ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚಿಸಿದರೆ ವಿಶೇಷ ಕಾಣಿಕೆ: ನೀವೂ ಭಾಗವಹಿಸಿ
ಮಂಡ್ಯ, ಡಿಸೆಂಬರ್ 21: ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎರಡನೇ ದಿನಕ್ಕೆ ಕಾಲಿಟ್ಟಿದೆ. ಪ್ರಧಾನ ವೇದಿಕೆಯಲ್ಲಿ ವಿವಿಧ ಸಾಹಿತ್ಯ ಚಟುವಟಿಕೆಗಳು, ಗೋಷ್ಠಿಗಳು ನಡೆಯುತ್ತಿದ್ದರೆ, ಸಾಹಿತ್ಯ ಸಮ್ಮೇಳನದ ವಸ್ತು ಪ್ರದರ್ಶನ ಮಳಿಗೆಯೊಂದರಲ್ಲಿ 'ಸ್ವರಚಿತ ಕವನ ಓದಿ - ಉಚಿತ ಸಸ್ಯ ಕಾಣಿಕೆ ಪಡೆಯಿರಿ' ಎಂಬ ವಿನೂತನ ಕಾರ್ಯಕ್ರಮ ಸಾಹಿತ್ಯಾಸಕ್ತರ ಗಮನ ಸೆಳೆಯುತ್ತಿದೆ.
ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ಸಾಹಿತ್ಯದ ಜತೆಗೆ ಪರಿಸರ ಸಂರಕ್ಷಣೆ ಅರಿವಿಗೆ ಒತ್ತು ನೀಡುವುದು ಉದ್ದೇಶವಾಗಿದೆ ಸಾಹಿತ್ಯ ಕೃಷಿಯಲ್ಲಿ ತೊಡಗಿರುವವರು ಕವನ ರಚಿಸಿ ಗಿಡಗಳನ್ನು ಪಡೆದುಕೊಳ್ಳುತ್ತಿರುವುದು ವಿಶೇಷವಾಗಿದೆ. ಕವನ ರಚನೆ ಹೇಗೆಯೋ ಹಾಗೆಯೇ ಸಸಿಯನ್ನು ನೀರೆರೆದು ಬೆಳೆಸುವುದು ಕೂಡ ಹೀಗಾಗಿಯೇ ಕವನ ಓದಿದ ನೆನಪಿಗೆ ಪಡೆದ ಸಸಿಯನ್ನು ಆರೈಕೆ ಮಾಡಿ ಬೆಳೆಸುವುದು ಬಹುಮುಖ್ಯವಾಗುತ್ತದೆ. ಆ ಮೂಲಕ ಸಾಹಿತ್ಯ ಸಮ್ಮೇಳನದ ಈ ಕ್ಷಣ ಹಸಿರಾಗಿ ಉಳಿಯಲು ಸಾಧ್ಯವಾಗುತ್ತಿದೆ.

ಸದ್ಯ ಸಾಹಿತ್ಯ ಸಮ್ಮೇಳನದ ವಸ್ತು ಪ್ರದರ್ಶನ ಮಳಿಗೆಯ ಸಂಖ್ಯೆ 76ರಲ್ಲಿ 'ಸ್ವರಚಿತ ಕವನ ಓದಿ - ಉಚಿತ ಸಸ್ಯ ಕಾಣಿಕೆ ಪಡೆಯಿರಿ' ಎಂಬ ವಿನೂತನ ಕಾರ್ಯಕ್ರಮ ನಡೆಯುತ್ತಿದ್ದು, ಮೊದಲ ದಿನವೇ ಅದ್ಧೂರಿ ಸ್ವಾಗತ ದೊರೆತಿದ್ದು, ಸಾಹಿತ್ಯಾಭಿಮಾನಿಗಳ ಪ್ರತಿಕ್ರಿಯೆಯೂ ಉತ್ತಮವಾಗಿತ್ತು. ಬೆಂಗಳೂರಿನ ಸಸ್ಯಯಜ್ಞ ತಂಡವು ಜಿಲ್ಲಾ ಯುವ ಬರಹಗಾರರ ಬಳಗದ ಸಹಯೋಗದಲ್ಲಿ ಈ ಅಭಿಯಾನ ಹಮ್ಮಿಕೊಂಡಿರುವುದು ವಿಶೇಷವಾಗಿದೆ.
ಮೊದಲ ದಿನ ನಾಡಿನ ವಿವಿಧ ಭಾಗದಿಂದ ಬಂದಿದ್ದ ಸುಮಾರು 290 ಕವಿ-ಕವಯತ್ರಿಯರು ಸ್ವರಚಿತ ಕವನ ವಾಚಿಸಿ 'ಔಷಧೀಯ' ಸಸ್ಯಗಳನ್ನು ಕಾಣಿಕೆಯಾಗಿ ಪಡೆದ ಸಂಭ್ರಮಿಸಿದ್ದಾರೆ. 'ಪರಿಸರ ಸಂರಕ್ಷಣೆ, ಕಾವ್ಯ ಪ್ರಸಾರ ಹಾಗೂ ಕವಿಗಳಿಗೆ ಪ್ರೋತ್ಸಾಹ' ಮಾಡುವ ಆಶಯದಿಂದ ಕವನ ವಾಚಿಸಿದ ಪ್ರತಿಯೊಬ್ಬ ಕವಿಗೂ 'ಔಷಧೀಯ ಸಸ್ಯಗಳ' ಕಾಣಿಕೆಯಾಗಿ ಕೊಡುವಾಗ 'ಸಸ್ಯಯಜ್ಞ ತಂಡ'ದ ರೂವಾರಿ ಹಾಗೂ ಸಾಹಿತಿ ಸಂತೋಷ್ ಮಡೇನೂರು ಅವರು ಸಸ್ಯದ ಹೆಸರು, ಅದರ ಉಪಯುಕ್ತತೆ, ಮಹತ್ವ ಕುರಿತು ಮಾಹಿತಿ ನೀಡುವುದು ವಿಶೇಷವಾಗಿದೆ.

