ಅನಾರೋಗ್ಯದಿಂದ ಮೃತಪಟ್ಟ ಮಗಳ ಶವದೊಂದಿಗೆ ಅಸ್ವಸ್ಥ ತಾಯಿ!
ಮಂಡ್ಯ, ಮೇ 31: ಅನಾರೋಗ್ಯದಿಂದ ಮೃತಪಟ್ಟ ಮಗಳ ಶವದೊಂದಿಗೆ ಅಸ್ವಸ್ಥ ತಾಯಿ ನಾಲ್ಕು ದಿನಗಳನ್ನು ಕಳೆದ ಹೃದಯ ವಿದ್ರಾವಕ ಘಟನೆ ನಗರದ ಹಾಲಹಳ್ಳಿ ನ್ಯೂತಮಿಳು ಸ್ಲಂನಲ್ಲಿ ನಡೆದಿದೆ.
ನ್ಯೂ ತಮಿಳು ಸ್ಲಂನಲ್ಲಿ ವಾಸವಾಗಿದ್ದ ರೂಪ (32) ಎಂಬಾಕೆಯೇ ಮೃತಪಟ್ಟವಳಾಗಿದ್ದು, ಈಕೆಯ ಶವದೊಂದಿಗೆ ಅಸ್ವಸ್ಥ ತಾಯಿ ನಾಗಮ್ಮ (55) ನಾಲ್ಕು ದಿನಗಳನ್ನು ಕಳೆದವರಾಗಿದ್ದಾರೆ.
ಗೃಹರಕ್ಷಕ ದಳದ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ರೂಪ ಹತ್ತು ವರ್ಷದ ಹಿಂದೆ ವಿವಾಹವಾಗಿದ್ದು, ಈಕೆಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ಕಳೆದ ಐದು ವರ್ಷದಿಂದ ಗಂಡ ಶ್ರೀನಿವಾಸ ಮತ್ತು ಮಕ್ಕಳು ಈಕೆಯಿಂದ ದೂರಾಗಿದ್ದರು. ತಾಯಿ ನಾಗಮ್ಮಳೊಂದಿಗೆ ಹಾಲಹಳ್ಳಿಯ ನ್ಯೂ ತಮಿಳು ಸ್ಲಂನಲ್ಲಿ ರೂಪ ವಾಸವಾಗಿದ್ದಳು.

ತಾಯಿ-ಮಗಳ ನಡುವೆ ಆಗಾಗ್ಗೆ ಸಣ್ಣ ಪುಟ್ಟ ಜಗಳ ನಡೆಯುತ್ತಿತ್ತಾದರೂ, ನಂತರ ಇಬ್ಬರೂ ಹೊಂದಿಕೊಂಡು ಹೋಗುತ್ತಿದ್ದರು. ಕಳೆದ ನಾಲ್ಕು ದಿನಗಳಿಂದ ರೂಪ ಕಾಣಿಸದಿರುವುದನ್ನು ಸ್ಥಳೀಯರು ಗಮನಿಸಿದ್ದರು.
ಆದರೂ ಈ ಬಗ್ಗೆ ಪ್ರಶ್ನೆ ಮಾಡಿರಲಿಲ್ಲ. ಮನೆಯಿಂದ ಇಂದು ವಾಸನೆ ಬರುತ್ತಿದ್ದುದ್ದನ್ನು ಕಂಡ ಅಕ್ಕ ಪಕ್ಕದ ನಿವಾಸಿಗಳು ಮನೆಯ ಬಳಿ ಬಂದು ನೋಡಲಾಗಿ ಅಸ್ವಸ್ಥ ತಾಯಿ ಅಳುತ್ತಾ ತನ್ನ ಮಗಳ ಶವದ ಬಳಿಯೇ ಕುಳಿತಿದ್ದಳೆನ್ನಲಾಗಿದೆ. ನೆರೆಹೊರೆಯ ನಿವಾಸಿಗಳು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ತಕ್ಷಣ ಸ್ಥಳೀಯರು ಈಕೆಯ ಸಹೋದರ ಅನಂತಕುಮಾರ್ ಮಾಹಿತಿ ನೀಡಿದರು. ಅನಂತಕುಮಾರ್ ಈ ದೃಶ್ಯವನ್ನು ಕಂಡು ಪೊಲೀಸರಿಗೆ ಸುದ್ಧಿ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರು. ಈ ಸಂಬಂಧ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications