ್ಬಾಣಗಳು ಹೊರಬರುತ್ತಿವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಹೌದು, ನಿನ್ನೆ ( ಭಾನುವಾರ ) ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ. ಅವರು ನಾಯ್ಡು ಆಗಿದ್ದಾರೆಯೇ ಹೊರತು ಮಂಡ್ಯ ಗೌಡ್ತಿಯಲ್ಲ ಎಂದು ಮತ್ತೊಂದು ಹೊಸ ವಿವಾದಕ್ಕೆ ಸಂಸದ ಶಿವರಾಮೇಗೌಡ ನಾಂದಿ ಹಾಡಿದ್ದಾರೆ.
ಮಂಡ್ಯದ ನಾಗಮಂಗಲ ಪಟ್ಟಣದ ಮಲ್ಲೇನಹಳ್ಳಿ ಸಮೀಪ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸುಮಲತಾ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವಿಲ್ಲ. ಅವರು ನಾಯ್ಡು ಆಗಿದ್ದಾರೆಯೇ ಹೊರತು ಮಂಡ್ಯ ಗೌಡ್ತಿಯಲ್ಲ. ನಾಯ್ಡು ಜನಾಂಗದವರು ಮಂಡ್ಯವನ್ನು ಮರುಳು ಮಾಡುತ್ತಿದ್ದಾರೆ. ಸುಮಲತಾ ಗೌಡರಾ, ಒಕ್ಕಲಿಗರಾ ಎಂಬುದು ತೀರ್ಮಾನ ಆಗಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಂಬರೀಷ್ ಅವರನ್ನು ಮದುವೆ ಆದ ಮೇಲೆ ಗೌಡರೇ ಎಂದುಕೊಳ್ಳೋಣ. ಆದರೆ, ಅಂಬಿಗೆ ಮತ ಹಾಕಿದವರಿಗೆ ಸಹಾಯ ಮಾಡಿದ್ದಾರಾ? ಮಂಡ್ಯಕ್ಕೆ ಬಂದು ಮತ ಹಾಕಿದ್ದಾರಾ? ಕುಮಾರಸ್ವಾಮಿ ಮಂಡ್ಯಕ್ಕೆ ಅಂಬರೀಶ್ ಪಾರ್ಥೀವ ಶರೀರ ತಂದಾಗ ಅಂತಿಮ ದರ್ಶನ ಪಡೆಯಲು ಬಂದ ಜನಸಾಗರ ನೋಡಿ ಇವತ್ತು ಚುನಾವಣೆಗೆ ಬಂದಿದ್ದೀರಾ ಎಂದು ಶಿವರಾಮೇಗೌಡ ಪ್ರಶ್ನಿಸಿದ್ದಾರೆ.
ಸುರೇಶ್ ಗೌಡ ಕರೆ ತಂದ ರಮ್ಯರನ್ನ ಓಡಿಸಿದ್ದೇನೆ. ಅಂಬರೀಷ್ ಅನ್ನು ಕರೆತಂದವನು ನಾನೇ, ಅವರನ್ನ ಸೋಲಿಸಿದವನು ನಾನೇ. ನಾನು ನಾಗಮಂಗಲದ ಗಂಡು. ಮಗ ಅಭಿಷೇಕ್ ಕಣ್ಣೇ ಬಿಟ್ಟಿರಲಿಲ್ಲ. ಆದರೆ ಈಗ ನಾನು ನಮ್ಮಪ್ಪನ ಹಾಗೆ ಅಂತಾನೆ. ಏನು ಸಿನಿಮಾದವರು ಜನಕ್ಕೆ ಪುಕ್ಸಟ್ಟೆ ಸಿನಿಮಾ ತೋರಿಸುತ್ತಾರಾ? ದುಡ್ಡು ಕೊಟ್ಟೆ ಅಲ್ವಾ ನಾವೆಲ್ಲ ಸಿನಿಮಾ ನೋಡೋದು. ದಯವಿಟ್ಟು ಸಿನಿಮಾದವರನ್ನು ಸಿನಿಮಾಕಷ್ಟೇ ಸೀಮಿತಗೊಳಿಸೋಣ. ರಾಜಕೀಯಕ್ಕೆ ಬೇಡ ಎಂದು ಶಿವರಾಮೇಗೌಡ ಕಿಡಿಕಾರಿದರು.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಸುಮಲತಾ ಅವರು, ಈ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಒಂದು ಹಂತದವರೆಗೆ ನಾನು ಪ್ರತಿಕ್ರಿಯೆ ನೀಡುತ್ತೇನೆ. ಇದಕ್ಕೆಲ್ಲಾ ಮಂಡ್ಯ ಜನರು ಉತ್ತರ ನೀಡುತ್ತಾರೆ ಎಂದು ತಿಳಿಸಿದರು.











Click it and Unblock the Notifications