ಮೂರು ನದಿಗಳ ಸಂಗಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೊರತೆ: ಪ್ರಸಿದ್ಧ ಸ್ಥಳದಲ್ಲಿಲ್ಲ ಕನಿಷ್ಠ ಸೌಲಭ್ಯ
ಮಂಡ್ಯ, ಆಗಸ್ಟ್ 16: ಬಾಲಕ ಮಲೈಮಹದೇಶ್ವರ ಸ್ವಾಮಿ ಪವಾಡ ಮಾಡಿದ ಕ್ಷೇತ್ರ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಗೆ ಮತ್ತು ಮೈಸೂರು ಜಿಲ್ಲೆಯ ಕೆ.ಆರ್.ನಗರಕ್ಕೆ ಸಮೀಪವಿರುವ ಹೇಮಾವತಿ, ಕಾವೇರಿ ಮತ್ತು ಲಕ್ಷ್ಮಣತೀರ್ಥ ಸಂಗಮ ಕ್ಷೇತ್ರವು ಆಸ್ತಿಕರು ಹಾಗೂ ನಾಸ್ತಿಕರನ್ನು ಸೆಳೆಯುವ ಸುಂದರ ತಾಣವಾಗಿದೆಯಾದರೂ ಅಭಿವೃದ್ಧಿ ಕೊರತೆಯಿಂದ ನಲುಗುತ್ತಿದೆ.
ಅಪಾರ ಜಲರಾಶಿಯ ಸುಂದರ ಪ್ರದೇಶವಾಗಿರುವ ಈ ತಾಣಕ್ಕೆ ಭೇಟಿ ನೀಡುವ ಪ್ರತಿಯೊಬ್ಬರನ್ನು ಇಲ್ಲಿನ ಪ್ರಕೃತಿ ಸೌಂದರ್ಯ ತಮ್ಮತ್ತ ಸೆಳೆಯುತ್ತದೆ. ಇಲ್ಲಿಗೆ ನಿಸರ್ಗ ಚೆಲುವನ್ನು ಸವಿಯಲು ಮತ್ತು ಮಹದೇಶ್ವರ ಸ್ವಾಮಿಯನ್ನು ದರ್ಶನ ಮಾಡಲು ಹೀಗೆ ಎರಡು ಬಗೆಯ ಜನರು ಬರುತ್ತಿರುತ್ತಾರೆ.

ಈ ಕ್ಷೇತ್ರದಲ್ಲಿ ಭಕ್ತರನ್ನು ಮತ್ತು ಪ್ರವಾಸಿಗರನ್ನು ಸೆಳೆಯಲು ಏನೆಲ್ಲ ಬೇಕೋ ಅದೆಲ್ಲವೂ ಇಲ್ಲಿದೆ. ಆದರೆ ಅಭಿವೃದ್ಧಿಯಿಂದ ವಂಚಿತವಾಗಿರುವ ಕಾರಣದಿಂದ ಅತ್ತ ದೈವಿಕ ಕ್ಷೇತ್ರವೂ ಆಗದೆ ಇತ್ತ ಪ್ರವಾಸಿ ತಾಣವೂ ಆಗದೆ ಉಳಿದು ಹೋಗಿದೆ. ಬಹುಶಃ ಇದುವರೆಗೆ ಆಡಳಿತ ನಡೆಸಿರುವ ಸರ್ಕಾರಗಳು ಇತ್ತ ಗಮನಹರಿಸಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದರೆ ಇವತ್ತು ಮಂಡ್ಯ ಮತ್ತು ಮೈಸೂರಿಗೆ ಹತ್ತಿರವಿರುವ ಪ್ರವಾಸಿ ತಾಣವಾಗಿ ಸಾವಿರಾರು ಜನರನ್ನು ಸೆಳೆಯುತ್ತಿತ್ತೇನೋ?
ಮಲೈಮಹದೇಶ್ವರರು ಮಾಡಿದ ಪವಾಡವೇನು?
