ಮಂಡ್ಯದಲ್ಲಿ ಕಬ್ಬು ಕಟಾವು ಚಾಲೆಂಜ್: ಇಲ್ಲಿದೆ ಸ್ಪರ್ಧೆಯ ಸಂಪೂರ್ಣ ವಿವರ
ಮಂಡ್ಯ, ಸೆಪ್ಟೆಂಬರ್ 02: ಮಂಡ್ಯದಲ್ಲಿ ಕಬ್ಬು ಕಟಾವು ಸಮಸ್ಯೆ ವರ್ಷದಿಂದ ವರ್ಷಕ್ಕೆ ಉಲ್ಬಣಿಸುತ್ತಿದ್ದು, ಕಬ್ಬು ಬೆಳೆಗಾರರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಕಬ್ಬು ಕಟಾವು ಸಮಸ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಪರಿಹರಿಸಲು ಮಂಡ್ಯ ಜಿಲ್ಲಾಡಳಿತ ಮಾಸ್ಟರ್ ಫ್ಲ್ಯಾನ್‌ವೊಂದನ್ನು ಮಾಡಿದ್ದಾರೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ 2024 ಕಾರ್ಯಕ್ರಮದ ಹೆಸರಿನಲ್ಲಿ ಮಂಡ್ಯದಲ್ಲಿ ಕಬ್ಬು ಕಟಾವು ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಈ ವಿಶಿಷ್ಟ ಕಾರ್ಯಕ್ರಮದ ಮೂಲಕ ಬೆಳೆದು ನಿಂತ ಕಬ್ಬು ಕಟಾವು ಮಾಡಿಸಲು ಜಿಲ್ಲಾಡಳಿತದಿಂದ ಯೋಜನೆ ರೂಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕಬ್ಬು ಕಟಾವು ಮಾಡುವ ತಂಡಕ್ಕೆ ಬಹುಮಾನದ ಜೊತೆಗೆ ಕಟಾವಿನ ಕೂಲಿ ಸಹ ಸಿಗಲಿದೆ.

ಬೆಳೆದು ನಿಂತ ಕಬ್ಬು ಕಟಾವು ಮಾಡಿಸಲು ಕಾರ್ಮಿಕರು ಸಿಗದೆ ಪರದಾಡುತ್ತಿರುವ ಮೈಶುಗರ್ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಈ ಸಮಸ್ಯೆ ನಿವಾರಣೆಗೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಬ್ಬು ಕಟಾವು ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದ, ಕಬ್ಬು ಕಟಾವು ಚಾಲೆಂಜ್, ಬಾ ಗುರು ಕಬ್ಬು ಕಡಿ ಹೆಸರಿನ ಪೋಸ್ಟರ್ ವೈರಲ್ ಆಗುತ್ತಿದೆ.
ಕಬ್ಬು ಕಡಿಯಿರಿ ಬಹುಮಾನ ಗೆಲ್ಲಿರಿ ಎಂದಿರುವ ಮಂಡ್ಯ ಜಿಲ್ಲಾಡಳಿತ, ದಿನಾಂಕ ಮತ್ತು ಸ್ಥಳ ಶೀಘ್ರದಲ್ಲೇ ನಿಗದಿ ಪಡಿಸಲಾಗುವುದು ಎಂದು ತಿಳಿಸಿದೆ. ಅಲ್ಲದೇ ಕೆಳಗಿನ ಸೂಚನೆಗಳನ್ನು ನೀಡಿದೆ.

ಕಬ್ಬು ಕಟಾವು ಚಾಲೆಂಜ್ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಸೂಚನೆ
* ಒಂದು ತಂಡದಲ್ಲಿ ಕಡ್ಡಾಯವಾಗಿ 10 (ಪುರುಷ / ಮಹಿಳೆ) ಮಂದಿ ಇರತಕ್ಕದ್ದು.
* ಮಂಡ್ಯ ಜಿಲ್ಲೆಯ ನಿವಾಸಿಗಳಿಗೆ ಮಾತ್ರ ಅವಕಾಶ.
* ಬೆಳಿಗ್ಗೆ 7.00 ರಿಂದ 11.00 ರವರೆಗೆ 4 ಗಂಟೆಗಳ ಸ್ಪರ್ಧೆ ನಡೆಯಲಿದೆ.
* ಕಟಾವು ಮಾಡಿದ ಕಬ್ಬನ್ನು ಕಂತೆ ಕಟ್ಟುವುದು ಕಡ್ಡಾಯ.
*18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅವಕಾಶ.
* ಉಚಿತ ಪ್ರವೇಶ (ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ).
* ಬಹುಮಾನದ ಜೊತೆಗೆ ಕಟಾವು ಮಾಡಿದ ಪ್ರತಿ ಟನ್ ಕಬ್ಬಿಗೆ ಕಾರ್ಖಾನೆ ನಿಗದಿ ಪಡಿಸಿದ ಕಟಾವು ವೆಚ್ಚ (ಕೂಲಿ) ಯನ್ನು ಕೂಡ ನೀಡಲಾಗುತ್ತದೆ.
* ಜಮೀನಿನ ರೈತರಿಗೆ ನಷ್ಟವಾಗದಂತೆ. ಶಿಸ್ತು ಬದ್ಧವಾಗಿ ಕಟಾವು ಮಾಡಿ ಸಂಪೂರ್ಣವಾಗಿ ಕಬ್ಬಿನಿಂದ ತರಗನ್ನು ಬೇರ್ಪಡಿಸಬೇಕು.
ಕಬ್ಬು ಕಟಾವು ಚಾಲೆಂಜ್ ಸ್ಪರ್ಧೆಯ ಬಹುಮಾನದ ವಿವರ ಈ ಕೆಳಗಿನಂತಿದೆ
ಪ್ರಥಮ ಬಹುಮಾನ- 20,000/-
ದ್ವಿತೀಯ ಬಹುಮಾನ-15,000/-
ತೃತೀಯ ಬಹುಮಾನ- 10,000/-
4ನೇ ಬಹುಮಾನ- 5,000/-
5, 6, 7, 8ನೇ ಸ್ಥಾನದ ತಂಡಗಳಿಗೆ ತಲಾ-2,000/- ಭಾಗವಹಿಸಿದ ಪ್ರತಿ ತಂಡಗಳಿಗೂ ಪ್ರಮಾಣಪತ್ರ ನೀಡಲಾಗುವುದು ಎಂದು ತಿಳಿಸಿದೆ.












Click it and Unblock the Notifications