ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನಿಶ್ಚಿತ: ಶಿವರಾಮೇಗೌಡ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ನವೆಂಬರ್ 12 : ಜಿಲ್ಲೆಯ ಕೆಲವು ಕುತಂತ್ರಿ ನಾಯಕರು ನನ್ನನ್ನು ಸೋಲಿಸುವ ಉದ್ದೇಶದಿಂದ ನಿಖಿಲ್‌ ಕುಮಾರಸ್ವಾಮಿಯನ್ನು ಬಲಿಕೊಟ್ಟರು ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಗಂಭೀರ ಆರೋಪ ಮಾಡಿದ್ದಾರೆ.

ತಾಲೂಕಿನ ಚಿಣ್ಯ ಗ್ರಾ.ಪಂ.ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಮೂಲಭೂತ ಸೌಕರ್ಯಗಳ ಸಮಸ್ಯೆ ಕುರಿತು ಸ್ಥಳೀಯ ಜನರಿಂದ ಮಾಹಿತಿ ಸಂಗ್ರಹಿಸಿದ ಬಳಿಕ ಚಿಣ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಅವರನ್ನು ಜಿಲ್ಲೆಗೆ ಕರೆತಂದು ಅವರ ಗೌರವ ಕಳೆಯುವ ಜೊತೆಗೆ ಜೆಡಿಎಸ್ ಪಕ್ಷದ ಗೌರವನ್ನೂ ಕಳೆದರು ಎಂದು ಜೆಡಿಎಸ್ ಶಾಸಕರ ವಿರುದ್ಧ ಕಿಡಿಕಾರಿದರು.

ಪ್ರತಿಮೆ ಅನಾವರಣದಿಂದ ಮತ ಸಿಗಲ್ಲ: ಬಿಜೆಪಿ ವಿರುದ್ಧ ಕುಮಾರಸ್ವಾಮಿ ಕಿಡಿಪ್ರತಿಮೆ ಅನಾವರಣದಿಂದ ಮತ ಸಿಗಲ್ಲ: ಬಿಜೆಪಿ ವಿರುದ್ಧ ಕುಮಾರಸ್ವಾಮಿ ಕಿಡಿ

ನನ್ನ ಪರಿಶ್ರಮಕ್ಕೆ ಪ್ರತಿಯಾಗಿ ಜೆಡಿಎಸ್ ಪಕ್ಷದ ವರಿಷ್ಠ ನಾಯಕ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್‌ಕುಮಾರಸ್ವಾಮಿ ಅವರು ಸೇರಿ ನನ್ನನ್ನು ಕೆಲ ತಿಂಗಳಕಾಲ ಲೋಕಸಭಾ ಸದಸ್ಯನನ್ನಾಗಿ ಮಾಡಿದರು. ಆದರೆ ಜಿಲ್ಲೆಯ ಅತ್ಯಂತ ಕೆಳಮಟ್ಟದ ಕೆಲ ಜೆಡಿಎಸ್ ನಾಯಕರು ನನ್ನನ್ನು ಮತ್ತು ಅಪ್ಪಾಜಿಗೌಡರನ್ನು ರಾಜಕೀಯವಾಗಿ ದೂರ ತಳ್ಳಲು ಇಲ್ಲದ ಪಿತೂರಿ ನಡೆಸಿ ಎಂಎಲ್‌ಸಿ ಚುನಾವಣೆಯಲ್ಲಿ ಸೋಲಿಸಿದರು. ಐದು ತಿಂಗಳ ಎಂಪಿ ಚುನಾವಣೆಯಲ್ಲಿ ನನ್ನನ್ನು ಸಾಲಗಾರನನ್ನಾಗಿ ಮಾಡಿದರು. ಇದರಲ್ಲಿ ದೊಡ್ಡಗೌಡರ ಮನೆಯವರ ಯಾವುದೇ ಪಾತ್ರವಿಲ್ಲ ಎಂದು ಹೇಳಿದರು.

ಶಾಸಕರಿಂದ ಕೋಟ್ಯಾಂತರ ರೂ. ಲೂಟಿ

ಶಾಸಕರಿಂದ ಕೋಟ್ಯಾಂತರ ರೂ. ಲೂಟಿ

ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸುವ ನೆಪದಲ್ಲಿ ನಾಗಮಂಗಲ ಶಾಸಕ ಸುರೇಶ್‌ಗೌಡರ ಹಿಂಬಾಲಕ ಗುತ್ತಿಗೆದಾರರು ಆದಿಚುಂಚನಗಿರಿ ಮಠದ ಶ್ರೀಗಳ ಹೆಸರನ್ನು ದುರ್ಬಳಕೆ ಮಾಡಿಕೊಂಡು ನೂರಾರು ಕೋಟಿ ರೂ.ಗಳ ಲೂಟಿ ಹೊಡೆಯುತ್ತಿದ್ದಾರೆಂದು ನೇರವಾಗಿ ಆರೋಪಿಸಿದರು.

ಕ್ಷೇತ್ರದ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಕೋಟ್ಯಂತರ ರೂಪಾಯಿಗಳ ಹಗಲು ದರೋಡೆಗೆ ಶಾಸಕ ಸುರೇಶ್‌ಗೌಡರ ಕೃಪಾಕಟಾಕ್ಷವಿದ್ದು, ಅವರ ಆಪ್ತವಲಯದ ಕೆಲ ಗುತ್ತಿಗೆದಾರರು 20ಲಕ್ಷ ರೂ.ಗಳಲ್ಲಿ ಕಳಪೆ ಗುಣಮಟ್ಟದ ಕಾಮಗಾರಿ ಮುಗಿಸಿ 1ಕೋಟಿ ರೂ.ಗಳ ಬಿಲ್ ಪಡೆದಿದ್ದಾರೆ. ಇದೊಂದು ಸಣ್ಣ ಉದಾಹರಣೆಯಾಗಿದ್ದು, ಇದೇ ರೀತಿ ನೂರಾರು ಕೋಟಿ ರೂ.ಗಳನ್ನು ಲೂಟಿ ಮಾಡಿದ್ದಾರೆ. ಇದಕ್ಕೆ ಅಧಿಕಾರಿಗಳು ಮತ್ತು ಶಾಸಕರು ನೇರ ಶಾಮೀಲಾಗಿದ್ದಾರೆಂದು ದೂರಿದರು.

ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಬಿಜೆಪಿಗೆ ಸಿದ್ಧಿಸಿರುವ ಕಲೆ: ಜೆಡಿಎಸ್‌ತಪ್ಪನ್ನೇ ಲಜ್ಜೆಗೆಟ್ಟು ಸಮರ್ಥಿಸಿಕೊಳ್ಳುವುದು ಬಿಜೆಪಿಗೆ ಸಿದ್ಧಿಸಿರುವ ಕಲೆ: ಜೆಡಿಎಸ್‌

ಹಿಂದೆಂದೂ ಕಾಣದಷ್ಟು ಭ್ರಷ್ಟಾಚಾರ

ಹಿಂದೆಂದೂ ಕಾಣದಷ್ಟು ಭ್ರಷ್ಟಾಚಾರ

ಕ್ಷೇತ್ರದಲ್ಲಿ ನಾನು ಎರಡು ಬಾರಿ ಶಾಸಕನಾಗಿದ್ದೆ. ಚಲುವರಾಯಸ್ವಾಮಿ ಮೂರು ಬಾರಿ ಶಾಸಕರಾಗಿದ್ದರು. ಆದರೆ ಶಾಸಕ ಸುರೇಶ್‌ಗೌಡರ ಕಾಲದಲ್ಲಿ ನಡೆದಿರುವಷ್ಟು ಭ್ರಷ್ಟಾಚಾರ ಹಿಂದೆಂದೂ ನಡೆದಿಲ್ಲ. ಕಾನೂನು ಚೌಕಟ್ಟಿನ ನಿಯಮಾವಳಿಗಳನ್ನು ಗಾಳಿಗೆ ತೂರಿ ಕೆಲಸಗಳನ್ನು ಹಾಕಿಕೊಂಡು ನೂರಾರು ಕೋಟಿ ರೂ.ಗಳ ಲೂಟಿ ಮಾಡುವಲ್ಲಿ ಅಧಿಕಾರಿಗಳು ಮತ್ತು ಶಾಸಕ ಸುರೇಶ್‌ಗೌಡ ನೇರವಾಗಿ ಶಾಮೀಲಾಗಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಶೀಘ್ರದಲ್ಲಿಯೇ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು. ಹಾಗಾಗಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯನಿರ್ವಹಿಸಬೇಕೆಂದು ಎಚ್ಚರಿಕೆ ನೀಡಿದರು.

ಕ್ಷೇತ್ರದಲ್ಲಿ ನಡೆಯುತ್ತಿರುವ ಯಾವುದೇ ಅಭಿವೃದ್ಧಿ ಕಾಮಗಾರಿಗಳುಧನ್ಯತಾ ಇನ್ಫ್ರಾಸ್ಟ್ರಕ್ಚರ್, ಆದ್ವಿತಿ ಇನ್ಫ್ರಾಸ್ಟ್ರಕ್ಚರ್ ಮತ್ತು ಭೂಮರ ಇನ್ಫ್ರಾಸ್ಟ್ರಕ್ಚರ್ ಏಜೆನ್ಸಿ ಮೂಲಕವೇ ನಡೆಯುತ್ತಿವೆ. ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಸಂಬಂಧಿಗೆ ಸೇರಿದ ಭೂಮರ ಇನ್ಫ್ರಾಸ್ಟ್ರಕ್ಚರ್‌ನ ಮೈಸೂರಿನಲ್ಲಿರುವ ಕಚೇರಿಯಲ್ಲಿ ಶಾಸಕ ಸುರೇಶ್‌ಗೌಡಗೆ ಏನು ಕೆಲಸವಿರುತ್ತದೆ. ತಾಲೂಕಿನ ಸಿ.ಜೆ.ಕುಮಾರ್ ಎಂಬ ಸರ್ಕಾರಿ ಶಾಲೆಯ ಶಿಕ್ಷಕನನ್ನು ಅಲ್ಲಿಗೆ ಕರೆಸಿಕೊಂಡು ಮಾತನಾಡುವ ಅನಿವಾರ್ಯತೆ ಏನಿದೆ. ಯಾವ ಕೆಲಸದ ಮೇಲೆ ತಿಂಗಳಿಗೆ ಐದಾರು ಬಾರಿ ಭೇಟಿ ಕೊಡುತ್ತಾರೆ. ಇನ್ನುಳಿದ ಎರಡು ಗುತ್ತಿಗೆ ಏಜೆನ್ಸಿಗಳಿಗೆ ಮಾಲಿಕರು ಯಾರು? ಎಷ್ಟು ಕೋಟಿ ರೂ.ಗಳ ಕಾಮಗಾರಿ ನಡೆದಿವೆ ಎಂಬುದರ ಸಂಪೂರ್ಣ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಸುರೇಶ್‌ಗೌಡ 50 ಪರ್ಸೆಂಟ್ ತೆಗೋತಿದ್ದಾರೆ

ಸುರೇಶ್‌ಗೌಡ 50 ಪರ್ಸೆಂಟ್ ತೆಗೋತಿದ್ದಾರೆ

ರಾಜ್ಯದಲ್ಲಿ 40 ಪರ್ಸೆಂಟ್ ಸರ್ಕಾರವಿದ್ದರೆ ತಾಲೂಕಿನಲ್ಲಿ ಶಾಸಕ ಸುರೇಶ್‌ಗೌಡ ಇದಕ್ಕೆ 10 ಪರ್ಸೆಂಟ್ ಹೆಚ್ಚಿಸಿಕೊಂಡು 50 ಪರ್ಸೆಂಟ್ ಆಡಳಿತ ನಡೆಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸರ್ಕಾರಕ್ಕೆ ಹಣ ಕೊಟ್ಟು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸುತ್ತಿದ್ದೇನೆ. ಅದಕ್ಕಾಗಿ ನಾನೂ ಸಹ ಹಣ ಪಡೆಯುತ್ತಿದ್ದೇನೆಂದು ಸ್ವತಃ ಶಾಸಕ ಸುರೇಶ್‌ಗೌಡರೇ ಮಾತನಾಡಿರುವ ಕೆಲ ವೀಡಿಯೋ ಸಂಭಾಷಣೆ ನನ್ನ ಬಳಿ ಇವೆ. ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ಭ್ರಷ್ಟಾಚಾರ ನಡೆಸಿಲ್ಲವೆಂದು ಶಾಸಕ ಸುರೇಶ್‌ಗೌಡ ಸೋಮನಳ್ಳಿ ಅಮ್ಮನ ದೇವಸ್ಥಾನಕ್ಕೆ ಬಂದು ಆಣೆಪ್ರಮಾಣ ಮಾಡಲಿ. ಶಾಸಕರ ಭ್ರಷ್ಟಾಚಾರವನ್ನು ಸಾಬೀತುಪಡಿಸಲು ನಾನು ಸಿದ್ದನಿದ್ದೇನೆ ಎಂದು ನೇರ ಸವಾಲು ಹಾಕಿದರು.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

ನಾನು ಈಗಾಗಲೇ ಕ್ಷೇತ್ರದಾದ್ಯಂತ ಪ್ರವಾಸ ಕೈಗೊಂಡು ಬೆಂಬಲಿಗರು ಕಾರ್ಯಕರ್ತರನ್ನು ಸಂಘಟಿಸುವ ಜೊತೆಗೆ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳ ಕುರಿತು ಸ್ಥಳೀಯ ಜನರಿಂದಲೇ ಮಾಹಿತಿ ಪಡೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ನನ್ನ ವಿರೋಧಿಗಳು ಶಿವರಾಮೇಗೌಡ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಅಂತಿಮ ಕ್ಷಣದಲ್ಲಿ ಹಿಂದೆ ಸರಿಯುತ್ತಾರೆಂಬ ಇಲ್ಲಸಲ್ಲದ ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕುವ ಜೊತೆಗೆ ಮರೀಚಿಕೆಯಾಗಿರುವ ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ 2023ರ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನಿಶ್ಚಿತ. ಬೆಂಬಲಿಗರು ಮತ್ತು ಕಾರ್ಯಕರ್ತರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ವಿನಂತಿಸಿದರು.

ಎಲ್.ಆರ್.ಶಿವರಾಮೇಗೌಡರ ಪುತ್ರ ಚೇತನ್‌ಗೌಡ, ಕೆಪಿಸಿಸಿ ಸದಸ್ಯ ಬಿದರಕೆರೆ ಮಂಜೇಗೌಡ, ಮುಖಂಡರಾದ ಚಿಣ್ಯ ಕರಿಯಣ್ಣ, ಪಾಳ್ಯರಘು, ಬೊಮ್ಮೇಗೌಡ, ನಾರಾಯಣಬಾಬು, ಗಂಗವಾಡಿ ಶಿವರಾಮು, ಸಿದ್ದಲಿಂಗಯ್ಯ, ಪುಟ್ಟೇಗೌಡ, ಮಹದೇವ, ಹೇಮರಾಜು, ಪ್ರಕಾಶ್‌ಗೌಡ, ಶ್ರೀನಿವಾಸ್, ಪುಟ್ಟೇಗೌಡ ಹಾಜರಿದ್ದರು.

English summary
Some local JDS leaders used Nikhil Kumaraswamy to finish my political career in Mandya, said former MLA Shivarame Gowda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X