ಇವತ್ತು ಈ ಸಂಗಮ ಕ್ಷೇತ್ರಕ್ಕೆ ಹೋದವರು ಬರೀ ಸಮಸ್ಯೆಗಳ ದೊಡ್ಡಪಟ್ಟಿಯನ್ನೇ ಮುಂದಿಡುತ್ತಾರೆ. ಎಲ್ಲ ಸಂಗಮ ಕ್ಷೇತ್ರಗಳಂತೆ ಈ ಸಂಗಮ ಕ್ಷೇತ್ರವೂ ಇತ್ತು. ಆದರೆ ಇಲ್ಲಿ ಮಹಾಕುಂಭಮೇಳ ನಡೆಸಿದ ಬಳಿಕ ಕ್ಷೇತ್ರ ಜನಮನಸೆಳೆಯಿತು. ಈ ಕ್ಷೇತ್ರ ಕೇವಲ ಮೂರು ನದಿಗಳ ಸಂಗಮ ಕ್ಷೇತ್ರವಾಗಿಯಷ್ಟೆ ಉಳಿದಿಲ್ಲ. ಇದು ಮಲೈಮಹದೇಶ್ವರ ಸ್ವಾಮಿ ಪವಾಡ ಮಾಡಿದ ಕ್ಷೇತ್ರವೂ ಹೌದು. ಹೀಗಾಗಿಯೇ ಇಲ್ಲಿಗೆ ಹೆಚ್ಚಿನ ಭಕ್ತರು ಬರುತ್ತಾರೆ.
ಇನ್ನು ಮಲೈಮಹದೇಶ್ವರರು ಏನು ಪವಾಡ ಮಾಡಿದ್ದರು ಎಂಬುದನ್ನು ನೋಡಿದ್ದೇ ಆದರೆ ಉತ್ತರದಿಂದ ಬಂದಿದ್ದ ಬಾಲಕ ಮಹದೇಶ್ವರರು ಸಂಗಮ ಕ್ಷೇತ್ರದ ಮಾರ್ಗವಾಗಿ ಕಪ್ಪಡಿ ಕ್ಷೇತ್ರಕ್ಕೆ ಹೋಗಲು ಅಡ್ಡವಾಗಿದ್ದ ನದಿಯನ್ನು ತಮ್ಮ ತೆಪ್ಪದಲ್ಲಿ ದಾಟಿಸುವಂತೆ ಕೋರಿಕೊಂಡಾಗ ಬಾಲಕನನ್ನು ನದಿ ದಾಟಿಸಲು ಸಹಕರಿಸದ ಅಂಬಿಗರ ವಿರುದ್ಧ ಕೋಪಗೊಂಡ ಬಾಲಕ ಮಹದೇಶ್ವರರು ತಾವು ಹೊದ್ದಿದ್ದ ಕೆಂಪುವಸ್ತ್ರವನ್ನೇ ನೀರಿನ ಮೇಲೆ ಹಾಸಿ ತೆಪ್ಪವನ್ನಾಗಿ ಮಾಡಿಕೊಂಡು ನದಿಯನ್ನು ದಾಟಿ ಕಪ್ಪಡಿ ಕ್ಷೇತ್ರ, ಭೀಮನಕೊಲ್ಲಿಯ ಮೂಲಕ ಮಹದೇಶ್ವರ ಬೆಟ್ಟಕ್ಕೆ ಹೋದರೆಂದು ಹೇಳಲಾಗುತ್ತಿದೆ.

ಕ್ಷೇತ್ರದಲ್ಲಿ ಎದ್ದು ಕಾಣುವ ಕೊರತೆಗಳು
ಮಹದೇಶ್ವರರು ಇಲ್ಲಿ ಪವಾಡ ಮಾಡಿದ್ದರು ಎನ್ನುವುದೇ ಇವತ್ತಿಗೂ ಈ ಕ್ಷೇತ್ರ ದೈವಿಕ ತಾಣವಾಗಿ ಉಳಿಯಲು ಮತ್ತು ಭಕ್ತರು ಕೂಡ ಇಲ್ಲಿಗೆ ಬರಲು ಕಾರಣವಾಗಿದೆ. ಆದರೆ ಇಲ್ಲಿಗೆ ಬರುವ ಭಕ್ತರ ಪೈಕಿ ಶ್ರೀಮಂತರು, ಬಡವರು ಹೀಗೆ ಎಲ್ಲರೂ ಇರುತ್ತಾರೆ. ಆದರೆ ಇಲ್ಲಿಗೆ ಬರುವವರಿಗೆ ಬಸ್ಸಿನ ವ್ಯವಸ್ಥೆ ಇಲ್ಲ ಎನ್ನುವುದು ಒಂದು ಕಡೆಯಾದರೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಸಂಗಮದಲ್ಲಿ ಪೂಜಾ ಕೈಂಕರ್ಯ, ಸ್ನಾನ ಮಾಡಿದ ಬಳಿಕ ಬಟ್ಟೆ ಬದಲಾಯಿಸಲು ಕೊಠಡಿಯ ವ್ಯವಸ್ಥೆಗಳಿಲ್ಲದಿರುವುದು ಬೇಸರದ ಸಂಗತಿಯಾಗಿದೆ.