ಪರಿಸರ ಸರಂಕ್ಷಣೆ ಮತ್ತು ಕನ್ನಡ ಪರ ಕಾಳಜಿಯನ್ನು ಬೆಳೆಸುವ ಮಹತ್ವದ ಈ 'ಸಸ್ಯ-ಕಾವ್ಯ ಅಭಿಯಾನಕ್ಕೆ ಯುವ ಬರಹಗಾರರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಅಧ್ಯಕ್ಷತೆಯಲ್ಲಿ ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನ ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ಪ್ರಸನ್ನ ಕುಮಾರ್ ಹಾಗೂ ನಿವೃತ್ತ ಯೋಧ ಮೂರ್ತಿ ಕೆರಗೋಡು ಚಾಲನೆ ನೀಡಿದ್ದಾರೆ. 'ಔಷಧೀಯ ಸಸ್ಯ ಮಾರಾಟಕ್ಕಲ್ಲ - ಮಾಹಿತಿಗಾಗಿ' ಎಂಬ ಧ್ಯೇಯ ಹೊಂದಿರುವ ಈ 'ಸಸ್ಯ - ಕಾವ್ಯ ಅಭಿಯಾನ ಪ್ರತಿದಿನ ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯುತ್ತಿದೆ.
ಕವಿಗಳಿಗೆ ಔಷಧಿ ಗಿಡಗಳ ವಿತರಣೆ
ಈ ವಿಶಿಷ್ಟ, ವಿಭಿನ್ನ ಕಾರ್ಯಕ್ರಮದ ಕುರಿತಂತೆ ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ 'ಸಾಹಿತ್ಯ ಸಮ್ಮೇಳನದಲ್ಲಿ ಯುವ ಕವಿಗಳಿಗೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ಹಾಗೂ ಔಷಧೀಯ ಸಸ್ಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಕವಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು' ಎಂಬ ಕಿವಿಮಾತುಗಳನ್ನು ಹೇಳಿದ್ದಲ್ಲದೆ, ಯುವ ಕವಿಗಳಿಗೆ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.
ಇದೇ ವೇಳೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್, ಕವಯತ್ರಿ ಮಂಜುಳಾ ಬನ್ನೂರು, ಸಾಹಿತಿಗಳಾದ ಕದಲಗೆರೆ ಜಯರಾಂ, ಕ್ರಾಂತಿಸಿಂಹ, ಸಬ್ಬನಹಳ್ಳಿ ಶಶಿಧರ್, ಲೋಕೇಶ್ ಕಲ್ಕುಣಿಕೆ, ಉಪನ್ಯಾಸಕ ಡಾ. ರಾಮಲಿಂಗೇಶ್ವರ (ಸಿಸಿರಾ), ಶ್ರೀರಂಗಪಟ್ಟಣದ ಪರಿಸರವಾದಿ ಮತ್ತು ಗಾಯಕ ಪರಿಸರ ರಮೇಶ್, ಚಲನಚಿತ್ರ ಸಹನಟ ಕಬ್ಬನಹಳ್ಳಿ ಶಿವಕುಮಾರ್ ಅವರನ್ನು ಸನ್ಮಾನಿಸಲಾಗಿದೆ. ಕವಿಗಳಿಗೆ ಔಷಧೀಯ ಸಸ್ಯಗಳಾದ ಸುಗಂಧಿ ಮೂಲ, ಮಂಗರ ಬಳ್ಳಿ, ಮಾಕಂದಿ ಬೇರು, ಒಂದೆಲಗ, ಹಿಪ್ಪಲಿ, ದಾಸವಾಳ, ತುಳಸಿ, ದೊಡ್ಡಪತ್ರೆ, ಕಾಡು ಕೊತ್ತಂಬರಿ, ಬ್ರಾಹ್ಮಿ, ನೆಲಬೇವು, ಕಾಡು ಬಸಳೆ, ಲೋಳೆಸರ, ರೋಸ್ ಮೇರಿ, ಇನ್ಸುಲಿನ್ ಗಿಡಗಳನ್ನು ವಿತರಿಸಲಾಗುತ್ತಿದೆ.












Click it and Unblock the Notifications