ಇನ್ನು ಈ ಕ್ಷೇತ್ರದತ್ತ ಸರ್ಕಾರದ ನಿರ್ಲಕ್ಷಕ್ಕೆ ಸಾಕ್ಷಿ ಎಂಬಂತೆ ಇಲ್ಲಿ ಮುರಿದು ಬಿದ್ದಿರುವ ರಥಗಳು, ಭಗ್ನಗೊಂಡಿರುವ ಶಿಲಾಮೂರ್ತಿಗಳು, ಬೆಳೆದು ಗಿಡಗಂಟಿಗಳು ಬೆಳೆದು ನಿಂತಿವೆ. ಮಹಾಕುಂಭಮೇಳದ ಸಂದರ್ಭದಲ್ಲಿ ನಡೆದ ಅಭಿವೃದ್ಧಿ ಕೆಲಸಗಳು ಪೂರ್ಣಗೊಂಡಿಲ್ಲ. ಇನ್ನು ಪ್ರವಾಸಕ್ಕೆಂದು, ಮೋಜು ಮಸ್ತಿಗೆಂದು ಬರುವವರ ಸಂಖ್ಯೆಗೇನು ಕೊರತೆಯಿಲ್ಲ. ಆದರೆ ಹೀಗೆ ಬರುವವರು ನೀರಿನಲ್ಲಿ ಆಟವಾಡಲು ಮುಂದಾಗುತ್ತಾರೆ. ಅಂತಹವರನ್ನು ಎಚ್ಚರಿಸುವ ಸೂಚನಾ ಫಲಕಗಳು ಕೂಡ ಇಲ್ಲಿ ಇಲ್ಲದಾಗಿದೆ.
ಎರಡು ಬಾರಿ ನಡೆದ ಕುಂಭಮೇಳ
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸಂಗಮಕ್ಷೇತ್ರದಲ್ಲಿ ಬೋಟಿಂಗ್ ಸೌಲಭ್ಯ ಮಾಡಲಾಗಿತ್ತು. ಇಲ್ಲಿಂದ ಪ್ರವಾಸಿಗರನ್ನು ದೋಣಿಯಲ್ಲಿ ಭೂವರಹನಾಥ ದೇವಾಲಯಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಕ್ಷೇತ್ರದಲ್ಲಿರುವ ಯಾತ್ರಿನಿವಾಸ ಕಟ್ಟಡದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಜಲಸಾಹಸ ಕ್ರೀಡಾ ಕೇಂದ್ರವನ್ನು ತೆರೆದು ಚಟುವಟಿಕೆ ಆರಂಭಿಸಲಾಗಿತ್ತು. ಆದರೆ ಈಗ ಇಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿರುವಂತೆ ಕಾಣಿಸುತ್ತಿಲ್ಲ.

ತ್ರಿವೇಣಿಸಂಗಮ ಕ್ಷೇತ್ರದ ಅಭಿವೃದ್ಧಿ ಹೋರಾಟ ಸಮಿತಿಯ ಸಂಚಾಲಕ ಡಾ.ಅಂಚಿ ಸಣ್ಣಸ್ವಾಮಿಗೌಡ ಅವರು ಹೇಳುವ ಪ್ರಕಾರ 'ತ್ರಿವೇಣಿ ಸಂಗಮದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲಿ ನಡೆದ ಕುಂಭಮೇಳ ಸೇರಿದಂತೆ ಇದುವರೆಗೆ ಎರಡು ಬಾರಿ ಮಹಾಕುಂಭಮೇಳ ನಡೆದಿದೆ'. ಮೊದಲ ಕುಂಭಮೇಳದ ಸವಿನೆನಪಾಗಿ ಕಾವೇರಿ ನದಿಗೆ ಅಡ್ಡಲಾಗಿ 28ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಬೃಹತ್ ಸೇತುವೆ ನಿರ್ಮಾಣವಾಗಿದೆ.
ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗಬೇಕು
ಸಂಗಮ ಕ್ಷೇತ್ರ ಇನ್ನಷ್ಟು ಸಮಗ್ರ ಅಭಿವೃದ್ಧಿಯಾಗಬೇಕಿದೆ. ಸದ್ಯ ಕತ್ತಲಿನಲ್ಲಿದ್ದ ಕ್ಷೇತ್ರಕ್ಕೆ ಬೆಳಕು ಬಂದಿದ್ದು, ಲೋಕಕ್ಕೆ ಪರಿಚಯವಾಗಿದೆ. ಮಹದೇಶ್ವರರು ಪವಾಡ ನಡೆಸಿರುವ ಈ ಮಣ್ಣಿಗೆ ಅಪಾರವಾದ ಶಕ್ತಿಯಿದೆ ಹೀಗಾಗಿ ಕ್ಷೇತ್ರದ ಅಭಿವೃದ್ಧಿ ಇನ್ನಷ್ಟು ಆಗಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತ್ರಿವೇಣಿಸಂಗಮ ಕ್ಷೇತ್ರದ ಅಭಿವೃದ್ಧಿಯ ಜವಾಬ್ಧಾರಿಯನ್ನು ರಾಜ್ಯ ಸರ್ಕಾರವೇ ಹೊತ್ತಿದ್ದು, ಮುಜರಾಯಿ ಇಲಾಖೆಯ ವತಿಯಿಂದ ಇಲ್ಲಿರುವ ಮಹದೇಶ್ವರ ದೇವಾಲಯದಲ್ಲಿ ಪೂಜಾ ಕಾರ್ಯಗಳು ನಡೆಯುತ್ತಿವೆ. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದು ತಾಲೂಕು ಆಡಳಿತದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಮೂಲಕ ಸರ್ಕಾರದ ಗಮನಸೆಳೆಯುವ ಅಗತ್ಯತೆಯಿದೆ.
ಸಂಗಮ ಕ್ಷೇತ್ರಕ್ಕೆ ಹೇಗೆ ತೆರಳಬಹುದು?
ಅಂಬಿಗರಹಳ್ಳಿ ಬಳಿಯ ಸಂಗಮ ಕ್ಷೇತ್ರವು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಿಂದ 30ಕಿ.ಮೀ ಮತ್ತು ಮೈಸೂರು ಜಿಲ್ಲೆಯ ಕೆ.ಆರ್.ನಗರದಿಂದ 20ಕಿ.ಮೀ ದೂರದಲ್ಲಿದೆ. ಕೆ.ಆರ್.ಪೇಟೆಯಿಂದ ಸಂಗಮ ಕ್ಷೇತ್ರಕ್ಕೆ ಬರಲು ಅನುಕೂಲವಾಗುವಂತೆ ವಿಠಲಾಪುರ, ಸೋಮನಹಳ್ಳಿ, ಪುರ, ಅಂಬಿಗರಹಳ್ಳಿ ಹಾಗೂ ಸಂಗಾಪುರ ಮಾರ್ಗವಾಗಿ ಸಂಗಮದವರೆಗೆ ಉತ್ತಮ ರಸ್ತೆಯಿದ್ದು, ಕೆ.ಆರ್.ಪೇಟೆ ಬಸ್ ಡಿಫೋನಿಂದ ತ್ರಿವೇಣಿ ಸಂಗಮಕ್ಕೆ ಓಡಾಡುತ್ತಿದ್ದ ಬಸ್ಸುಗಳು ಪ್ರವಾಸಿಗರ ಕೊರತೆಯಿಂದಾಗಿ ತನ್ನ ಸಂಚಾರವನ್ನು ನಿಲ್ಲಿಸಿವೆ.
ಕೇವಲ ಒಂದೇ ಒಂದು ಬಸ್ಸು ಕೆ.ಆರ್.ಪೇಟೆಯಿಂದ ಸಂಗಮಕ್ಕೆ ಸಂಚರಿಸುತ್ತಿದೆ. ಸ್ವಂತ ವಾಹನವನ್ನು ಹೊಂದಿರುವವರು ಅಥವಾ ಬಾಡಿಗೆ ವಾಹನಗಳಲ್ಲಿ ತೆರಳಬೇಕಾಗುತ್ತದೆ. ಕೆಲವರು ಕೆ.ಆರ್.ಪೇಟೆಯಿಂದ ಸೋಮನಹಳ್ಳಿಯವರೆಗೆ ಬಸ್ಸಿನಲ್ಲಿ ಬಂದು ಅಲ್ಲಿಂದ 5ಕಿ.ಮೀ ದೂರ ನಡೆದುಕೊಂಡು ತ್ರಿವೇಣಿ ಸಂಗಮವನ್ನು ತಲುಪಬಹುದಾಗಿದೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications